ಸಿದ್ದು, ರವಿ, ಶೋಭಾ ಟ್ವೀಟರ್‌ ವಾರ್‌!

ಸಿದ್ದು, ರವಿ, ಶೋಭಾ ಟ್ವೀಟರ್‌ ವಾರ್‌| ಹಿಂಸೆಗೆ ಸಚಿವ ರವಿ ಪ್ರಚೋದನೆ, ಪೊಲೀಸರು ಮೌನ: ಸಿದ್ದು| ಬೆಂಕಿ ಹಚ್ಚುತ್ತೇವೆಂದ ಶಾಸಕ ಖಾದರ್‌ ನಿಮ್ಮ ಆಪ್ತರಲ್ಲವೇ: ರವಿ| ಹಿಂಸೆಯ ಬೆಂಕಿಯಲ್ಲಿ ಚಳಿ ಕಾಯಿಸಲು ನಿಮಗೆ ಉತ್ಸಾಹ: ಶೋಭಾ

Mangaluru CAA Protest Congress Leader Siddaramaiah BJP Leaders CT Ravi And shobha Karandlaje Tweet War

 ಬೆಂಗಳೂರು[ಡಿ.22]: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಬಿಜೆಪಿ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಶನಿವಾರ ಟ್ವೀಟರ್‌ ಸಮರ ನಡೆಯಿತು.

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ರಾಜ್ಯದಲ್ಲಿ ಹಿಂಸಾಚಾರಕ್ಕೆ ನಿರಂತರವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಹೀಗಿದ್ದರೂ ಪೊಲೀಸರು ಕಣ್ಣು ಮುಚ್ಚಿಕೊಂಡಿದ್ದಾರೆಂದರೆ ರಾಜ್ಯದಲ್ಲಿ ಸರ್ಕಾರ ಸತ್ತಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.

ಶನಿವಾರ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಹಿಂಸಾಚಾರಕ್ಕೆ ಪ್ರಚೋದನೆ ವಿರೋಧ ಪಕ್ಷದವರಿಂದ ಆಗುತ್ತಿಲ್ಲ. ಸಚಿವ ಸಿ.ಟಿ. ರವಿ ಅವರು ರಾಜ್ಯದಲ್ಲಿ ಹಿಂಸಾಚಾರಕ್ಕೆ ನಿರಂತರವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರೇ, ನಿಮ್ಮದೇ ಸಹೋದ್ಯೋಗಿ ಸಿ.ಟಿ.ರವಿ ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೂ ಪೊಲೀಸರು ಕಣ್ಣು ಮುಚ್ಚಿಕೊಂಡಿದ್ದಾರೆಂದರೆ ಸರ್ಕಾರ ಸತ್ತಿದೆ ಎಂದರ್ಥ ಎಂದು ದೂರಿದರು. ಅಲ್ಲದೆ, ಸಿ.ಟಿ.ರವಿಗೆ ಕಾನೂನು ಜ್ಞಾನ ಏನೂ ಇಲ್ಲ. ಆತ ಆರ್‌ಎಸ್‌ಎಸ್‌ ವ್ಯಕ್ತಿ. ಹೀಗಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಾನೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಟ್ವೀಟ್‌ಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದರೆ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿಕೆ ನೀಡಿದ ಶಾಸಕ ಯು.ಟಿ.ಖಾದರ್‌ ನಿಮ್ಮ ಆಪ್ತರಲ್ಲವೇ ಎಂದು ಸಿದ್ದರಾಮಯ್ಯ ಅವರನ್ನು ಸಿ.ಟಿ.ರವಿ ಪ್ರಶ್ನಿಸಿದರು.

ಪುಕ್ಕಲುತನ ಬಿಡಿ, ಧೈರ್ಯವಿದ್ದರೆ ನೇರವಾಗಿ ನನ್ನ ಜತೆ ಬಹಿರಂಗವಾಗಿ ಚರ್ಚೆಗೆ ಬನ್ನಿ, ಎಲ್ಲವನ್ನೂ ಚರ್ಚಿಸೋಣ. ರಾಜ್ಯದ ಜನತೆ ತೀರ್ಮಾನಿಸಲಿ, ನಿಜವಾದ ಕೋಮುವಾದಿಗಳು ಯಾರು ಎಂಬುದನ್ನು ಎಂದು ಸವಾಲು ಹಾಕಿದರು. ‘ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್‌ ಅವರ ಪ್ರಚೋದನಕಾರಿ ಹೇಳಿಕೆಯಿಂದ ಉಂಟಾದ ಹಿಂಸಾಚಾರದ ಬೆಂಕಿಯಲ್ಲಿ ಚಳಿ ಕಾಯಿಸಲು ತೋರಿದ ಉತ್ಸಾಹ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟರ್‌ನಲ್ಲಿ ಟೀಕಾಪ್ರಹಾರ ನಡೆಸಿದರು.

Latest Videos
Follow Us:
Download App:
  • android
  • ios