ಮಂಗಳೂರು ಸ್ಫೋಟ ಭಯೋತ್ಪಾದನಾ ಕೃತ್ಯ: ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟನೆ
ಮಂಗಳೂರಿನಲ್ಲಿ ನಿನ್ನೆ ನಡೆದಿರುವ ಕುಕ್ಕರ್ ಸ್ಫೋಟ ಪ್ರಕರಣ ಅನಿರೀಕ್ಷಿತವಾದದ್ದಲ್ಲ. ಇದೊಂದು ಉಗ್ರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
ಮಂಗಳೂರು (ನವೆಂಬರ್ 20, 2022): ಮಂಗಳೂರಿನಲ್ಲಿ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟದ ಬೆನ್ನಲ್ಲೇ ಆತಂಕ ಹೆಚ್ಚಾಗಿದ್ದು, ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿತ್ತಾ ಎಂಬ ಆತಂಕ ಹೆಚ್ಚಾಗಿತ್ತು. ಈಗ ನಿನ್ನೆ ನಡೆದ ಕುಕ್ಕರ್ ಸ್ಫೋಟ ಪ್ರಕರಣ ಉಗ್ರ ಕೃತ್ಯ ಎಂದು ಸಾಬೀತಾಗಿದೆ. ಈ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಶನಿವಾರ ನಡೆದ ಸ್ಫೋಟ ಪ್ರಕರಣದಲ್ಲಿ ಆಟೋದಲ್ಲಿ ಫ್ರೆಶರ್ ಕುಕ್ಕರ್ ಬಾಂಬ್ ಸ್ಪೋಟವಾಯ್ತು ಎನ್ನಲಾಗಿದ್ದು, ಮುಂಬೈ, ಹೈದರಾಬಾದ್ ಮಾದರಿ ಕುಕ್ಕರ್ ಬಾಂಬ್ ಸ್ಪೋಟದ ಸಂಚಿನ ಶಂಕೆಯಿದ್ದು, ಆಟೋದಲ್ಲಿ ಪತ್ತೆಯಾದ ಕುಕ್ಕರ್‌ನಲ್ಲಿ ಬ್ಯಾಟರಿ ಸರ್ಕ್ಯೂಟ್‌ಗಳು ಪತ್ತೆಯಾಗಿದ್ದವು.
ಈ ಸ್ಫೋಟ ಪ್ರಕರಣ ಸಂಬಂಧ ಟ್ವೀಟ್ ಮಾಡಿರುವ ಡಿಜಿಪಿ ಪ್ರವೀಣ್ ಸೂದ್, ಮಂಗಳೂರಿನಲ್ಲಿ ನಿನ್ನೆ ನಡೆದಿರುವ ಕುಕ್ಕರ್ ಸ್ಫೋಟ ಪ್ರಕರಣ ಅನಿರೀಕ್ಷಿತವಾದದ್ದಲ್ಲ. ಇದೊಂದು ಉಗ್ರ ಕೃತ್ಯ ಎಂದಿದ್ದಾರೆ. ಗಂಭೀರ ಹಾನಿ ಮಾಡಿರುವ ಉದ್ದೇಶದಿಂದ ನಡೆದಿರುವ ಉಗ್ರ ಕೃತ್ಯ. ಕರ್ನಾಟಕ ರಾಜ್ಯ ಪೊಲೀಸರು ಈ ಸಂಬಂಧ ಕೇಂದ್ರ ತನಿಖಾ ಏಜೆನ್ಸಿಗಳೊಂದಿಗೆ ಆಳವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಆಟೋದಲ್ಲಿ ಕುಕ್ಕರ್ ಸ್ಫೋಟ: ಮಂಗಳೂರಿನಲ್ಲಿ ನಡೆದಿತ್ತಾ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು?
ಅಲ್ಲದೆ, ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ಸ್ಫೋಟದ ಹಿಂದೆ ಭಯೋತ್ಪಾದಕ ಚಟುವಟಿಕೆಗಳ ಲಿಂಕ್ ಇರುವುದು ಕಂಡುಬಂದಿದೆ. ನಮ್ಮ ಪೊಲೀಸರು ಶೀಘ್ರದಲ್ಲಿ ಪ್ರಕರಣವನ್ನು ಭೇದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ವರದಿಯಾಗಿತ್ತು. ಮುಂಬೈ, ಹೈದರಾಬಾದ್ ಮಾದರಿ ಕುಕ್ಕರ್ ಬಾಂಬ್ ಸ್ಪೋಟದ ಸಂಚಿನ ಶಂಕೆಯಿದ್ದು, ಆಟೋದಲ್ಲಿ ಪತ್ತೆಯಾದ ಕುಕ್ಕರ್‌ನಲ್ಲಿ ಬ್ಯಾಟರಿ ಸರ್ಕ್ಯೂಟ್‌ಗಳು ಪತ್ತೆಯಾಗಿದ್ದವು. ಅಲ್ಲದೆ, ಕುಕ್ಕರ್‌ಗೆ ರಬ್ಬರ್ ಮ್ಯಾಟ್‌ಗಳನ್ನ ಬಳಸಿ ಡ್ಯೂರಸೆಲ್ ಬ್ಯಾಟರಿ ಮೂಲಕ ಸ್ಪೋಟಕ್ಕೆ ಯತ್ನಿಸಿದ ಶಂಕೆ ವ್ಯಕ್ತವಾಗಿತ್ತು. ಹಾಗೂ, ಕುಕ್ಕರ್‌ನಲ್ಲಿ ನಟ್-ಬೋಲ್ಟ್‌ಗಳನ್ನ ತುಂಬಿ ಸ್ಪೋಟಕ ತಯಾರಿಸಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಸ್ಫೋಟ ಪ್ರಕರಣದಲ್ಲಿ ಕಡಿಮೆ ತೀವ್ರತೆಯ ಸ್ಪೋಟಕಗಳನ್ನು ಬಳಸಿರುವ ಬಗ್ಗೆ ಅನುಮಾನವಿದ್ದು, ಪ್ರೆಶರ್ ಕುಕ್ಕರ್‌ನ ಮುಚ್ಚಳ ಛಿದ್ರಗೊಂಡು ಕೆಳಭಾಗಕ್ಕೆ ಡ್ಯಾಮೇಜ್ ಆಗಿಲ್ಲ ಎಂದು ತಿಳಿದುಬಂದಿದೆ. ಆಟೋ ರಿಕ್ಷಾದ ಒಳಭಾಗದಲ್ಲಿ ಭಾರಿ ಪ್ರಮಾಣದ ಹಾನಿಯಾಗಿದ್ದು, ಪ್ರಯಾಣಿಕ ಮತ್ತು ಆಟೋ ಚಾಲಕನಿಗೆ ಗಂಭೀರ ಗಾಯವಾಗಿತ್ತು. KA19 AA 8471 ಸಂಖ್ಯೆಯ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ನಿನ್ನೆ (ಶನಿವಾರ) ಸಂಜೆ 4.29ರ ಸುಮಾರಿಗೆ ಮಂಗಳೂರಿನ ನಾಗುರಿ ಬಳಿ ಸ್ಪೋಟವಾಗಿತ್ತು. ಸ್ಪೋಟದ ತೀವ್ರತೆಗೆ ಭಾರಿ ಪ್ರಮಾಣದಲ್ಲಿ ಹೊಗೆಯು ಹಬ್ಬಿದ್ದು, ಪ್ರಯಾಣಿಕ ಮತ್ತು ಚಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋದಲ್ಲಿ ನಿಗೂಢ ಪ್ರಯಾಣಿಕನ ಬಗ್ಗೆ ಅನುಮಾನ ಹೆಚ್ಚಾಗಿದ್ದು, ಆಟೋ ಪ್ರಯಾಣಿಕ ಉತ್ತರ ಪ್ರದೇಶದ ಕಾರ್ಮಿಕನಂತಿದ್ದ. ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದ್ದು, ಆತನಲ್ಲಿದ್ದ ಬಾಕ್ಸ್ ಮತ್ತು ಬ್ಯಾಗ್‌ನಿಂದಲೇ ನಿಗೂಢ ಸ್ಪೋಟವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Mangaluru: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಇಬ್ಬರಿಗೆ ಗಾಯ
ಎನ್‌ಐಎ, ಬಾಂಬ್ ನಿಷ್ಕ್ರಿಯ ದಳದಿಂದಲೂ ತನಿಖೆ
ಮಂಗಳೂರಿನ ನಾಗುರಿ ಬಳಿ ಆಟೋ ರಿಕ್ಷಾ ಸ್ಪೋಟ ಪ್ರಕರಣ ಸಂಬಂಧ ಎನ್‌ಐಎ ತಂಡ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಬಾಂಬ್ ನಿಷ್ಕ್ರಿಯ ದಳ ಸಹ ಆಗಮಿಸಿದ್ದು, ಘಟನಾ ಸ್ಥಳದ ಸುತ್ತಮುತ್ತ ಶ್ವಾನ ದಳದ ಪರಿಶೀಲನೆ ನಡೆಸುತ್ತಿದೆ. ಯಾವುದಾದರೂ ಲೋಹದ ವಸ್ತುಗಳು ಸಿಗುತ್ತಾ ಅಂತ ಮೆಟಲ್ ಡಿಟೆಕ್ಟರ್ ಮೂಲಕ ಪತ್ತೆ ಕಾರ್ಯ ನಡೆಸುತ್ತಿದೆ. ರಸ್ತೆ ಬದಿಯ ಹಳ್ಳ, ಪೊದೆಗಳಲ್ಲಿ ತಂಡ ಹುಡುಕಾಟ ನಡೆಸುತ್ತಿದೆ.
ಈ ಮಧ್ಯೆ, ಮಂಗಳೂರು ಆಟೋ ರಿಕ್ಷಾ ಸ್ಪೋಟದ ಬೆನ್ನಲ್ಲೇ ಪೊಲೀಸರು ಸಹ ಅಲರ್ಟ್ ಆಗಿದ್ದು, ಫೋರೆನ್ಸಿಕ್ ತಂಡ ರಾತ್ರಿ ಪೂರ್ತಿ ಸಾಕ್ಷ್ಯ ಸಂಗ್ರಹ ಮಾಡಲು ಪರಿಶೀಲನೆ ನಡೆಸಿದ್ದಾರೆ. ಯಾವ ರೀತಿಯ ಸ್ಪೋಟಕ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದು, ಸ್ಪೋಟದ ಸ್ಥಳದ ಪುಡಿಗಳು ಹಾಗೂ ಕಣಗಳನ್ನು ಸಂಗ್ರಹಿಸಿದ್ದಾರೆ. ಸುಧಾರಿತ ಸ್ಪೋಟಕವಾ ಅಥವಾ ಬೇರೆಯಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.