ಬೆಂಗಳೂರು(ಜೂ.04): ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಆ ತೀರ್ಮಾನಕ್ಕೆ ನಮ್ಮ ಒಪ್ಪಿಗೆ ಇದೆ. ತ್ಯಾಗಕ್ಕೆ ಬೆಲೆ ಸಿಗುವ ಸಮಯ ಬಂದಾಗ ಸಿಗುತ್ತದೆ, ಅದಕ್ಕೆ ಕಾದು ನೋಡಬೇಕು. ಇನ್ನೂ ಕಾಯುವ ತಾಳ್ಮೆ ಶೇ.‌100 ರಷ್ಟು ಇದೆ. ಜನರಲ್‌ ಎಲೆಕ್ಷನ್ ಬೇಕಾದರೂ ಬರಲಿ, ಅದಕ್ಕೂ ಒಂದು ಸಲ ನಿಂತುಬಿಡೋಣ ಎಂದು ಮಾಜಿ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ. 

ಇಂದು(ಗುರುವಾರ) ನಗರದ ಸಿಎಂ ಅಧಿಕೃತ ನಿವಾಸ ಕಾವೇರಿ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಕೊಟ್ಟ ಮಾತು ಭರವಸೆ ಈಡೇರಿಸಿದೆ. ಉಪ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಟ್ಟಿದ್ದರು, ನಾವು ಸೋತಿದ್ದೇವೆ. ಕೆಲವು ಕಾರಣಗಳಿಂದ ನಾನು‌ ಸೋತಿದ್ದೇನೆ, ಇಲ್ಲದಿದ್ದರೆ ನಾನು ಯಾಕೆ ಸೋಲುತ್ತಿದ್ದೆ? ಎಂಟಿಬಿಯನ್ನು ಸೋಲಿಸಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಜಾತಿಯವರನ್ನೇ ತಂದು ನಿಲ್ಲಿಸಿದ್ದರು. ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಎಲ್ಲರೂ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟಿದ್ದರು ಎಂದು ಹೇಳಿದ್ದಾರೆ. 

ಇದು ಬಿಜೆಪಿಯ ಇನ್‌ಸೈಡ್ ಬಿಗ್ ಬ್ರೇಕಿಂಗ್ ನ್ಯೂಸ್: ಬೈ ಎಲೆಕ್ಷನಲ್ಲಿ ಸೋತವರಿಗೆ ಗುನ್ನಾ..!

ಉಪ ಚುನಾವಣೆಯಲ್ಲಿ ಬಚ್ಚೇಗೌಡರು ಮತ್ತು ಅವರ ಮಗ ಬಿ. ಎಸ್. ಯಡಿಯೂರಪ್ಪ ಜೊತೆ ಒಪ್ಪಿಕೊಂಡು ಹೋಗಿ ಕೊನೆಗೆ ಉಲ್ಟಾ ಹೊಡೆದರು. ನನ್ನನ್ನು ಸೋಲಿಸಿದ್ದು ಬಿಜೆಪಿಯವರಲ್ಲ, ಬಚ್ಚೇಗೌಡ ಹಾಗೂ ಅವರ ಮಗ. ಹೀಗಾಗಿ ಇವರಿಬ್ಬರ ಕ್ರಮ ತೆಗೆದುಕೊಳ್ಳಬೇಕು ಅಂತ ಹೇಳಿದ್ದೇನೆ, ಪಕ್ಷ ಏನು‌ ಮಾಡುತ್ತದೋ ಕಾದು ನೋಡೋಣ ಎಂದು ಹೇಳಿದ್ದಾರೆ. 

ರಾಜಕಾರಣದಲ್ಲಿ ಸೋಲು, ಗೆಲುವು, ಅಧಿಕಾರ ಎಲ್ಲವೂ ಸಾಮಾನ್ಯ. ಮುಂದೆ ಏನಾಗುತ್ತದೆ ಎಂಬುದನ್ನು ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹಿಂದೆ ಹೇಳಿದ್ದೆ, ಈಗಲೂ ಹೇಳುತ್ತೇನೆ. ವಿಧಾನ ಪರಿಷತ್‌ಗೆ ಹೋಗುವುದು ಹಣೆಬರಹದಲ್ಲಿ ಬರೆದಿದ್ದರೆ ಆಗುತ್ತದೆ, ಇಲ್ಲದಿದ್ದರೆ ಆಗಲ್ಲ. ಹಣೆ ಬರೆಹದಲ್ಲಿ ಬರೆದಿರಬೇಕು, ದೇವರ ಅನುಗ್ರಹ, ಪಕ್ಷದ ಮುಖಂಡರ ಆಶೀರ್ವಾದ ಇದ್ದಲ್ಲಿ ಮಾತ್ರ ಎಲ್ಲವೂ ಸಿಗುತ್ತದೆ. ಏನಾಗುತ್ತದೆ ಅಂತ ಮುಂದೆ ನೋಡೋಣ. ನನ್ನನ್ನು ಬಿಜೆಪಿಯವರು ಸೋಲಿಸಿದ್ದಾರೆ ಅಂತ ನಾನು ಎಲ್ಲೂ ಹೇಳಿಲ್ಲ, ಏನೇನು ಆಗುತ್ತದೋ ಆಗಲಿ ಎಂದು ಹೇಳಿದ್ದಾರೆ. 

News In 100 Seconds: ಈ ಕ್ಷಣದ ಪ್ರಮುಖ ಸುದ್ದಿಗಳು

"