ಮಳವಳ್ಳಿಯ ಜೆಡಿಎಸ್ ಮಾಜಿ ಶಾಸಕ ಡಾ. ಕೆ. ಅನ್ನದಾನಿ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಪ್ರಸನ್ನ ಎಂಬುವವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ದೂರು ನೀಡಿದ್ದಾರೆ. ಅನ್ನದಾನಿ ತನ್ನ ಪತ್ನಿಗಾಗಿ ಮೈಸೂರಿನಲ್ಲಿ ಫ್ಲ್ಯಾಟ್ ಕೊಡಿಸಿದ್ದಾರೆ.

ಮಂಡ್ಯ (ಏ.06): ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನ ಮಾಜಿ ಶಾಸಕರೊಬ್ಬರ ವಿರುದ್ಧ ಗಂಭೀರ ಸ್ವರೂಪದ ದೂರಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಳವಳ್ಳಿಯ ಜೆಡಿಎಸ್ ಮಾಜಿ ಶಾಸಕ ಡಾ. ಕೆ. ಅನ್ನದಾನಿ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಿಶಾ ಸಭೆಯಲ್ಲಿ ಸಾರ್ವಜನಿಕ ಅಳಲು

ಮಂಡ್ಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ 'ದಿಶಾ' ಸಭೆ ಆಯೋಜಿಸಲಾಗಿತ್ತು. ಸಭೆಗೆ ಆಗಮಿಸಿದ್ದ ಕುಮಾರಣ್ಣನವರನ್ನು ಭೇಟಿಯಾದ ಮಳವಳ್ಳಿ ಮೂಲದ ಪ್ರಸನ್ನ ಎಂಬ ವ್ಯಕ್ತಿ, ಮಾಜಿ ಶಾಸಕರ ವಿರುದ್ಧ ಸಾಕ್ಷ್ಯ ಸಮೇತ ಅಹವಾಲು ಸಲ್ಲಿಸಿದರು. ‘ನನ್ನ ಸಂಸಾರ ಹಾಳಾಗಲು ಅನ್ನದಾನಿ ಅವರೇ ಕಾರಣ, ದಯವಿಟ್ಟು ನನಗೆ ನ್ಯಾಯ ಕೊಡಿಸಿ’ ಎಂದು ಮನವಿ ಮಾಡಿದರು.

ಕೋಟಿ ಬೆಲೆಯ ಅಪಾರ್ಟ್‌ಮೆಂಟ್ ಮತ್ತು ಅಕ್ರಮ ಸಂಬಂಧದ ಆರೋಪ

  • ದೂರುದಾರ ಪ್ರಸನ್ನ ಅವರು ಮಾಧ್ಯಮಗಳ ಮುಂದೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ:
  • ಅಕ್ರಮ ಸಂಬಂಧ: ನನ್ನ ಪತ್ನಿಯ ಜೊತೆ ಮಾಜಿ ಶಾಸಕ ಅನ್ನದಾನಿ ಕಳೆದ ಕೆಲವು ಸಮಯದಿಂದ ಅಕ್ರಮ ಸಂಬಂಧ ಹೊಂದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾರೆ.
  • ಮೈಸೂರಿನಲ್ಲಿ ಫ್ಲ್ಯಾಟ್: ನನ್ನ ಪತ್ನಿಗಾಗಿ ಅನ್ನದಾನಿ ಅವರು ಮೈಸೂರಿನಲ್ಲಿ ಸುಮಾರು 1.5 ಕೋಟಿ ರೂಪಾಯಿ ಬೆಲೆ ಬಾಳುವ ಐಷಾರಾಮಿ ಅಪಾರ್ಟ್‌ಮೆಂಟ್ ಕೊಡಿಸಿದ್ದಾರೆ. ಪ್ರತಿದಿನ ರಾತ್ರಿ ಅನ್ನದಾನಿ ಅಲ್ಲಿಗೆ ಭೇಟಿ ನೀಡುತ್ತಾರೆ.
  • ಫೋನ್ ಕಾಲ್ ದಾಖಲೆ: ಗಂಟೆಗಟ್ಟಲೆ ನನ್ನ ಪತ್ನಿಯೊಂದಿಗೆ ಅವರು ಫೋನ್‌ನಲ್ಲಿ ಮಾತನಾಡಿದ ದಾಖಲೆಗಳು ನನ್ನ ಬಳಿ ಇವೆ.

ವಿಚ್ಛೇದನಕ್ಕೆ 30 ಲಕ್ಷ ಬೇಡಿಕೆ?

ಪ್ರಸನ್ನ ಅವರ ಅಳಲಿನ ಪ್ರಕಾರ, ಅವರ ಪತ್ನಿ ಈಗ ವಿಚ್ಛೇದನ ನೀಡಲು ನಿರಾಕರಿಸುತ್ತಿದ್ದಾರೆ. ಒಂದು ವೇಳೆ ಡಿವೋರ್ಸ್ ನೀಡಬೇಕೆಂದರೆ 30 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 'ನನ್ನ ಹೆಂಡತಿ ಇನ್ನೊಬ್ಬನ ಜೊತೆ ಇರುವುದನ್ನು ನಾನು ಹೇಗೆ ಸಹಿಸಿಕೊಳ್ಳಲಿ? ನನಗೆ ಆಕೆಯಿಂದ ವಿಚ್ಛೇದನ ಕೊಡಿಸಿ, ನಾನು ಯಾರ ತಂಟೆಗೂ ಹೋಗುವುದಿಲ್ಲ' ಎಂದು ಅವರು ಕಣ್ಣೀರು ಹಾಕಿದ್ದಾರೆ.

ನ್ಯಾಯದ ಭರವಸೆ ನೀಡಿದ ಕುಮಾರಸ್ವಾಮಿ

ಬಡ ವ್ಯಕ್ತಿಯ ಅಳಲನ್ನು ಆಲಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, 'ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ನ್ಯಾಯ ಕೊಡಿಸುತ್ತೇನೆ' ಎಂದು ಭರವಸೆ ನೀಡಿದ್ದಾರೆ. ದಿಶಾ ಸಭೆ ಮುಗಿದ ಬಳಿಕ ಈ ವಿಚಾರವಾಗಿ ಅವರು ಮಾಜಿ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಅನ್ನದಾನಿ ಅವರು ದೂರುದಾರನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.