ಇಂದು ಮಹಾ ವಿಧಾನಸಭೆಯಲ್ಲಿ ಗಡಿ ಕುರಿತ ಗೊತ್ತುವಳ, ಒಂದೊಂದು ಇಂಚಿಗೂ ನಾವು ಹೋರಾಡಲಿದ್ದೇವೆ: ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ 

ನಾಗಪುರ(ಡಿ.27): ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಹಟಮಾರಿ ಧೋರಣೆ ಮುಂದುವರಿಸಿರುವ ಮಹಾರಾಷ್ಟ್ರ ಸರ್ಕಾರ, ಕರ್ನಾಟಕಕ್ಕೆ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಪುನರುಚ್ಚರಿಸಿದೆ ಹಾಗೂ ಈ ಕುರಿತು ಇಂದು(ಮಂಗಳವಾರ) ಗೊತ್ತುವಳಿ ಮಂಡಿಸುವುದಾಗಿ ತಿಳಿಸಿದೆ. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖಂಡ ಉದ್ಧವ್‌ ಠಾಕ್ರೆ ಅವರು ‘ಕರ್ನಾಟಕ ಆಕ್ರಮಿತ ಗಡಿ ಪ್ರದೇಶಗಳನ್ನು’ ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಉಭಯ ಸದನಗಳಾದ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಸೋಮವಾರ ಗಡಿ ವಿವಾದ ಪ್ರತಿಧ್ವನಿಸಿತು. ವಿಧಾನಸಭೆ ಕಲಾಪ ಆರಂಭ ಆಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಜಿತ್‌ ಪವಾರ್‌, ‘ಗಡಿ ನಿಲುವಳಿಯನ್ನು ಅಧಿವೇಶನದ ಮೊದಲ ವಾರವೇ ತರುವುದಾಗಿ ಹೇಳಿದ್ದಿರಿ. ಆದರೆ 2ನೇ ವಾರ ಬಂದರೂ ನಿಲುವಳಿ ಮಂಡನೆ ಆಗಿಲ್ಲ. ಸೋಮವಾರದ ಕಲಾಪ ಕಾರ್ಯಸೂಚಿಯಲ್ಲೂ ಗಡಿ ನಿಲುವಳಿ ಪಟ್ಟಿ ಆಗಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಮತ್ತೆ ಕರ್ನಾಟಕ ವಿರುದ್ಧ ಕಿಡಿ

ಆಗ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ವಿಧಾನಸಭೆಯಲ್ಲಿ ಮಾತನಾಡಿ, ‘ಕಳೆದ ವಾರ ಪ್ರಸ್ತಾವ ಮಂಡಿಸುವ ವಾತಾವರಣ ಇರಲಿಲ್ಲ. ಮುಖ್ಯಮಂತ್ರಿ ಏಕನಾಥ ಶಿಂಧೆ ದಿಲ್ಲಿಗೆ ಸರ್ಕಾರಿ ಕಾರ‍್ಯಕ್ರಮಕ್ಕೆಂದು ಹೋಗಿದ್ದರು. ಹೀಗಾಗಿ ಮಂಗಳವಾರ ಪ್ರಸ್ತಾವ ಮಂಡನೆ ಆಗಲಿದೆ. ಕರ್ನಾಟಕಕ್ಕೆ ಒಂದು ಇಂಚೂ ಭೂಮಿ ಕೊಡುವ ಪ್ರಶ್ನೆಯೇ ಇಲ್ಲ. ಒಂದೊಂದು ಇಂಚಿಗೂ ನಾವು ಹೋರಾಡಲಿದ್ದೇವೆ. ಕರ್ನಾಟಕದ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಲು ಎಲ್ಲ ಯತ್ನಗಳನ್ನು ಮಾಡಲಿದ್ದೇವೆ’ ಎಂದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌, ‘ಕರ್ನಾಟಕ ತಿಳಿ ನೀರು ಕಲಕುವ ಯತ್ನ ಮಾಡುತ್ತಿದೆ. ಹೀಗಿದ್ದಾಗ ಮಹಾರಾಷ್ಟ್ರ ಸರ್ಕಾರ ಮೂಕಪ್ರೇಕ್ಷಕ ಆಗಬಾರದು’ ಎಂದರು. ಠಾಕ್ರೆ ಶಿವಸೇನೆ ಸದಸ್ಯ ಭಾಸ್ಕರ ಜಾಧವ್‌ ಮಾತನಾಡಿ, ‘ಶಿಂಧೆ ಹಾಗೂ ಫಡ್ನವೀಸ್‌ ಅಸಹಾಯಕರಾಗಿದ್ದಾರೆ’ ಎಂದು ಆರೋಪಿಸಿದರು. ಅದಕ್ಕೆ ಉತ್ತರಿಸಿದ ಫಡ್ನವೀಸ್‌, ‘ಸಿಎಂ ಹಾಗೂ ಡಿಸಿಎಂರನ್ನು ಅಸಹಾಯಕ ಮಾಡುವ ದಮ್ಮು ಯಾರಿಗೂ ಇಲ್ಲ’ ಎಂದು ಏರಿದ ದನಿಯಲ್ಲಿ ಹೇಳಿದರು.

ಕರ್ನಾಟಕದಲ್ಲಿನ ಮರಾಠಿಗರಿಗೆ ಮಹಾರಾಷ್ಟ್ರ ನೆರವು ಪ್ರಕಟ

ಕೇಂದ್ರಾಡಳಿತ ಮಾಡಿ- ಠಾಕ್ರೆ:

ಇನ್ನು ವಿಧಾನಪರಿಷತ್ತಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಉದ್ಧÊವ ಠಾಕ್ರೆ, ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಕೇಂದ್ರ ಸರ್ಕಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.
‘ಇದು ಕೇವಲ ಭಾಷೆ ಮತ್ತು ಗಡಿಯ ಪ್ರಕರಣವಲ್ಲ, ಆದರೆ ಮಾನವೀಯತೆಯ ವಿಚಾರ. ಮರಾಠಿ ಮಾತನಾಡುವ ಜನರು ತಲೆಮಾರುಗಳಿಂದ ಗಡಿ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಅವರ ದೈನಂದಿನ ಜೀವನ, ಭಾಷೆ ಮತ್ತು ಜೀವನಶೈಲಿ ಮರಾಠಿ. ಈ ವಿಚಾರ ಸುಪ್ರೀಂ ಕೋರ್ಚ್‌ನಲ್ಲಿ ಬಾಕಿ ಇರುವವರೆಗೂ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು’ ಎಂದರು.

‘ಈ ವಿಚಾರದಲ್ಲಿ ಸಿಎಂ ಮೌನ ತಾಳಿದ್ದಾರೆ? ರಾಜ ಸರ್ಕಾರದ ನಿಲುವೇನು?’ ಎಂದು ಪ್ರಶ್ನಿಸಿದ ಅವರು, ‘ಕರ್ನಾಟಕ ಸರ್ಕಾರವೇ ವಾತಾವರಣವನ್ನು ಹಾಳು ಮಾಡುತ್ತಿದೆ’ ಎಂದು ಆರೋಪಿಸಿದರು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಪಾತ್ರನ್ನೂ ಪ್ರಶ್ನಿಸಿದರು. ‘ಎರಡೂ ಸದನಗಳ ಸದಸ್ಯರು ಗಡಿ ಕುರಿತ ‘ಕೇಸ್‌ ಫಾರ್‌ ಜಸ್ಟೀಸ್‌’ ಚಲನಚಿತ್ರವನ್ನು ವೀಕ್ಷಿಸಬೇಕು ಮತ್ತು ಮಹಾಜನ್‌ ಆಯೋಗದ ವರದಿ ಓದಬೇಕು’ ಎಂದು ಠಾಕ್ರೆ ಕೋರಿದರು.