ಮಂಗಳೂರು[ಜ.16]: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಮಲಯಾಳಿ ಭಾಷಾ ಶಿಕ್ಷಕರ ಪ್ರವೇಶ ಮತ್ತೆ ಶುರುವಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆಗಿಳಿದ ಕನ್ನಡಿಗ ವಿದ್ಯಾರ್ಥಿಗಳ ಆಕ್ರೋಶವನ್ನು ಲೆಕ್ಕಿಸದೆ ಮಂಗಳವಾರ ಪೊಲೀಸ್‌ ಭದ್ರತೆಯಲ್ಲಿ ಮಲಯಾಳಿ ಶಿಕ್ಷಕಿ ಕನ್ನಡ ಮಾಧ್ಯಮ ಶಾಲೆಗೆ ಹಾಜರಾಗಿದ್ದಾರೆ. ಆದರೆ, ಪಟ್ಟುಬಿಡದ ಕನ್ನಡಿಗ ವಿದ್ಯಾರ್ಥಿಗಳು ಮಲಯಾಳಿ ಭಾಷಿಕ ಶಿಕ್ಷಕಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡದ ಘಟನೆ ನಡೆದಿದೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉದುಮ ಫಿಶರೀಸ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ 5ರಿಂದ 10ನೇ ತರಗತಿ ವರೆಗೆ ಪಾಠ ಮಾಡಲಾಗುತ್ತದೆ. ಕನ್ನಡ ಮಾಧ್ಯಮದ ಶಾಲೆ ಇದಾಗಿದ್ದು, ನೂರಕ್ಕೂ ಅಧಿಕ ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಸಮಾಜ ವಿಜ್ಞಾನ ಪಾಠಕ್ಕೆ ಮಲಯಾಳಿ ಭಾಷಿಕ ಶಿಕ್ಷಕಿಯೊಬ್ಬರು ಆಗಮಿಸಿದ್ದರು. ಕನ್ನಡ ಭಾಷೆ ಗೊತ್ತಿಲ್ಲದ ಮಲಯಾಳಿ ಶಿಕ್ಷಕಿಯನ್ನು ಕನ್ನಡ ಮಾಧ್ಯಮ ಶಾಲೆಗೆ ನೇಮಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣ ವಾಪಸ್‌ ಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಮಣಿದ ಶಿಕ್ಷಣ ಇಲಾಖೆ, ಆ ಶಿಕ್ಷಕಿಯನ್ನು ಮೂರು ತಿಂಗಳು ರಜೆಯ ಮೇಲೆ ಕಳುಹಿಸಿತ್ತು.

ಇದೀಗ ರಜೆ ಮುಗಿಸಿ ಶಿಕ್ಷಕಿ ಮಂಗಳವಾರ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ್ದರು. ಅಷ್ಟರಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಪೋಷಕರೂ ಆಗಮಿಸಿದರು. ಆಗ ಪೊಲೀಸರನ್ನು ಕರೆಸಿಕೊಂಡ ಶಿಕ್ಷಕಿ ಭದ್ರತೆಯಲ್ಲಿ ಶಾಲೆ ಪ್ರವೇಶಿಸಿದರು. ಆದರೆ, ಮಲಯಾಳಿ ಭಾಷಿಕ ಶಿಕ್ಷಕಿಗೆ ಪಾಠ ಮಾಡಲು ಅವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಟ್ಟುಹಿಡಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ಅವಾಚ್ಯವಾಗಿ ನಿಂದಿಸಿದ ಘಟನೆಯೂ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಮಲಯಾಳಿ ಭಾಷೆಯಲ್ಲಿ ಪಾಠ ಮಾಡಿದರೆ, ಕನ್ನಡಿಗ ವಿದ್ಯಾರ್ಥಿಗಳಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಈ ಹಿಂದೆಯೇ ವಿದ್ಯಾರ್ಥಿಗಳು, ಪೋಷಕರು ಹಾಗೂ ಕನ್ನಡ ಪರ ಸಂಘಟನೆಗಳು ಆಗ್ರಹಿಸಿದ್ದವು. ಆ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸಿದ್ದ ಕೇರಳ ಶಿಕ್ಷಣ ಸಚಿವ ಪ್ರೊ.ರವೀಂದ್ರನಾಥನ್‌ ಕನ್ನಡ ಶಿಕ್ಷಕರ ನೇಮಕದ ಬಗ್ಗೆ ಭರವಸೆ ನೀಡಿದ್ದರು. ಆದರೆ, ಇದು ಕೇವಲ ಭರವಸೆಯಾಗಿಯೇ ಉಳಿದುಕೊಂಡಿದೆ.

ಕೇರಳ ಲೋಕಸೇವಾ ಆಯೋಗದ ಮೀಸಲಾತಿ ವ್ಯವಸ್ಥೆ, ಪರೀಕ್ಷಾ ವಿಧಾನ ಹಾಗೂ ಸಂದರ್ಶನ ವಿಧಾನಗಳ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಕನ್ನಡ ವಿಷಯಗಳ ಪಿಎಸ್‌ಸಿ ರಾರ‍ಯಂಕ್‌ ಪಟ್ಟಿಯಲ್ಲಿ ಸೇರಿಕೊಂಡು ಸುಮಾರು 23 ಮಂದಿ ಮಲಯಾಳಿ ಭಾಷಿಕ ಶಿಕ್ಷಕರು ಉದ್ಯೋಗ ನೇಮಕ ಆದೇಶ ಪಡೆದುಕೊಂಡಿದ್ದಾರೆ. ಇದು ಈಗ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಿ ಭಾಷಕ ಶಿಕ್ಷಕರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಅಸಹಾಯಕರಾದ ಕನ್ನಡಿಗರು

ಈ ಹಿಂದೆ ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮದ ನಾಲ್ಕು ಹೈಯರ್‌ ಸೆಕೆಂಡರಿ ಸ್ಕೂಲ್‌ಗಳಿಗೆ ಮಲಯಾಳಿ ಭಾಷಿಕ ಶಿಕ್ಷಕರ ನೇಮಕಗೊಂಡಾಗ ಕನ್ನಡಿಗರಿಂದ ಸಾಕಷ್ಟುಪ್ರತಿರೋಧ, ಪ್ರತಿಭಟನೆ ವ್ಯಕ್ತಗೊಂಡಿತ್ತು. ಇದರಿಂದ ಬೆದರಿದ ಕೇರಳ ಸರ್ಕಾರ, ಮಲಯಾಳಿ ಭಾಷಿಕ ಶಿಕ್ಷಕರನ್ನು ರಜೆ ಮೇಲೆ ಕಳುಹಿಸಿತ್ತು. ಇದರಲ್ಲಿ ಕೆಲವು ಶಿಕ್ಷಕರು ಶಿಕ್ಷಕ ವೃತ್ತಿ ತ್ಯಜಿಸಿ ಮೂಲ ವೃತ್ತಿಗೆ ಮರಳಿದ್ದರು. ಇನ್ನೂ ಕೆಲವು ಮಂದಿ ರಜೆ ಮೇಲೆ ತೆರಳಿದ್ದರು. ಇಬ್ಬರು ಶಿಕ್ಷಕರು ಮೈಸೂರಿನ ಭಾಷಾ ಸಂಶೋಧನಾ ಕೇಂದ್ರದಲ್ಲಿ ಕನ್ನಡ ಕಲಿಕೆಗೆ ತೆರಳಿದ್ದರು. ಇವೆಲ್ಲದರ ಮಧ್ಯೆ ಈಗ ರಜೆ ಮೇಲೆ ತೆರಳಿದ ಶಿಕ್ಷಕರು ಒಬ್ಬೊಬ್ಬರಾಗಿ ಶಾಲೆಗೆ ಆಗಮಿಸುತ್ತಿದ್ದಾರೆ. ಕನ್ನಡ ಕಲಿತುಕೊಂಡು ಆಗಮಿಸದ ಕಾರಣ ಇದು ಮತ್ತೆ ಪ್ರತಿಭಟನೆಗೆ ಕಾರಣವಾಗುತ್ತಿದೆ. ಈ ವಿಚಾರದಲ್ಲಿ ಗಡಿನಾಡ ಕನ್ನಡಿಗರು ನಿಸ್ಸಾಯಕರಾಗಿದ್ದಾರೆ.