Asianet Suvarna News Asianet Suvarna News

ಕೋರ್ಟ್ ಬಗ್ಗೆ ಅಸಮಾಧಾನ, ಪೊಲೀಸರಿಗೂ ಎಚ್ಚರಿಕೆ: ಹಿಜಾಬ್ ಪರ PFI ಶಕ್ತಿ ಪ್ರದರ್ಶನದಲ್ಲಿ ವಿವಾದ

ಹಿಜಾಬ್ ವಿದ್ಯಾರ್ಥಿನಿಯರ ಪರ ನಿಂತು ಹೋರಾಟಕ್ಕೆ ಸಾಥ್ ಕೊಟ್ಟಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದೀಗ ನೇರವಾಗಿ ಅಖಾಡಕ್ಕೆ ಇಳಿದಿದೆ.

Mangaluru PFI vows to stand with Muslim girl students against hijab ban rbj
Author
Bengaluru, First Published Jul 16, 2022, 7:10 PM IST

ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ‌ಮಂಗಳೂರು

ಮಂಗಳೂರು, ಜುಲೈ.16):
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಿಜಾಬ್ ವಿದ್ಯಾರ್ಥಿನಿಯರನ್ನ ಸೇರಿಸಿಕೊಂಡು ಮಂಗಳೂರಿನಲ್ಲಿ ಗರ್ಲ್ಸ್ ಕಾನ್ಫರೆನ್ಸ್ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿತು. ಅಲ್ಲದೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಿರುದ್ಧವೇ ಹೇಳಿಕೆ ನೀಡುವ ಮೂಲಕ ಸಿಎಫ್ ಐ ಸಮಾವೇಶ ಹೊಸ ವಿವಾದ ಸೃಷ್ಟಿಸಿದ್ದು, ಪೊಲೀಸರಿಗೂ ನೇರ ನೇರಾ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. 

ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಹಿಜಾಬ್ ವಿವಾದ ಸದ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಮುಂದಿನ ವಾರದಿಂದ ಸುಪ್ರೀಂ ಕೋರ್ಟ್ ಹಿಜಾಬ್ ವಿಚಾರಣೆ ಆರಂಭಿಸಲಿದ್ದು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಈ ನಡುವೆ ಕೋರ್ಟ್ ವಿಚಾರಣೆ ಮಧ್ಯೆಯೇ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತೊಂದು ಸುತ್ತಿನ ಅಖಾಡ ಸಿದ್ದಪಡಿಸಿ ಫೀಲ್ಡಿಗಿಳಿದಿದೆ. ಪ್ರತೀ ಬಾರಿ ಹಿಜಾಬ್ ವಿದ್ಯಾರ್ಥಿನಿಯರ ಹಿಂದೆ ನಿಂತು ಬೆಂಬಲಿಸಿದ್ದ ಸಿಎಫ್ ಐ ಈ ಬಾರಿ ಬಹಿರಂಗವಾಗಿಯೇ ಹಿಜಾಬ್ ವಿದ್ಯಾರ್ಥಿನಿಯರಿಗೆ ಬೆಂಬಲ ಘೋಷಿಸಿ ಮಂಗಳೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದೆ. 

ಧರ್ಮ ದಂಗಲ್: ಮುಂದಿನ ವಾರ ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ವಿಚಾರಣೆ?

ಗರ್ಲ್ಸ್ ಕಾನ್ಫರೆನ್ಸ್ ಹೆಸರಿನಲ್ಲಿ ಹಿಜಾಬ್ ವಿದ್ಯಾರ್ಥಿನಿಯರ ಸಮಾವೇಶ ನಡೆಸಿದೆ. ಅಸಲಿಗೆ ನಗರದ ಪುರಭವನದಲ್ಲಿ ಸಮಾವೇಶ ನಡೆಸಲಷ್ಟೇ ಪೊಲೀಸ್ ಇಲಾಖೆ ಅನುಮತಿ ನೀಡಿದ್ದರೂ ಸಿಎಫ್ ಐ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರನ್ನ ಸೇರಿಸಿ ರ್ಯಾಲಿಗೆ ಮುಂದಾಯಿತಾದ್ರೂ ಮಂಗಳೂರು ಕಮಿಷನರ್ ಶಶಿಕುಮಾರ್ ತಡೆದ ಬಳಿಕ ಪುರಭವನದಲ್ಲಿ ಕೇವಲ ಸಮಾವೇಶ ನಡೆಸಲಾಯ್ತು.

ಈ ಸಮಾವೇಶದಲ್ಲಿ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜೀದ್, ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಉಪಸ್ಥಿತಿಯಿದ್ದು, ವೇದಿಕೆಯಲ್ಲಿ ‌ಮುಖ್ಯ ಅತಿಥಿಗಳಾಗಿ ಉಡುಪಿ ಹಿಜಾಬ್ ವಿವಾದದ ಆರು ಮಂದಿ ವಿದ್ಯಾರ್ಥಿನಿಯರು ಕಾಣಿಸಿಕೊಂಡರು. ಆಲಿಯಾ ಅಸಾದಿ ಸೇರಿ ಆರು ವಿದ್ಯಾರ್ಥಿನಿಯರು ಸಮಾವೇಶದ ವೇದಿಕೆಯಲ್ಲಿ ಹಾಜರಿದ್ದರು‌.

ಅಲ್ಲದೇ ಮಂಗಳೂರಿನ ರಥಬೀದಿ ಕಾಲೇಜಿನ ಹಿಜಾಬ್ ವಿವಾದದ ಕೇಂದ್ರ ಬಿಂದು ಹಿಬಾ ಶೇಖ್, ಮಂಗಳೂರಿನ ವಿವಿ ಕಾಲೇಜು ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಕೂಡ ಹಾಜರಾಗಿದ್ದಳು.‌ ಜೊತೆಗೆ ದೆಹಲಿಯ ಜಾಮಿಯಾ ಮಿಲಿಯಾ ಸಿಎಫ್ ಐ ಅಧ್ಯಕ್ಷೆ ಫೌಝಿಯಾ ಉಪಸ್ಥಿತಿಯಿದ್ದು, ಇದೇ ವೇಳೆ ಹಿಜಾಬ್ ಹೋರಾಟದ ಕುರಿತ ಕಿರು ಪುಸ್ತಕ ಕೂಡ ಬಿಡುಗಡೆ ಮಾಡಲಾಯ್ತು. ಇದೇ ವೇಳೆ ಮಾತನಾಡಿದ ಸಿಎಫ್ ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ಹಿಜಾಬ್ ಪರವಾದ ಸಮಾವೇಶದಲ್ಲೂ ನ್ಯಾಯಾಲಯಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರ್ಯಾಲಿ ತಡೆದ ಪೊಲೀಸರಿಗೆ ಎಚ್ಚರಿಕೆ ನೀಡಿದ ಅಥಾವುಲ್ಲಾ,ಪೊಲೀಸರೇ ನಿಮ್ಮ ಬ್ಯಾರಿಕೇಡ್, ಟಿಯರ್ ಗ್ಯಾಸ್, ಬುಲೆಟ್ ಎಲ್ಲಾ ಸಮುದ್ರಕ್ಕೆ ಎಸೆವ ದಿನ ಬರಲಿದೆ. ಇವತ್ತು ನಮ್ಮನ್ನ ತಡೆದ ನಿಮಗೆ ಒಂದು ದಿನ ಬರಲಿದೆ.‌ಹಿಜಾಬ್ ವಿರುದ್ದ ಕರ್ನಾಟಕ ಹೈಕೋರ್ಟ್ ಅಸಂವಿಧಾನಿಕ ತೀರ್ಪು ನೀಡಿದೆ. 

ಇದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋದ್ರೆ ಕೋರ್ಟ್ ಕೂಡ ತುರ್ತು ವಿಚಾರಣೆ ನಿರಾಕರಿಸಿತು.‌ಈ ಸುಪ್ರೀಂ ಕೋರ್ಟ್ ‌ನಡೆಯ ಬಗ್ಗೆಯೂ ನಮಗೆ ಅಸಮಾಧಾನ ಇದೆ. ಕೆಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯರಾತ್ರಿ ಬಾಗಿಲು ತೆರೆಯುತ್ತೆ. ಸಿಟಿ ರವಿ ರಾಜ್ಯದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಮಾತನಾಡ್ತಿದಾರೆ.‌ಆದರೆ ಹೀಗೆ ಮಾಡಿದ್ರೆ ನಿಮ್ಮ ಸರ್ಕಾರ ಕೂಡ ಉರುಳುತ್ತೆ.‌ ಹಿಜಾಬ್ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಫೇಲ್ ಆದ್ರೂ ಸೃಷ್ಟಿಕರ್ತನ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಸಿಎಫ್ ಐ ಯಾವತ್ತೂ ಹಿಜಾಬ್ ಹೋರಾಟಗಾರ್ತಿಯರ ಪರವಾಗಿ ಇರಲಿದೆ. ಸಿನಿಮಾ ನೋಡಿ ಕಣ್ಣೀರು ಹಾಕುವ ಸಿಎಂ ಹಿಜಾಬ್ ವಿದ್ಯಾರ್ಥಿನಿಯರ ಪರ ನಿಲ್ಲುತ್ತಿಲ್ಲ. ಇವತ್ತು ನಮ್ಮ ರ್ಯಾಲಿ ತಡೆದರೂ ನಮ್ಮ ಧ್ವನಿ ತಡೆಯಲು ಸಾಧ್ಯವಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ. 

'ಹಿಜಾಬ್ ಹಕ್ಕು ಪಡೆಯೋ ಹೋರಾಟವನ್ನ ಯಾರೂ ತಡೆಯಲು ಸಾಧ್ಯವಿಲ್ಲ'
Mangaluru PFI vows to stand with Muslim girl students against hijab ban rbj

ಇನ್ನು ಇದೇ ವೇಳೆ ಕರಾವಳಿಯ ಹಿಜಾಬ್ ಹೋರಾಟಗಾರ್ತಿಯರು ಕೂಡ ವೇದಿಕೆಯಲ್ಲಿದ್ದು, ಉಡುಪಿಯ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ನಮ್ಮ ಹೋರಾಟ ತಡೆಯಲು ಸಾಧ್ಯವಿಲ್ಲ ಅಂದರು. 

ನಮ್ಮ ಕಾಲೇಜಿನಿಂದ ಮೊದಲು ಈ ಹಿಜಾಬ್ ವಿವಾದ ಆರಂಭವಾಯ್ತು. ಮುಂದಿನ ವಾರದಿಂದ ಸುಪ್ರೀಂ ಕೋರ್ಟ್ ನಲ್ಲಿ ಹಿಜಾಬ್ ವಿಚಾರಣೆ ಶುರುವಾಗುತ್ತೆ. ಹೀಗಾಗಿ ನಾವು ನಮ್ಮ ಹಕ್ಕು ಮತ್ತೆ ನಮಗೆ ಸಿಗುವ ನಂಬಿಕೆಯಲ್ಲಿದ್ದೇವೆ.‌ ನಾನೀಗ ನೈಜ ಭಾರತವನ್ನು ನೋಡಿದ್ದೇನೆ, ಅದು ಹಿಜಾಬ್ ಹೋರಾಟದ ಬಳಿಕ. ನಾವೀಗ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ‌ಮಾಡುತ್ತಿದ್ದೇವೆ. ನಾನು ನಮ್ಮ ಕಾಲೇಜು ಹಿಜಾಬ್ ಪರಿಗಣಿಸುತ್ತೆ ಅಂದುಕೊಂಡಿದ್ದೆ, ಆದರೆ ಹಾಗಾಗಲಿಲ್ಲ‌. ನಾವು ಅಲ್ಲಾನ ಮೇಲೆ ನಂಬಿಕೆ ಇಟ್ಟಿದ್ದೇವೆ, ಯಾವುದೇ ಭಯ ನಮಗಿಲ್ಲ. ನಾವು ಏಳೂ ಜನ ಈ ಹೋರಾಟದ ಬಳಿಕ ತಾಳ್ಮೆ ಕಲಿತಿದ್ದೇವೆ. ನಾವು ನಮ್ಮ ಹಕ್ಕುಗಳನ್ನು ವಾಪಸ್ ಪಡೆಯಲೇಬೇಕು.

ನಮ್ಮ ಸಂವಿಧಾನದಲ್ಲಿ ಇರೋ ಹಿಜಾಬ್ ಹಕ್ಕನ್ನು ಪಡೆದೇ ಪಡೆಯುತ್ತೇವೆ. ಅದನ್ನ ಯಾರೂ ನಮ್ಮಿಂದ ತಡೆಯಲು ಸಾಧ್ಯವೇ ಇಲ್ಲ. ಸುಪ್ರೀಂ ಕೋರ್ಟ್ ನಮ್ಮ ಪರ ತೀರ್ಪು ನೀಡೋ ವಿಶ್ವಾಸವಿದೆ‌. ಯು.ಪಿ ಯ ಅಫ್ರೀನ್ ಫಾತಿಮಾ ಮನೆ ಮೇಲೆ ಬುಲ್ಡೋಜರ್ ನುಗ್ಗಿಸಿದಾಗ ನೋವಾಯ್ತು. ನಾವು ನಮ್ಮ ಪೋಷಕರು ಮತ್ತು ಕ್ಯಾಂಪಸ್ ಫ್ರಂಟ್ ಗೆ ಧನ್ಯವಾದ ಸಲ್ಲಿಸ್ತೇವೆ. ಅವರು ಆರಂಭದಿಂದಲೂ ನಮ್ಮ ಜೊತೆ ನಿಂತಿದ್ದಾರೆ. ನಮ್ಮ ಶಿಕ್ಷಣ ನಿಂತಿದೆ, ಟಿಸಿ ಕೊಡಬೇಕಾದ್ರೂ ಹಿಜಾಬ್ ತೆಗೆಯಲು ಹೇಳ್ತಾರೆ. ಟಿಸಿ ಪಡೆಯಲು ಕೂಡ ನಾವು ತುಂಬಾ ಸಮಸ್ಯೆ ಪಟ್ಟಿದ್ದೇವೆ. ಆದರೆ ನಾವು ಮತ್ತೆ ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೀತೀವಿ‌. ನಮ್ಮ ಜೊತೆ ಅಲ್ಲಾ ಇದಾರೆ, ಹಾಗಾಗಿ ನಮಗೆ ಭಯವಿಲ್ಲ. ನಾವು ಎಲ್ಲಾ ಗೌರವಗಳ ಜೊತೆಗೆ ಹಿಜಾಬ್ ಧರಿಸ್ತೇವೆ ಎಂದರು.

'ಹಿಜಾಬ್ ಹೋರಾಟದಲ್ಲಿ ನೀವು ಒಬ್ಬಂಟಿಯಲ್ಲ, ನಾವಿದ್ದೇವೆ'
Mangaluru PFI vows to stand with Muslim girl students against hijab ban rbj

ಇದೇ ವೇಳೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಷ್ಟಾಧ್ಯಕ್ಷ ಸಾಜಿದ್, ಹಿಜಾಬ್ ಹೋರಾಟದಲ್ಲಿ ನೀವು ಒಬ್ಬಂಟಿಯಲ್ಲ. ತಮ್ಮ ಹಕ್ಕುಗಳಿಗಾಗಿ ಕರ್ನಾಟಕದ ಯುವತಿಯರು ಹೋರಾಡ್ತಿದಾರೆ. ಆರ್ ಎಸ್ ಎಸ್ ಮತ್ತು ಹಿಂದುತ್ವದ ಫ್ಯಾಸಿಸಮ್ ವಿರುದ್ದ ಈ ಹೋರಾಟ. ಒಂದು ಕೈಯ್ಯಲ್ಲಿ ಓದು ಮತ್ತೊಂದು ಕೈಯ್ಯಲ್ಲಿ ಹೋರಾಟ ನಡೆಯಲಿದೆ. ಆರ್ ಎಸ್ ಎಸ್ ಹಿಂದು ರಾಷ್ಟ್ರ ಮಾಡಲು ಯತ್ನಿಸ್ತಾ ಇದೆ. ಹಿಂದುತ್ವ ಮತ್ತು ಹಿಂದೂ ಧರ್ಮ ಬೇರೆ ಬೇರೆ, ಅದರ ಐಡಿಯಾಲಾಜಿ ಬೇರೆ. ಹಿಂದುತ್ವ ಎನ್ನುವುದು ಈ ದೇಶದ ಒಂದು ಪಾಲಿಟಿಕಲ್ ಐಡಿಯಾಲಜಿ. ಇಂಥ ಒಂದು ದೇಶ ನಿರ್ಮಿಸಲು ಆರ್ ಎಸ್ ಎಸ್ ಪ್ರಯತ್ನ ಪಡ್ತಾ ಇದೆ.‌ 

ದೇಶದಲ್ಲಿ ಚುನಾಯಿತ ಸರ್ಕಾರ ಬಿಜೆಪಿಯೇ ಆದರೂ ಅದರ ಹಿಂದೆ ಇರೋದು ಆರ್ ಎಸ್ ಎಸ್. ನಮ್ಮ ಸಂವಿಧಾನದಂತೆ ಈ ದೇಶ ನಡೆಯುತ್ತಿಲ್ಲ, ಆರ್ ಎಸ್ ಎಸ್ ನ ಸಂವಿಧಾನದಂತೆ ನಡೀತಾ ಇದೆ. ದಕ್ಷಿಣ ಭಾರತದ ಕಾಲೇಜುಗಳಲ್ಲಿ ಸಿಎಫ್ ಐ ಮೇಲೆ ಕಣ್ಣಿಡಲು ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ ಕೇವಲ ದಕ್ಷಿಣ ಭಾರತ ಮಾತ್ರ ಅಲ್ಲ, ಇಡೀ ದೇಶದ ಮೇಲೆ ಕಣ್ಣಿಡಿ. ಕರ್ನಾಟಕದಲ್ಲಿ ಪಠ್ಯದಲ್ಲಿ ಬಹಳಷ್ಟು ಚಾಪ್ಟರ್ ಕಿತ್ತು ಹಾಕಿದ್ದಾರೆ. ಈ ಮೂಲಕ ಆರ್ ಎಸ್ ಎಸ್ ದೇಶದ ಇತಿಹಾಸ ಬದಲಿಸಲು ಹೊರಟಿದೆ. ಕರ್ನಾಟಕದಲ್ಲಿ ಹೆಡ್ಗೇವಾರ್ ಪಠ್ಯವನ್ನ ಪಾಠದಲ್ಲಿ ಸೇರಿಸಲಾಗಿದೆ.‌ಆದರೆ ಈ ಹೆಡ್ಗೇವಾರ್ ಅದ್ಯಾವ ಐಡಿಯಲ್ ಲೀಡರ್? ಅಂತ ಪ್ರಶ್ನೆ ‌ಮಾಡಿದ್ದಾರೆ.

'ನಿಮ್ಮ ಮಕ್ಕಳು ರೌಡಿಗಳು, ಗೂಂಡಾಗಳು ಆಗ್ತಾರೆ'
Mangaluru PFI vows to stand with Muslim girl students against hijab ban rbj

ಸಮಾವೇಶದಲ್ಲಿ ಮಂಗಳೂರಿನ ವಿವಿ ಕಾಲೇಜು ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಮಾತನಾಡಿ, ನಮ್ಮ ಸಂವಿಧಾನ ಎಲ್ಲರಿಗೂ ಮಾತನಾಡುವ ಹಕ್ಕನ್ನು‌ ನೀಡಿದೆ. ಆದರೆ ನಮ್ಮ ಜಾಥಾವನ್ನು ಇಲ್ಲಿನ ಪೊಲೀಸರು ತಡೆದಿದ್ದಾರೆ. ಸರ್ಕಾರ ಒತ್ತಡ ಹಾಕಿ ತಡೆದಿದೆ, ನಿಮಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಂಡ್ರೆ ಭಯವಾ? ಎಷ್ಟೋ ಜಾಥಗಳು ಮಂಗಳೂರಿನಲ್ಲಿ ‌ನಡೆದಿದೆ, ನಮ್ಮ ಜಾಥ ಯಾಕೆ ತಡೆದ್ರೀ? ಈ ದೇಶದಲ್ಲಿ ನಾಲ್ಕು ವರ್ಷಗಳಲ್ಲಿ ಮಹಿಳಾ ದೌರ್ಜನ್ಯ 70% ಏರಿದೆ. ಹಿಜಾಬ್ ಗೆ ಹಾಕುವ ನಿಷೇಧವನ್ನು ಆಸಿಡ್ ಮೇಲೆ ಹಾಕಿದ್ರೆ ದೌರ್ಜನ್ಯ ‌ನಿಲ್ತಾ ಇತ್ತು.

ನಮ್ಮ ಕಾಲೇಜಿನ ಎಬಿವಿಪಿ ಕಾರ್ಯಕರ್ತರ ಪೋಷಕರು ಗಮನಿಸಿ. ನಿಮ್ಮ ಮಕ್ಕಳನ್ನ ‌ಗಮನಿಸದೇ ಇದ್ರೆ ಅವರು ರೌಡಿಗಳು, ಗೂಂಡಾಗಳು ಆಗ್ತಾರೆ. ಅವರು ತ್ರಿಶೂಲ ದೀಕ್ಷೆ ಪಡೆದು ವಿದ್ಯಾರ್ಥಿಗಳಿಗೆ ಚುಚ್ಚುತ್ತಿದ್ದಾರೆ. ನಮ್ಮನ್ನ ಕ್ಲಾಸಿನಿಂದ, ಲೈಬ್ರೆರಿಯಿಂದ ತುಳಿದು ಹೊರಗೆ ಹಾಕಬಹುದು. ಕೊನೆಗೆ ನಮ್ಮನ್ನ ದೇಶದಿಂದಲೂ ಹೊರಗೆ ಹಾಕಲು ಯತ್ನಿಸಬಹುದು. ಆದರೆ ನಾವು ಮತ್ತೆ ಕತ್ತಿಯಂತೆ ಹರಿತವಾಗಿ ಎದ್ದು ನಿಲ್ತೇವೆ ಅಂತ ಎಚ್ಚರಿಕೆ ನೀಡಿದ್ದಾಳೆ

ಶಾಸಕ ರಘುಪತಿ ಭಟ್ ಗೆ ಕೌಂಟರ್!: ಇನ್ನು ಸಮಾವೇಶಕ್ಕೂ ಮುನ್ನ ಕೆಲ ಅಣಕು ಪ್ರದರ್ಶನಗಳನ್ನು ಮಾಡಲಾಯ್ತು. ಇದರಲ್ಲಿ ಉಡುಪಿ ಶಾಸಕ ರಘುಪತಿ ಭಟ್ ವಿರುದ್ದವಾಗಿ ವಿದ್ಯಾರ್ಥಿನಿಯರು ಅಣಕು ಪ್ರದರ್ಶನ ಮಾಡಿ ತೋರಿಸಿದ್ರು. ಹೆಂಡತಿಯನ್ನ ಸುಪಾರಿ ಕೊಟ್ಟು ಕೊಲ್ಲಿಸಿದ ಶಾಸಕ ಅಂತ ರಘುಪತಿ ಭಟ್ ಫೋಟೋ ಬಳಸಿ ಅಣಕು ಪ್ರದರ್ಶನ ಮಾಡಲಾಯ್ತು. 

Follow Us:
Download App:
  • android
  • ios