* ಬ್ಯಾಂಕ್‌ಗೆ ನಕಲಿ ಬಾಂಬ್ ಜೊತೆ ಮುಸುಕುಧಾರಿಯ ಎಂಟ್ರಿ* ಹಣ ನೀಡದಿದ್ದರೆ ಬಾಂಬ್ ಸ್ಫೋಟಿಸುವ ಬೆದರಿಕೆ* ಮುಸುಕುಧಾರಿ ಬಂಧಿಸಿದ ಪೊಲೀಸರು

ಮುಂಬೈ(ಜೂ.06): ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ಬ್ಯಾಂಕ್ ಶಾಖೆಯಲ್ಲಿ ಮುಸುಕುಧಾರಿಯೊಬ್ಬ ಇಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವುದು ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಬ್ಯಾಂಕ್‌ನೊಳಗೆ ನುಗ್ಗಿದ ಈ ಮುಸುಕುಧಾರಿ ಸಿಬ್ಬಂದಿಗೆ ಮುಂದಿನ 15 ನಿಮಿಷದಲ್ಲಿ 55 ಲಕ್ಷ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದ್ದೆನ್ನಲಾಗಿದೆ. ಇನ್ನು ಈ ಮುಸುಕುಧಾರಿ ನೀಡಿದ ಪತ್ರದಲ್ಲಿ 'ತಾನು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ತಗುಲಿದ ಬಿಲ್ ಪಾವತಿಸಲು ಹಣವಿಲ್ಲ. ಹೀಗಾಗಿ ಈ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ಬರೆದಿದ್ದ' ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

ಇನ್ನು ಬಾಂಬ್ ಸ್ಪೋಟಿಸಿದರೆ ತಾನು ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಮುಸುಕುಧಾರಿ ಬೆದರಿಕೆ ಹಾಕಿದ್ದಾನೆ ಎಂದೂ ಹೇಳಲಾಗಿದೆ. ಇನ್ನು ಪೊಲೀಸ್‌ ಠಾಣೆ ಬ್ಯಾಂಕ್ ಎದುರಿಗಿದ್ದ ಕಾರಣ, ಮುಸುಕುಧಾರಿ ಇಂತಹುದ್ದೊಂದು ಬೆದರಿಕೆ ಹಾಕಿದ ಬೆನ್ನಲ್ಲೇ ಸಿಬ್ಬಂದಿ ಪೊಲೀಸರನ್ನು ಅಲರ್ಟ್ ಮಾಡಿದ್ದಾರೆ.

ಇನ್ನು ಈ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತನ ಕೈಯ್ಯಲ್ಲಿದ್ದ ನಕಲಿ ಬಾಂಬ್ ಕೂಡಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಆತನ ಬಳಿ ಇದ್ದ ಚಾಕೂ ಹಾಗೂ ಏರ್‌ ಪಿಸ್ತೂಲ್ ಕೂಡಾ ಸಿಕ್ಕಿದೆ ಎನ್ನಲಾಗಿದೆ.