ಉಡುಪಿ[ಡಿ.13]: ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಸಹಿಯನ್ನು ಫೋರ್ಜರಿ ಮಾಡಿ, ತಾನೇ ಅವರೆಂದು ಅಮೆರಿಕ ಮತ್ತು ಜಪಾನ್‌ ಕಂಪನಿಗಳೊಂದಿಗೆ ವ್ಯವಹಾರ ನಡೆಸಿದ್ದ ಅಪರಾಧಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆ ಮತ್ತು 7 ಸಾವಿರ ರು. ದಂಡ ವಿಧಿಸಿದೆ. ಉಡುಪಿ ತಾಲೂಕಿನ ಕೊಡವೂರು ಗ್ರಾಮದ ನಿರಂಜನ್‌ ಚಿದಾನಂದ ಭಟ್‌ ದಂಡನೆಗೊಳಗಾಗಿರುವ ಅಪರಾಧಿ.

ವೃತ್ತಿಯಲ್ಲಿ ಇಂಜಿನಿಯರ್‌ ಆಗಿರುವ ನಿರಂಜನ್‌ ಭಟ್‌ 2009ರಲ್ಲಿ ಸೈಬರ್‌ ಕೆಫೆಯೊಂದರಲ್ಲಿ ap್ಜaಚಿd್ಠ್ಝka್ಝaಞಜ್ಞಿ.್ಚಟ ಎಂಬ ನಕಲಿ ಇ-ಮೇಲ್‌ ವಿಳಾಸ ಸೃಷ್ಟಿಸಿದ್ದ. ನಂತರ ಅದರ ಮೂಲಕ ಮಾನವ ಕುಲಕ್ಕೆ ಅತ್ಯುನ್ನತ ಸೇವೆ ಸಲ್ಲಿಸಿದ ಇಂಜಿನಿಯರ್‌ಗಳಿಗೆ ಅಮೆರಿಕನ್‌ ಎಂಜಿನಿಯರಿಂಗ್‌ ಆರ್ಗನೈಸೇಶನ್‌ ನೀಡುವ ಹೂವೇರ್‌ ಪ್ರಶಸ್ತಿಯನ್ನು ನಿರಂಜನ್‌ ಭಟ್‌ ಅವರಿಗೆ ನೀಡುವಂತೆ ಡಾ.ಅಬ್ದುಲ್‌ ಕಲಾಂ ಅವರು ಶಿಫಾರಸು ಮಾಡಿರುವಂತೆ ನಕಲಿ ಪತ್ರಗಳನ್ನು ತಯಾರಿಸಿ ಇ-ಮೇಲ್‌ ಮಾಡಿದ್ದ.

ಅಲ್ಲದೇ ಅದೇ ಇ-ಮೇಲ್‌ನಿಂದ ಜಪಾನಿನ ಗೋಸ್ವಾಮಿ ಡಿ.ಯೋಗಿ ಎಂಬವರಿಗೆ ಪತ್ರ ಬರೆದು, ತಾನು ಡಾ.ಕಲಾಂ ಎಂದು ಹೇಳಿ, ಗೋಸ್ವಾಮಿ ಅವರ ಸಂಸ್ಥೆ ಭಾರತದಲ್ಲಿ ಸ್ಥಾಪಿಸಿರುವ 50 ಎಂ.ಡಬ್ಲ್ಯು. ಸೋಲಾರ್‌ ಥರ್ಮಲ್‌ ಪ್ಲಾಂಟ್‌ನ ಪ್ರಾಜೆಕ್ಟ್ ರಿಪೋರ್ಟ್‌ ಅನ್ನು ಕಳುಹಿಸಿಕೊಡುವಂತೆ ಕೋರಿದ್ದ. ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗವು ಈ ಪ್ರಕರಣವನ್ನು ಬಯಲಿಗೆಳೆದಿದ್ದು, ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಲಾಗಿತ್ತು.

ಇದೀಗ ಸುದೀರ್ಘ ವಿಚಾರಣೆಯ ನಂತರ ಆರೋಪವು ಸಾಬೀತಾಗಿದ್ದು, ನ್ಯಾಯಾಧೀಶ ಮಂಜುನಾಥ್‌ ಎಂ.ಎಸ್‌. ಅವರು ನಿರಂಜನ್‌ ಭಟ್‌ ಅವರಿಗೆ ಭಾ.ದಂ.ಸಂ ಕಲಂ 419, 465, 468, 469, 471 ರಡಿ 3 ವರ್ಷ ಕಠಿಣ ಸಜೆ ಮತ್ತು .7000 ದಂಡ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿಂದಿನ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್‌ ಮತ್ತು ಈಗಿನ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ. ಅವರು ವಾದಿಸಿದ್ದರು.