ಬೆಂಗಳೂರು(ಮೇ.19): ಚಿತ್ರಮಂದಿರದಲ್ಲಿ ಅಳವಡಿಸಿದ್ದ ಪಿಒಪಿ ಶೀಟ್‌ ಮೇಲೆ ನೀರು ಜಿನುಗುತ್ತಿದ್ದನ್ನು ರೆಡಿ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರು 25 ಅಡಿ ಎತ್ತರದಿಂದ ಬಿದ್ದು, ಮೃತಪಟ್ಟಿರುವ ಘಟನೆ ನಡೆದಿದೆ. ಕೆಂಗೇರಿ ನಿವಾಸಿ ಪುಟ್ಟಣ್ಣ ಗೌಡ ಮೃತ ದುರ್ದೈವಿ.

ಈ ಸಂಬಂಧ ಮೃತರ ಪುತ್ರ ನೀಡಿದ ದೂರಿನ ಮೇರೆಗೆ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಚಿಕ್ಕರಾಮಯ್ಯ ಮತ್ತು ಚಿತ್ರಮಂದಿರದ ಗುತ್ತಿಗೆದಾರ ಜಗದೀಶ್‌ ಗೌಡ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪುಟ್ಟಣ್ಣ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಪುಟ್ಟಣ್ಣ ಅವರ ಸಹೋದರ ವಿದ್ಯಾಪೀಠ ರಸ್ತೆಯಲ್ಲಿರುವ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಮ್ಯಾನೇಜರ್‌ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪುಟ್ಟಣ್ಣ ಆಗ್ಗಾಗ್ಗೆ ಚಿತ್ರಮಂದಿರಕ್ಕೆ ಹೋಗಿ ಬರುತ್ತಿದ್ದರು. ಈ ವೇಳೆ ಚಿತ್ರಮಂದಿರದಲ್ಲಿ ಸಣ್ಣ-ಪುಟ್ಟಕೆಲಸ ಮಾಡುತ್ತಿದ್ದರು. ಮೇ 16ರಂದು ಸಂಜೆ ಐದು ಗಂಟೆ ಸುಮಾರಿಗೆ ಪುಟ್ಟಣ್ಣ ಚಿತ್ರಮಂದಿರಕ್ಕೆ ಹೋಗಿದ್ದರು. ಈ ವೇಳೆ ಗುತ್ತಿಗೆದಾರ ಜಗದೀಶ್‌, ಚಿತ್ರಮಂದಿರದಲ್ಲಿ ಅಳವಡಿಸಲಾಗಿರುವ ಪಿಒಪಿ ಸೀಟ್‌ ಮೇಲೆ ನೀರು ಸೋರುತ್ತಿದ್ದು, ರಿಪೇರಿ ಮಾಡುವಂತೆ ಪುಟ್ಟಣ್ಣಗೆ ಹೇಳಿದ್ದರು.

ಕೆಲಸ ಮಾಡಲು ಹೋಗಿದ್ದ ಪುಟ್ಟಣ್ಣ ಪಿಒಪಿ ಮೇಲೆ ಕಾಲಿಟ್ಟಿದ್ದು, ಗಟ್ಟಿಯಾಗಿಲ್ಲದ ಕಾರಣ ಸೀಟ್‌ ಮುರಿದು ಆಯತಪ್ಪಿ ಸುಮಾರು 25 ಅಡಿ ಎತ್ತರದಿಂದ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.