ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಮತ್ತೆ ಕರ್ನಾಟಕ ವಿರುದ್ಧ ಕಿಡಿ
ಗಡಿ ವಿವಾದವನ್ನು ಕೆದಕಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ ಮೇಲೂ ಪದೇಪದೇ ಕರ್ನಾಟಕದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಮಂಗಳವಾರ ಪುನಃ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಕಿಡಿಕಾರಿದವು.
ನಾಗ್ಪುರ (ಡಿ.21): ಗಡಿ ವಿವಾದವನ್ನು ಕೆದಕಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ ಮೇಲೂ ಪದೇಪದೇ ಕರ್ನಾಟಕದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಮಂಗಳವಾರ ಪುನಃ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಕಿಡಿಕಾರಿದವು. ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್ ವಿಷಯ ಪ್ರಸ್ತಾಪಿಸಿ, ನಮ್ಮ ಪಕ್ಷದ ಶಾಸಕ ಹಸನ್ ಮುಷ್ರಿಫ್ ಸೋಮವಾರ ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರನ್ನು ಭೇಟಿಯಾಗಲು ತೆರಳಿದ್ದರು. ಆಗ ಗಡಿಯಲ್ಲಿ ಅವರ ಮೇಲೆ ಕರ್ನಾಟಕದ ಪೊಲೀಸರು ಲಾಠಿ ಎತ್ತಿದ್ದಾರೆ ಎಂದು ಆರೋಪಿಸಿದರು. ಅದಕ್ಕೆ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಕೂಡ ದನಿಗೂಡಿಸಿ, ಇದು ಸೂಕ್ಷ್ಮ ವಿಚಾರ ಎಂದು ಹೇಳಿದರು.
ನಂತರ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮೊದಲ ಬಾರಿ ಕೇಂದ್ರ ಸರ್ಕಾರ ಈ ವಿವಾದದಲ್ಲಿ ಮಧ್ಯಪ್ರವೇಶಿಸಿದೆ. ಅದು ಧನಾತ್ಮಕ ಹೆಜ್ಜೆ ಎಂದರು. ಸ್ಪೀಕರ್ ರಾಹುಲ್ ನಾರ್ವೇಕರ್ ಅವರು, ಗಡಿ ವಿವಾದವನ್ನು ವಿಸ್ತೃತವಾಗಿ ಚರ್ಚಿಸುವ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ ಎಂದು ಹೇಳಿ ಮಾತಿಗೆ ತೆರೆ ಎಳೆದರು. ಸೋಮವಾರ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರು ಆಯೋಜಿಸಿದ್ದ (ಅನುಮತಿ ಸಿಗದೆ ರದ್ದಾಗಿದೆ) ಮಹಾ ಮೇಳಾವದಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಎನ್‌ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುತ್ತಿದ್ದಾಗ ಅವರನ್ನು ಕರ್ನಾಟಕ ಪೊಲೀಸರು ಗಡಿಯಲ್ಲೇ ತಡೆದು ವಾಪಸ್ ಕಳುಹಿಸಿದ್ದರು.
ಅಂತರ್‌ಧರ್ಮೀಯ ವಿವಾಹ ಮೇಲೆ ಮಹಾರಾಷ್ಟ್ರ ಸರ್ಕಾರ ನಿಗಾ: ಮತ್ತೊಂದು ಶ್ರದ್ಧಾ ಪ್ರಕರಣ ಘಟಿಸದಂತೆ ಕ್ರಮ..!
ಮಹಾಮೇಳಾವ್‌ಕ್ಕೆ ಅನುಮತಿ ನಿರಾಕರಿಸಿದ್ದು ಸರಿಯಲ್ಲ: ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಮ್ಮಿಕೊಂಡಿದ್ದ ಮಹಾಮೇಳಾವ್‌ಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡದ ಕ್ರಮವನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಖಂಡಿಸಿದ್ದಾರೆ. ನಾಗಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದ ಮರಾಠಿ ಭಾಷಿಕರ ಪರವಾಗಿ ಮಹಾರಾಷ್ಟ್ರ ಸರ್ಕಾರವಿದೆ. ಮರಾಠಿ ಭಾಷಿಕರ ಮೇಲೆ ಅನ್ಯಾಯ ಆಗದಂತೆ ನಾವು ನೋಡಿಕೊಳ್ಳುತ್ತೇವೆ.
ಎಂಇಎಸ್ ಪುಂಡರನ್ನು ಹದ್ದುಬಸ್ತಿನಲ್ಲಿಡುವ ತಂತ್ರ ಸಿದ್ಧವಾಗಿದೆ: ಸಿಎಂ ಬೊಮ್ಮಾಯಿ
ಮಹಾಮೇಳಾವ್‌ಗೆ ಅವಕಾಶ ಕೊಡದಿರುವುದು ಸರಿಯಲ್ಲ. ಗಡಿ ವಿವಾದ ವಿಚಾರದಲ್ಲಿ ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಈಗಾಗಲೇ ಜತ್ ಸೇರಿದಂತೆ ಗಡಿಭಾಗದ ನೀರಾವರಿ ಯೋಜನೆಗೆ .2 ಸಾವಿರ ಕೋಟಿ ಘೋಷಿಸಿದ್ದಾರೆ. ಮಹಾರಾಷ್ಟ್ರ ಯಾವಾಗಲೂ ಗಡಿಭಾಗದ ಮರಾಠಿಗರ ಜೊತೆಗಿದೆ ಎಂದಿದ್ದಾರೆ. ಗಡಿ ವಿವಾದ ವಿಚಾರವಾಗಿ ಮಾಡಿದ್ದ ಟ್ವೀಟ್ ನನ್ನದಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಗೃಹ ಸಚಿವ ಅಮಿತ್ ಶಾ ಮುಂದೆ ಹೇಳಿದ್ದಾರೆ. ಹೀಗಾಗಿ, ಸಿಎಂ ಹೆಸರಿನ ಟ್ವೀಟ್ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎನ್ನುವುದನ್ನು ಬೊಮ್ಮಾಯಿ ಅವರನ್ನು ನಾವು ಕೇಳುತ್ತೇವೆ ಎಂದರು.