ವರುಣಾರ್ಭಟಕ್ಕೆ ಬೆಂಗಳೂರಿನ ಸಂಪರ್ಕ ಕಡಿದುಕೊಂಡ ಮಂಗಳೂರು, ಯಾರ್ ಕೇಳ್ತಾರೆ ಪ್ರಯಾಣಿಕರ ಗೋಳು?

ವರುಣಾರ್ಭಟ ಹಿನ್ನೆಲೆ ಬೆಂಗಳೂರಿನಿಂದ ಕರಾವಳಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸಂಚಾರಕ್ಕೆ ಆದೇಶಿಸಲಾಗಿದೆ. ಆದರೆ ರೈಲು, ರಸ್ತೆ, ವಿಮಾನ ಸಂಚಾರ ಅಷ್ಟು ಸುಲಭವಲ್ಲ.

Mangaluru-Bengaluru road connectivity disrupted following landslides due to heavy rain gow

ಬೆಂಗಳೂರು (ಜು.19): ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಈ ಪ್ರದೇಶದ ನದಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭಾರಿ ಮಳೆಗೆ ಕೊಡಗಿನ ತ್ರಿವೇಣಿ ಸಂಗಮ, ಕುಕ್ಕೆ ಸುಬ್ರಮಣ್ಯ, ನಂಜನಗೂಡಿನ ಸ್ನಾನಘಟ್ಟಗಳು ಜಲಾವೃತಗೊಂಡಿವೆ. ಹಲವೆಡೆ ಭೂಕುಸಿತ ಮುಂದುವರಿದ್ದು, ವಾಹನ ಸಂಚಾರ ವ್ಯತ್ಯಯಗೊಂಡಿದೆ.

ವರುಣಾರ್ಭಟ ಹಿನ್ನೆಲೆ ಬೆಂಗಳೂರಿನಿಂದ ಕರಾವಳಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿ  75  ಮತ್ತು ಕೊಡಗು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ಕೂಡ ಬಂದ್  ಮಾಡಲಾಗಿದೆ. ಭೂಕುಸಿತ ಹಿನ್ನೆಲೆಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಸಣ್ಣ ವಾಹನದಿಂದ ಹಿಡಿದು ಘನ ವಾಹನದವರೆಗೆ ಯಾವುದೇ ವಾಹನ ಇಲ್ಲಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.

ಹೆಚ್ಚುವರಿ ರೈಲು ಬಿಡಲು ಆದೇಶ: ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬರೆದ ಪತ್ರಕ್ಕೆ ರೈಲ್ವೇ ಇಲಾಖೆ ಸ್ಪಂದನೆ ನೀಡಿದೆ. ಬೆಂಗಳೂರು-ಮಂಗಳೂರು ಮಧ್ಯೆ ಹೆಚ್ಚುವರಿ ರೈಲು ಓಡಿಸಲು ಆದೇಶಿಸಲಾಗಿದೆ.

ಕರಾವಳಿಗೆ ಸಂಪರ್ಕಿಸುವ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿದ್ದು, ಶಿರಾಡಿ ಘಾಟ್ ಪೂರ್ಣ ಬಂದ್ ಆಗಿದೆ.  ಮಡಿಕೇರಿ‌ ಹೆದ್ದಾರಿ ರಾತ್ರಿ ವೇಳೆ ಬಂದ್ ಮಾಡಲಾಗಿದೆ. ಸದ್ಯ ಏಕೈಕ ಹೆದ್ದಾರಿ ಚಾರ್ಮಾಡಿ ತೆರೆದಿದ್ದರೂ ಭಾರೀ ಟ್ರಾಫಿಕ್ ಜಾಂ ಎದುರಾಗಿದೆ. ಈ ಹಿನ್ನೆಲೆ ದ. ಕ ಸಂಸದ ಬ್ರಿಜೇಶ್ ಚೌಟ ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು. ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಪತ್ರ ಬರೆದು  ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಮನವಿ ಮಾಡಿಕೊಂಡಿದ್ದರು. ಪತ್ರದ ಹಿನ್ನೆಲೆ ಹೆಚ್ಚುವರಿ ರೈಲು ಓಡಾಟಕ್ಕೆ ಆದೇಶ ನೀಡಲಾಗಿದೆ.

ರೈಲು ಸಂಚಾರವೂ ಸುಲಭವಲ್ಲ: ಇನ್ನು ಹೆಚ್ಚುವರಿ ರೈಲು ಬಿಟ್ಟರೂ ಕರಾವಳಿಗೆ ರೈಲು ಸಂಚಾರ ಸುಲಭವಲ್ಲ. ಸಕಲೇಶಪುರದಿಂದ ಹೊರಟು ಕುಕ್ಕೆಸುಬ್ರಹ್ಮಣ್ಯ ದಾಟಬೇಕಾದರೆ  ಬೆಟ್ಟಗುಡ್ಡಗಳ ಮಧ್ಯೆ ಸಾಗಬೇಕು  ಏಕೆಂದರೆ ಗುಂಡ್ಯ ಬಳಿ ಮಳೆ ಅವಾಂತರದಿಂದ ಗುಡ್ಡ ಕುಸಿಯವುದು ಸಾಮಾನ್ಯವಾಗಿದೆ. ಒಂದು ವೇಳೆ ರೈಲು ಹಳಿಯ ಮೇಲೆ ಗುಡ್ಡ ಕುಸಿದರೆ, ಕಲ್ಲುಬಂಡೆ ನಿಂತರೆ ಅಲ್ಲೂ ಸಂಚಾರ  ಬಂದ್ ಆಗಲಿದೆ.

ಶಿರಾಡಿ ಘಾಟ್‌ ಸಂಪೂರ್ಣ ಬಂದ್‌:  ಮಾರ್ನಳ್ಳಿ ದೊಡ್ಡತಪ್ಲು ಎಂಬಲ್ಲಿ ಬುಧವಾರ ತಡರಾತ್ರಿ ಗುಡ್ಡ ಕುಸಿದು ಓಮಿನಿ ವಾಹನ ಮಣ್ಣಿನಡಿ ಸಿಲುಕಿ ಅವಘಡ ಸಂಭವಿಸಿದ ಹಿನ್ನೆಲೆ  ಶಿರಾಡಿ ಘಾಟ್ ಪ್ರಯಾಣವನ್ನು ಸಂಪೂರ್ಣ ಬಂದ್‌ ಮಾಡಿ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಯಾವುದೇ ವಾಹನಿಗಳಿಗೆ ಇಲ್ಲಿ ಪ್ರವೇಶವಿಲ್ಲ.

ಸಂಪಾಜೆ ಕೂಡ ಬಂದ್‌: ಇನ್ನು ಇದೆಲ್ಲದ ಮಧ್ಯೆ ಬೆಂಗಳೂರಿನಿಂದ ಕೊಡಗು ಸಂಪಾಜೆ, ಸುಳ್ಯ ಮೂಲಕ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ರಾತ್ರಿ ವೇಳೆ ವಾಹನಗಳು ಸಂಚರಿಸದಂತೆ ಕೊಡಗು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲಲ್ಲಿ ಭೂಕುಸಿದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಸದ್ಯಕ್ಕೆ ಜು.22ರವರೆಗೆ ರಾತ್ರಿ ಸಂಚಾರ ಬಂದ್‌ ಮಾಡಿದೆ. 

ಚಾರ್ಮಾಡಿ ಘಾಟ್‌ ನಲ್ಲಿ ಫುಲ್ ಜಾಂ:  ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಮುಖ ರಾಪ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿರುವುದರಿಂದ ಕರಾವಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಇನ್ನು ಚಾರ್ಮಾಡಿ ಘಾಟ್‌  ಮತ್ತು ಬಿಸಿಲೆ ಘಾಟ್ ಕರಾವಳಿಯ ಸಂಪರ್ಕ ಇರುವ ಏಕೈಕ ಮಾರ್ಗವಾಗಿದೆ.

ಸುವರ್ಣನ್ಯೂಸ್ ಖಾಸಗಿ ಬಸ್‌ ಮಾಲೀಕರನ್ನು ಸಂಪರ್ಕಿಸಿ ಕೇಳಿದಾಗ ಚಾರ್ಮಾಡಿ ಘಾಟ್‌ ನಲ್ಲೂ ಅವಘಢ ತಪ್ಪಿದ್ದಲ್ಲ ಮಾತ್ರವಲ್ಲ ಇಕ್ಕಟ್ಟಾದ, ಕಿರಿದಾದ ಮಾರ್ಗ ಇರುವುದರಿಂದ ಬಸ್‌ ಸಂಚಾರಕ್ಕೆ ಯೋಗ್ಯವಲ್ಲ ಬಿಸಿಲೆ ಘಾಟ್‌ ಸಂಚಾರ ಮಳೆ ಇಲ್ಲದ ಸಮಯದಲ್ಲೂ ಅತ್ಯಂತ ಅಪಾಯಕಾರಿ ಹೀಗಾಗಿ ಮಳೆಗಾಲವಂತೂ ಸಾಧ್ಯವೇ ಇಲ್ಲ. ಸದ್ಯ  ನಿನ್ನೆಯಿಂದ ಬಸ್‌ ಸಂಚಾರ ನಿಲ್ಲಿಸಿದ್ದೇವೆ. ಆದ್ರೆ ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ಊರಿಗೆ ಹೋಗಬೇಕಾದವರಿಗೆ ಸರಕಾರ ತೆರಳಲು ಅವಕಾಶ ಮಾಡಿ ಕೊಟ್ಟರೆ ಒಳ್ಳೆಯದು ಎಂದ ಖಾಸಗಿ ಬಸ್‌ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬುಕ್‌ ಮಾಡಿರುವ ಟಿಕೆಟ್‌ಗಳನ್ನು ರದ್ದು ಮಾಡುವುದು ಕಷ್ಟವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಮೂಲಕ ಮಂಗಳೂರಿಗೆ ಹೋಗಿದ್ದೇವೆ ಎಂದಿದ್ದಾರೆ.

ಬಿಸಿಲೆ ಘಾಟ್‌ ಸಂಚಾರದಲ್ಲಿ ಭಯವೇ ಹೆಚ್ಚು!: ಇನ್ನು ಕುಕ್ಕೆಯನ್ನು ಸಂಪರ್ಕಿಸಿ ಮಂಗಳೂರು ತಲುಪಬಹುದುದಾದ ಒಂದೇ ಒಂದು ದಾರಿ ಅಂದರೆ ಅದು ಬಿಸಿಲೆ ಘಾಟ್‌ ಆದರೆ ಇಲ್ಲಿ ಸಂಚಾರ ಮಾತ್ರ ಕಠಿಣವಾಗಿದೆ. ಚಾರ್ಮಾಡಿ ಘಾಟ್‌ ಗಿಂತಲೂ ಕಿರಿದಾದ ಮತ್ತು ಇಕ್ಕಟ್ಟಾದ ಮಾರ್ಗ ಹೊಂದಿದ್ದು ಮಳೆಗಾಲವಂತೂ ಭೂಕುಸಿತ ಇಲ್ಲಿ ಸಾಮಾನ್ಯ ಜೊತೆಗೆ ರಾತ್ರಿ ಸಂಚಾರವನ್ನು ಬಹುತೇಕರು ಇಲ್ಲಿ ಮಾಡುವುದೇ ಇಲ್ಲ. ಅಂತಹ ಅಪಾಯಕಾರಿ ನಿಗೂಢ ಅನುಭವಗಳು ಈ ಮಾರ್ಗದಲ್ಲಿ ಹಲವರಿಗೆ ಆಗಿದೆ. ಜೊತೆಗೆ ಕಾಡು ಪ್ರಾಣಿಗಳು ಕೂಡ ಇಲ್ಲಿ ಕಾಣಸಿಗುತ್ತವೆ.

ವಿಮಾನ ಸಂಚಾರವನ್ನು ನಂಬುವುದು ಕಷ್ಟ!
ಇನ್ನು ಕರಾವಳಿಯನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗ ಎಂದರೆ ಅದು ವಾಯು ಮಾರ್ಗ , ಬಡವರ ಪಾಲಿಗಂತೂ ಪ್ರಯಾಣ ಕಷ್ಟ ಸಾಧ್ಯ. ಇನ್ನು ವಿಮಾನ ಮೂಲಕ ತೆರಳಬಹುದು ಎಂದರೆ ಗಾಳಿ, ಮಳೆ ಹವಾಗುಣ ವೈಪರಿತ್ಯವಿದ್ದರೆ ವಿಮಾನ ಮಂಗಳೂರಿನಲ್ಲಿ ಲ್ಯಾಂಡ್‌ ಆಗುವುದು ಕಷ್ಟಸಾಧ್ಯ. ಮಂಗಳೂರಿಗೆ ತಲುಪಿ ಅಲ್ಲೇ ಗಿರಕಿ ಹೊಡೆದು, ಕಣ್ಣೂರು ಅಥವಾ ಕೇರಳದಲ್ಲಿ ಅನುಕೂಲವಾದರೆ ಅಲ್ಲಿ ಇಳಿಯಬೇಕಷ್ಟೇ. ಇಲ್ಲಿ ಮತ್ತೆ ಬೆಂಗಳೂರಿಗೆ ಹಿಂತಿರುಗಬೇಕಷ್ಟೇ.

Latest Videos
Follow Us:
Download App:
  • android
  • ios