ಮಂಗಳೂರು(ನ.3): ಬಾಲಕಿಯೊಬ್ಬಳು ತಾನು ಸಾಯುವೆನೆಂದು ತಿಳಿದ ಬಳಿಕ ತನ್ನ ದೇಹದಾನಕ್ಕೆ ಮುಂದಾಗುವ ಮೂಲಕ ಇತರರಿಗೆ ಮಾದರಿಯಾದ ಘಟನೆ ಕರ್ನಾಟಕ ಕರಾವಳಿ ನಗರ ಮಂಗಳೂರಿನಲ್ಲಿ ನಡೆದಿದೆ.

16 ವರ್ಷದ ಪ್ರತೀಕ್ಷಾ ಮಂಗಳೂರು ಅಶೋಕನಗರ ನಿವಾಸಿ ಕುಮಾರಸ್ವಾಮಿ ಕೊಕ್ಕಡ ಮತ್ತು ವಂದನಾ ಕುಮಾರಸ್ವಾಮಿ ಅವರ ಪುತ್ರಿಯಾಗಿದ್ದು ಶಾರದಾ ವಿದ್ಯಾಲಯದಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಆಕೆಗೆ ತನ್ನ ಹತ್ತನೇ ವರ್ಷದಲ್ಲೇ ಮೂಳೆಯ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇದರಿಂದ ಹಾಸಿಗೆ ಹಿಡಿದಿದ್ದ ಬಾಲಕಿ ಕುಟುಂಬದ ಸ್ನೇಹಿತರು, ಶಾಲೆಯ ಉಪಾದ್ಯಾಯರ ಸಹಕಾರದೊಡನೆ ಎರಡು ವರ್ಷದ ಬಳಿಕ ಗುಣಮುಖವಾಗಿದ್ದಳು. ಆದರೆ ಕೆಲವೇ ತಿಂಗಳ ಹಿಂದೆ ಮತ್ತೆ ಈ ಮಾರಕ ರೋಗ ಮರುಕಳಿಸಿತ್ತು. 

ಖಾಯಿಲೆಯೊಡನೆ ಹೋರಾಡುತ್ತಲೇ ವ್ಯಾಸಂಗ ಮುಂದುವರಿಸಿದ್ದ ಪ್ರತೀಕ್ಷಾ ಕಳೆದ ಗುರುವಾರ ಕೊನೆಯುಸಿರೆಳೆದಿದ್ದಾಳೆ. ಅನಾರೋಗ್ಯದಿಂದ ಶಾಲೆಗೆ ಹಾಜರಾಗಲು ಸಾಧ್ಯವಾಗದ ಪ್ರತೀಕ್ಷಾಗೆ ಶಾಲಾ ಶಿಕ್ಷಕರೇ ಮನೆಗೆ ಆಗಮಿಸಿ ಧೈರ್ಯ ಹೇಳಿದ್ದರು. ಈ ನಡುವೆ ತಾನು ಸಾಯುವುದು ಖಚಿತ ಎನ್ನುವುದು ಬಾಲಕಿಗೆ ತಿಳಿದು ಹೋಗಿತ್ತು.

ಅದೊಂದು ದಿನ ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಹತ್ತಿರಕ್ಕೆ ಕರೆದ ಪ್ರತೀಕ್ಷಾ "ಒಂದೊಮ್ಮೆ ನನ್ನ ಆತ್ಮ ದೇವರಿಗೆ ಪ್ರಿಯವಾದದ್ದಾದರೆ ನನ್ನ ದೇಹ ಅಂತ್ಯ ಸಂಸ್ಕಾರವನ್ನು ಮಾಡದೆ ಆಸ್ಪತ್ರೆಗೆ ದಾನ ನೀಡಿ" ಎಂದಿದ್ದಾಳೆ. ಇದನ್ನು ಕೇಳಿದ ಆಕೆಯ ತಾಯಿ ದಿಗ್ಭ್ರಮೆಯಿಂದ ಮೂರ್ಛೆ ಹೋಗಿದ್ದರು ಎನ್ನಲಾಗಿದೆ. ಆದರೆ ಹೀಗೆ ಹೇಳಿದ್ದ ಎರಡನೇ ದಿನವೇ ಮಗು ಪ್ರತೀಕ್ಷಾ ಸಾವಿಗೀಡಾಗಿದ್ದಾಳೆ.

ಇದೀಗ ಬಾಲಕಿಯ ಕೊನೆಯಾಸೆಯಂತೆಯೇ ಆಕೆಯ ಪೋಷಕರು, ಬಂಧುಗಳು ಬಾಲಕಿಯ ಮೃತದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದ್ದಾರೆ. "ಪ್ರತೀಕ್ಷಾಗೆ ವೈದ್ಯ ವೃತ್ತಿಯು ಬಹಳ ಇಷ್ಟವಾಗಿತ್ತು. ಆಕೆ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದಳು. ಇದಕ್ಕೆ ಸರಿಹೊಂದುವಂತೆ ಆಕೆ ದೇಹದಾನಕ್ಕಾಗಿ ಬೇಡಿಕೆ ಇಟ್ಟಿದ್ದಳೆಂದು ನಾವು ಭಾವಿಸಿದ್ದೇವೆ" ಬಾಲಕಿಯ ಪೋಷಕರು ಹೇಳಿದ್ದಾರೆ.

ಪ್ರತೀಕ್ಷಾ ತನ್ನ ಇಬ್ಬರು ಸೋದರರು ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾಳೆ.