ಬೆಂಗಳೂರು (ಫೆ.01):  ಬೆಳಗಾವಿ ಗಡಿ ವಿಚಾರವಾಗಿ ಪದೇಪದೇ ಕೆಣಕುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಉಪಮುಖ್ಯಮಂತ್ರಿಗಳಾಂದ ಗೋವಿಂದ ಕಾರಜೋಳ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಸೇರಿದಂತೆ ಅನೇಕ ಮುಖಂಡರು ಪಕ್ಷಭೇದವಿಲ್ಲದೆ ಹರಿಹಾಯ್ದಿದ್ದಾರೆ. ಭಾಷಾ ಸೌಹಾರ್ದತೆ ಕದಡಲು ಪ್ರಯತ್ನಿಸಿರುವ ಅವರು ಛತ್ರಪತಿ ಶಿವಾಜಿ ಮೂಲತಃ ಕನ್ನಡಿಗರು ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಟಾಂಗ್‌ ನೀಡಿದ್ದಾರೆ.

ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷಣ ಸವದಿ ಇಬ್ಬರೂ ಛತ್ರಪತಿ ಶಿವಾಜಿ ಮಹಾರಾಜರು ಮೂಲತಃ ಕನ್ನಡಿಗರೆಂದು ಪ್ರಸ್ತಾಪಿಸಿದ್ದಾರೆ.

ಉದ್ಧವ್‌ ಠಾಕ್ರೆ ತಮ್ಮ ಕುರ್ಚಿಗಾಗಿ ಭಾಷಾ ಸೌಹಾರ್ದತೆ ಕುಲಗೆಡಿಸುವ ಕಾರ್ಯ ಮಾಡಬಾರದೆಂದು ಅಭಿಪ್ರಾಯಪಟ್ಟಿರುವ ಗೋವಿಂದ ಕಾರಜೋಳ, ಛತ್ರಪತಿ ಶಿವಾಜಿ ಮಹಾರಾಜರು ಮೂಲತಃ ಕನ್ನಡಿಗರು ಎಂಬುದನ್ನು ಮಹಾರಾಷ್ಟ್ರ ಸಿಎಂ ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಭಾರತದ ಇತಿಹಾಸವನ್ನು ಉದ್ಧವ್‌ ಠಾಕ್ರೆ ಸರಿಯಾಗಿ ಅಧ್ಯಯನ ಮಾಡಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಮೂಲವೇ ಕನ್ನಡ. ಗದಗ ಜಿಲ್ಲೆಯ ಸೊರಟೂರಿನವರು ಮೂಲ ಪುರುಷ ಬೆಳ್ಳಿಯಪ್ಪ. ಬರ ಬಂದ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಹೋಗಿ ನೆಲೆಸುತ್ತಾರೆ. ನಾಲ್ಕನೇ ತಲೆಮಾರಿಗೆ ಛತ್ರಪತಿ ಶಿವಾಜಿ ಮಹಾರಾಜರು ಬರುತ್ತಾರೆ. ಅವರ ಮೂಲ ನೆಲ ಕನ್ನಡ ಎಂದಿದ್ದಾರೆ.

ಉದ್ಧವ್ ಉದ್ಧಟತನಕ್ಕೆ ಮರಾಠಿಗರಿಂದಲೇ ವಿರೋಧ: ಮೊದ್ಲು ಮಹಾರಾಷ್ಟ್ರದ ಸಮಸ್ಯೆ ಪರಿಹರಿಸಿ ಎಂದ ಜನ ...

ಲಕ್ಷ್ಮಣ ಸವದಿ ಅವರು ಕೂಡ ಶಿವಾಜಿ ಪೂರ್ವಜರು ಕರ್ನಾಟಕದ ಗದಗ ಜಿಲ್ಲೆಯವವರು ಎಂದಿದ್ದಾರೆ. ಮಹಾರಾಷ್ಟ್ರದ ಅಘಾಡಿ ಸರ್ಕಾರದಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂಬಂತಾಗಿದೆ ಪರಿಸ್ಥಿತಿ ಎಂದು ಮೂದಲಿದ್ದಾರೆ. ಅಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಜನರ ಗಮನ ಬೇರೆಡೆ ಸೆಳೆಯಲು ಠಾಕ್ರೆ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇವೇಳೆ ಜನಪ್ರಿಯತೆಗೋಸ್ಕರ ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೇ ಗಡಿ ವಿಚಾರವನ್ನು ತೆಗೆಯುತ್ತಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಟೀಕಿಸಿದ್ದಾರೆ. ಯಾವ ವ್ಯಕ್ತಿಯ ಜನಪ್ರಿಯತೆ ಕಡಿಮೆಯಾಗುತ್ತದೋ ಆಗ ಆತ ಯಾರು ಬಲಿಷ್ಠನಾಗಿರುತ್ತಾನೋ ಅವನಿಗೆ ಬೈಯುತ್ತಾನೆ. ಮಹಾರಾಷ್ಟ್ರ ಮುಖ್ಯಮಂತ್ರಿಯ ಪಾಪ್ಯುಲಾರಿಟಿ ಕಡಿಮೆಯಾಗುತ್ತಿದೆ. ಕರ್ನಾಟಕದ ಭೂಮಿ ಬಗ್ಗೆ ಮಾತನಾಡಿದರೆ ಮರಾಠಿಗರು ತನ್ನ ಪರವಾಗಿ ಇರುತ್ತಾರೆ ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಾಜಿ ಪ್ರಧಾನಿ ಖಡಕ್ ಮಾತು ...

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು, ರಾಜಕೀಯ ಉದ್ದೇಶದಿಂದ ಗಡಿ ವಿವಾದ ಕೆಣಕಿದ್ದು ಇದಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಕರ್ನಾಟಕ ಎಂದೆಂದಿಗೂ ಮರಾಠಿಗರಿಗೆ ಅನ್ಯಾಯ ಮಾಡಿಲ್ಲ ಎಂದಿದ್ದಾರೆ.

ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ‘ಅವಾ ಉದ್ದವ್‌ ಠಾಕ್ರೆ ಅಲ್ಲ, ಉದ್ಯೋಗಿಗೇಡಿ ಠಾಕ್ರೆ ಇದ್ದಾನೆ. ಆತನನ್ನು ಧಾರವಾಡಕ್ಕೆ ಕರೆಸಿ ಮೆಂಟಲ್‌ ಆಸ್ಪತ್ರೆಗೆ ಸೇರಿಸಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.