ಪೊಲೀಸರ ವಶದಲ್ಲಿ ವ್ಯಕ್ತಿ ಸಾವು; ಲಾಕಪ್‌ಡೆತ್ ಆರೋಪ
ಗುತ್ತಲ ಪೊಲೀಸ್ ಠಾಣೆಯಲ್ಲಿ ಸೆ.7ರಂದು ದಾಖಲಾಗಿರುವ ಗೋವಿಂದಪ್ಪ ಪೂಜಾರ ಅವರ ಅಸಹಜ ಸಾವು ಪ್ರಕರಣವೀಗ ತಿರುವು ಪಡೆದುಕೊಂಡಿದ್ದು, ಪೊಲೀಸ್ ವಶದಲ್ಲಿದ್ದಾಗಲೇ ಸತ್ತಿರುವ ಆರೋಪಗಳು ಕೇಳಿ ಬಂದಿದೆ.
ಹಾವೇರಿ (ಸೆ.12) : ಗುತ್ತಲ ಪೊಲೀಸ್ ಠಾಣೆಯಲ್ಲಿ ಸೆ.7ರಂದು ದಾಖಲಾಗಿರುವ ಗೋವಿಂದಪ್ಪ ಪೂಜಾರ ಅವರ ಅಸಹಜ ಸಾವು ಪ್ರಕರಣವೀಗ ತಿರುವು ಪಡೆದುಕೊಂಡಿದ್ದು, ಪೊಲೀಸ್ ವಶದಲ್ಲಿದ್ದಾಗಲೇ ಸತ್ತಿರುವ ಆರೋಪಗಳು ಕೇಳಿ ಬಂದಿದೆ.
ವಾಂತಿ ಮಾಡಿಕೊಂಡು ಗೋವಿಂದಪ್ಪ ಸತ್ತಿದ್ದಾನೆ. ಆತನನ್ನು ನಾವು ಬಂಧಿಸಿಲ್ಲ. ವಿಚಾರಣೆಯನ್ನೂ ಮಾಡಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ, ಥಳಿಸಿದ ಪರಿಣಾಮ ಪೊಲೀಸರ ವಶದಲ್ಲಿದ್ದಾಗಲೇ ಗೋವಿಂದಪ್ಪ ಮೃತಪಟ್ಟಿದ್ದಾನೆ ಎಂಬುದು ಮೃತನ ಕುಟುಂಬಸ್ಥರ ಆರೋಪವಾಗಿದೆ.
ಹಾವೇರಿ: ಮೊಬೈಲ್ ಕದ್ದು ಹಣ ದೋಚುತ್ತಿದ್ದ 3 ಆರೋಪಿಗಳ ಬಂಧನ
ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ ಗೋವಿಂದಪ್ಪ ಪೂಜಾರ (35) ಮೃತಪಟ್ಟವರು. ಗೋವಿಂದಪ್ಪಗೆ ಪಿಡ್ಸ್ ಕಾಯಿಲೆ ಇದ್ದು, ಸೆ.6ರಂದು ರಾತ್ರಿ 10 ಗಂಟೆ ಸುಮಾರಿಗೆ ನಾವು ಊಟ ಮಾಡಿ ಮಲಗಿದ್ದೆವು. ನಂತರ ಮಧ್ಯರಾತ್ರಿ 1.15ರ ಸುಮಾರಿಗೆ ವಾಂತಿ ಮಾಡಿಕೊಂಡ ಗೋವಿಂದಪ್ಪನನ್ನು ಹೊಸರಿತ್ತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಉಪಚಾರ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಗುತ್ತಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ನಸುಕಿನ 4.15ಕ್ಕೆ ಗೋವಿಂದಪ್ಪ ಮೃತಪಟ್ಟಿದ್ದಾನೆ ಎಂದು ಅಲ್ಲಿನ ವೈದ್ಯರು ತಿಳಿಸಿದರು. ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ಸಹೋದರಿ ಗೀತಾ ಪಾಟೀಲ ತಿಳಿಸಿದ್ದಾರೆ ಎಂದು ಗುತ್ತಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ತಿಳಿಸಲಾಗಿದೆ.
ಆದರೆ, ಈ ಬಗ್ಗೆ ಸಹೋದರಿ ಗೀತಾ ಅವರು ಗೋವಿಂದಪ್ಪನ ಸಾವಿನ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಪೊಲೀಸರತ್ತ ಅನುಮಾನ ಹುಟ್ಟಿಸಿದೆ.
‘ನನ್ನ ಅಣ್ಣ ಗೋವಿಂದಪ್ಪನನ್ನು ಸೆ.6ರಂದು ಗುತ್ತಲ ಪೊಲೀಸ್ ಠಾಣೆಯ ಸಿಬ್ಬಂದಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿಯಲ್ಲಿ ವಶಕ್ಕೆ ಪಡೆದಿದ್ದರು. ನಂತರ ಹೊಸರಿತ್ತಿ ಪೊಲೀಸ್ ಹೊರ ಠಾಣೆಗೆ ಕರೆತಂದು, ಕಳ್ಳತನದ ಬಗ್ಗೆ ಬಾಯಿ ಬಿಡಿಸಲು ಆರೋಪಿಗೆ ಮನಸೋಇಚ್ಛೆ ಥಳಿಸಿದ್ದಾರೆ. ಇದರಿಂದ ಗೋವಿಂದಪ್ಪ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥನಾಗಿದ್ದಾನೆ. ಆಗ ಸೆ.7ರಂದು ರಾತ್ರಿ ನನ್ನನ್ನು ಪೊಲೀಸರು ಠಾಣೆಗೆ ಕರೆಸಿಕೊಂಡರು. ಆಗ ನನ್ನ ಅಣ್ಣ ವಾಂತಿ ಮಾಡಿಕೊಂಡು ನಿತ್ರಾಣನಾಗಿದ್ದ. ಹೊಸರಿತ್ತಿ ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಲು ಪೊಲೀಸರು ಯತ್ನಿಸಿದರು. ಅಲ್ಲಿನ ವೈದ್ಯರು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು. ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ನನ್ನ ಅಣ್ಣ ನನ್ನ ಮಡಿಲಿನಲ್ಲೇ ಉಸಿರು ಚೆಲ್ಲಿದ ಎಂದು ಸಹೋದರಿ ಗೀತಾ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸೂಕ್ತ ತನಿಖೆ ನಡೆಸಿದರೆ ಸತ್ಯ ಬಯಲಿಗೆ ಬರಲಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.
Crime news: ಜ್ಯುವೆಲರಿ ಅಂಗಡಿ ಬಾಗಿಲು ಮುರಿದು ಕಳ್ಳತನ: ನಾಲ್ವರು ಆರೋಪಿಗಳ ಬಂಧನ
ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡಲು ಹಾವೇರಿ ಡಿವೈಎಸ್ಪಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಸ್ಥರು ದೂರು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಶಿವಕುಮಾರ ಗುಣಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಕರಣದ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆಯುತ್ತೇನೆ. ಒಂದು ವೇಳೆ ಪ್ರಕರಣ ಮುಚ್ಚಿಹಾಕಿದ್ದು ಸತ್ಯವಾದರೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ.
ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ