ವಿಜಯಪುರ[ಜ.05]: ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಬದಲಾವಣೆಗೆ ನೂತನ ಗೃಹ ಸಚಿವ ಎಂ.ಬಿ. ಪಾಟೀಲ ಮುಂದಾಗಿದ್ದು, ಈ ನಿಟ್ಟಿನಲ್ಲಿ ಫೆ.15ರ ವೇಳೆಗೆ ಮಾಸ್ಟರ್‌ ಪ್ಲಾನ್‌ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ನಗರದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಚಿಂತನಾ ಕೊಠಡಿಯಲ್ಲಿ ಶುಕ್ರವಾರ ಪೊಲೀಸ್‌ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಗ್ರವಾಗಿ ಇಲಾಖೆ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಪೊಲೀಸ್‌ ಅಧಿಕಾರಿಗಳು ಸಮಸ್ಯೆ ಹೇಳಿಕೊಂಡಿದ್ದಾರೆ. ನಾನೂ ಕೆಲ ಸಲಹೆಗಳನ್ನು ನೀಡಿದ್ದೇನೆ. ಇನ್ನೂ ನಾಲ್ಕೈದು ಇಲಾಖೆಗಳೊಂದಿಗೆ ಸಭೆ ನಡೆಸಿ ರೋಡ್‌ ಮ್ಯಾಪ್‌ ಹಾಕಿಕೊಂಡು ಇಲಾಖೆಯಲ್ಲಿ ಕೆಲ ಬದಲಾವಣೆ ತರಲಾಗುವುದು. ದೇಶದಲ್ಲೇ ಕರ್ನಾಟಕ ರಾಜ್ಯ ಕಾನೂನು ಸುವ್ಯವಸ್ಥೆ, ಆಡಳಿತ, ಆಧುನಿಕ ವ್ಯವಸ್ಥೆ, ಐಟಿ-ಬಿಟಿ ಅಪರಾಧ ತಡೆ ಹಾಗೂ ಆಡಳಿತದಲ್ಲಿ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಟ​ಕಾ ಆಡೋ​ರಿಗೆ ಎಚ್ಚ​ರಿ​ಕೆ:

ಮಟಕಾ, ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್‌ ತಡೆಗೆ ಕಠಿಣ ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಅಕ್ರಮಗಳು ಮುಂದುವರಿದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇದೇ ವೇಳೆ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು. ಬೆಟ್ಟಿಂಗ್‌, ಜೂಜಾಟ ತಡೆಗೆ ಆರೋಪಿಗಳಿಗೆ ತಕ್ಷಣ ಜಾಮೀನು ಸಿಗದಂತೆ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಕದ್ದಾಲಿಕೆ ನಡೆಯಲು ಬಿಡಲ್ಲ:

ಇನ್ನು ಮುಂದೆ ಫೋನ್‌ ಕದ್ದಾಲಿಕೆ ನಡೆಯಲು ಬಿಡುವುದಿಲ್ಲ. ಈ ಹಿಂದೆ ತಮ್ಮ ಫೋನ್‌ ಕದ್ದಾಲಿಕೆ ನಡೆದಿತ್ತು. ಆ ಕಾರಣದಿಂದಾಗಿ ಫೋನ್‌ ಕದ್ದಾಲಿಕೆ ಕುರಿತು ಸಮಗ್ರ ಮಾಹಿತಿ ಪಡೆದು ಇನ್ನು ಮುಂದೆ ಯಾವುದೇ ರೀತಿಯ ಕದ್ದಾಲಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.