ಬೆಂಗಳೂರು(ಜೂ.05): ರಾಜ್ಯಸಭಾ ಮತ್ತು ವಿಧಾನ ಪರಿಷತ್‌ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರಿಗೆ ಪ್ರಾತಿನಿಧ್ಯ ನೀಡುವಂತೆ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ಅಧ್ಯಕ್ಷರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ.

ಗುರುವಾರ ಈ ಬಗ್ಗೆ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಮಹಾಸಭಾದ ಕಾರ್ಯದರ್ಶಿ ಎಚ್‌.ಎಂ.ರೇಣುಕಾ ಪ್ರಸನ್ನ ಅವರು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.25ರಷ್ಟುಮಂದಿ ವೀರಶೈವ-ಲಿಂಗಾಯತ ಸಮಾಜದವರಿದ್ದಾರೆ. ಶಾಸನ ಸಭೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನ ದೊರೆತಿಲ್ಲ. ಹಾಗಾಗಿ ವೀರಶೈವ ಲಿಂಗಾಯತ ಸಮಾಜಕ್ಕೆ ರಾಜ್ಯಸಭಾ ಮತ್ತು ವಿಧಾನಪರಿಷತ್‌ ಚುನಾವಣೆಯಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

'ನನ್ನನ್ನು ಬಿಜೆಪಿಯವರು ಸೋಲಿಸಿದ್ದಾರೆ ಅಂತ ನಾನು ಎಲ್ಲೂ ಹೇಳಿಲ್ಲ'

ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆ ರಾಜಕೀಯ ಚಟುವಟಿಕೆಯಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರು ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದಕ್ಕೆ ಈ ಹಿಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಆದ್ದರಿಂದ ಪ್ರಸ್ತುತ ನಡೆಯಲಿರುವ ರಾಜ್ಯಸಭಾ ಮತ್ತು ವಿಧಾನ ಪರಿಷತ್‌ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರಿಗೆ ರಾಜ್ಯದ ಮೂರು ಪ್ರಮುಖ ಪಕ್ಷಗಳಲ್ಲಿಯೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.