*  ಸುಮಲತಾಗೆ ಮಾತನಾಡಲು ಅವಕಾಶ ಕಲ್ಪಿಸಿದ ಸ್ಪೀಕರ್‌ ಓಂ ಬಿರ್ಲಾ* ವಾಯು ಮಾಲಿನ್ಯ ನಿಯಂತ್ರಣ ಸ್ಟೇಷನ್‌ ಸ್ಥಾಪನೆ* ಅಕ್ರಮ ಗಣಿಗಾರಿಕೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ವಿರುದ್ಧ ಗುಡುಗಿದ ಸುಮಲತಾ 

ನವದೆಹಲಿ(ಆ.07): ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು ಲೋಕಸಭೆ ಕಲಾಪದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ವಿರುದ್ಧ ಗುಡುಗಿದ್ದಾರೆ. 

ಶುಕ್ರವಾರದ ಕಲಾಪದ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರು ಸುಮಲತಾ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು. ಈ ವೇಳೆ ಮಾತನಾಡಿದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್‌ ಅವರು, ‘ಗಣಿಗಾರಿಕೆಗಾಗಿ ಭಾರೀ ಪ್ರಮಾಣದ ಸ್ಫೋಟಕಗಳು ಹಾಗೂ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಗಣಿ ಪ್ರದೇಶಗಳ ಸುತ್ತಮುತ್ತ ವಾಸಿಸುವವರಲ್ಲಿ ಉಸಿರಾಟ ಸಮಸ್ಯೆ ಹಾಗೂ ಶ್ವಾಸಕೋಶ ಸೇರಿದಂತೆ ಇನ್ನಿತರ ಅನಾರೋಗ್ಯ ಸಮಸ್ಯೆಗಳು ಕಂಡುಬರುತ್ತಿದೆ. ಅಲ್ಲದೆ ಈ ಪ್ರದೇಶಗಳಲ್ಲಿ ಗಾಳಿ ಮತ್ತು ಅಂತರ್ಜಲ ಕಲುಷಿತಗೊಳ್ಳುತ್ತಿದ್ದು, ಬೆಳೆಗಳ ಮೇಲೆಯೂ ದುಷ್ಪರಿಣಾಮವಾಗುತ್ತಿದೆ’ ಎಂದು ಹೇಳಿದ್ದಾರೆ. 

ರಾಜ್ಯಪಾಲರನ್ನು ಭೇಟಿಯಾದ ಸುಮಲತಾ : 30 ದಿನದಲ್ಲಿ ಕ್ರಮದ ಭರವಸೆ

ಈ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಯಂತ್ರಣ ಹಾಗೂ ಪರಿಸರದ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ದೇಶಾದ್ಯಂತ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಒಟ್ಟು 1114 ವಾಯು ಮಾಲಿನ್ಯ ನಿಯಂತ್ರಣ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದಿದೆ.