ಮಧುಕರ್ ಶೆಟ್ಟಿ ರಾಜೀನಾಮೆ ನೀಡಲು ಯೋಚಿಸಿದ್ದರು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. 

ಬೆಂಗಳೂರು[ಡಿ.30]: ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಐಪಿಎಸ್‌ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿಅವರು ಲೋಕಾಯುಕ್ತದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೇ ತಮ್ಮ ಕರ್ತವ್ಯಕ್ಕೆ ರಾಜೀನಾಮೆ ನೀಡುವ ಆಲೋಚಿಸಿದ್ದರು. ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಅಜಯ್‌ ಕುಮಾರ್‌ ಸಿಂಗ್‌ ಅವರ ಮೂಲಕ ರಾಜೀನಾಮೆ ನೀಡದಂತೆ ಮನವೊಲಿಸಲಾಯಿತು ಎಂದು ಮಾಜಿ ಸಚಿವ ಹಾಲಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Brother in Arms: ಅಣ್ಣಾಮಲೈ ಕಂಡಂತೆ ಮಧುಕರ್ ಶೆಟ್ಟಿ!

ತೀವ್ರ ಅನಾರೋಗ್ಯದಿಂದ ನಿಧನರಾಗಿರುವ ಐಪಿಎಸ್‌ ಅಧಿಕಾರಿ ಮಧುಕರ ಶೆಟ್ಟಿಅವರ ಕುರಿತು ಕೆಲವೊಂದು ಮಾಹಿತಿಗಳನ್ನು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಹಂಚಿಕೊಂಡ ಅವರು, ಮಧುಕರ ಶೆಟ್ಟಿಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಕಾರಣಾಂತರಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಮೆರಿಕಕ್ಕೆ ಹೋಗಿ ನೆಲೆಸುವ ಯೋಚನೆ ಮಾಡಿದ್ದರು. ಅದು ಹೇಗೋ ನನಗೆ ತಿಳಿದಿದ್ದರಿಂದ ಕೂಡಲೇ ಅಂದು ಅಗ್ನಿಶಾಮಕದಳದ ಎಡಿಜಿಪಿಯಾಗಿದ್ದ ಅಜಯ್‌ ಕುಮಾರ್‌ ಸಿಂಗ್‌ ಅವರನ್ನು ಸಂಪರ್ಕಿಸಿ ಇಂತಹ ದಕ್ಷ ಅಧಿಕಾರಿಯನ್ನು ನಾವು ಕಳೆದುಕೊಳ್ಳಬಾರದು. ದಯಮಾಡಿ ಅವರನ್ನು ಕರೆಸಿ ಮಾತನಾಡಿ ಇಲಾಖೆಯಲ್ಲಿ ಉಳಿಸಿಕೊಳ್ಳುವ ಕೆಲಸ ಮಾಡುವಂತೆ ಮನವಿ ಮಾಡಿದೆ. ಕೆಲ ದಿನಗಳಲ್ಲೇ ಅಜಯ್‌ ಕುಮಾರ್‌ ಸಿಂಗ್‌ ಅವರು ಮಧುಕರ ಶೆಟ್ಟಿಅವರೊಂದಿಗೆ ಚರ್ಚಿಸಿ ರಾಜೀನಾಮೆ ನೀಡುವ ಯೋಚನೆಯಿಂದ ಅವರು ಹಿಂದೆ ಸರಿಯುವಂತೆ ಮಾಡಿದರು ಎಂದು ತಿಳಿಸಿದರು.

ಮಧುಕರ್ ಶೆಟ್ಟಿ ನಿಧನಕ್ಕೆ ರವಿ ಡಿ. ಚನ್ನಣ್ಣನವರ್ ಕಂಬನಿ ಮಿಡಿದಿದ್ದು ಹೀಗೆ

ಮತ್ತೊಂದು ಘಟನೆ ನೆನಪಿಸಿಕೊಂಡ ಅವರು, ಮಧು​ಕರ್‌ ಶೆಟ್ಟಿಅವರು ಎಂತಹ ದಿಟ್ಟಅಧಿಕಾರಿಯಾಗಿದ್ದರು ಎಂದರೆ, ಒಮ್ಮೆ ಗ್ಯಾಂಗ್‌ವೊಂದು ದೊಡ್ಡ ಅವ್ಯವಹಾರ ನಡೆ​ಸಲು ಒಂದೆಡೆ ಸೇರುತ್ತಿದ್ದ ಮಾಹಿತಿ ವ್ಯಕ್ತಿಯೊಬ್ಬರಿಂದ ನನಗೆ ಸಿಕ್ಕಿತು. ಆ ಕೂಡಲೇ ನಾನು ಮಧುಕರ ಶೆಟ್ಟಿಅವರಿಗೆ ಕರೆ ಮಾಡಿ ಆ ಗ್ಯಾಂಗ್‌ ಸಭೆ ಸೇರುವ ಸ್ಥಳ ಸಮೇತ ಮಾಹಿತಿ ನೀಡಿದೆ. ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿ ಪೂರ್ಣ ಗ್ಯಾಂಗ್‌ ಅನ್ನು ಬಂಧಿಸಿದರು. ಅಲ್ಲದೆ, ನನಗೂ ಕರೆ ಮಾಡಿ ಇಂತಹ ಸಮಾಜಘಾತುಕರನ್ನು ಬಂಧಿಸದೇ ಇದ್ದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಮಾಹಿತಿ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಆ ನಂತರ ನನಗೆ ಆ ಗ್ಯಾಂಗ್‌ ಬಗ್ಗೆ ಮಾಹಿತಿ ನೀಡಿದ್ದ ವ್ಯಕ್ತಿ ಕೂಡ ಕರೆ ಮಾಡಿ ಮಧುಕರ ಶೆಟ್ಟಿಅವರ ಕರ್ತವ್ಯಪ್ರಜ್ಞೆ, ಧೈರ್ಯವನ್ನು ಕೊಂಡಾಡಿದ್ದರು ಎಂದು ಹೇಳಿದರು.

ವರ್ಷಾಂತ್ಯಕ್ಕೆ ಮತ್ತೊಂದು ಆಘಾತ, ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್‌ ಶೆಟ್ಟಿ ನಿಧನ

ಇನ್ನು, ಮಧುಕರ ಶೆಟ್ಟಿಅವರು ತಮ್ಮ ತಂದೆಯವರ ಹೆಸರಲ್ಲಿ ಸ್ಥಾಪಿಸಿದ್ದ ಟ್ರಸ್ಟ್‌ ಅನ್ನೂ ಇತ್ತೀಚೆಗೆ ಮುಚ್ಚಿದ್ದರೆಂದು ತಿಳಿಯಿತು. ಟ್ರಸ್ಟ್‌ಗೆ ಬೇರೆಯವರ ಹಣ ಬರುತ್ತದೆ. ಅದರ ಅಗತ್ಯವಿಲ್ಲ. ಟ್ರಸ್ಟ್‌ ಇಲ್ಲದೆಯೇ ಸಮಾಜಕ್ಕೆ ನಾವು ಮಾಡಬೇಕಾದ ಕೆಲಸವನ್ನು ಮಾಡೋಣ ಎಂದು ಟ್ರಸ್ಟ್‌ ಮುಚ್ಚಿದ್ದರು. ಇದು ಅವರ ಪ್ರಾಮಾಣಿಕತೆಗೆ ಮತ್ತೊಂದು ನಿದರ್ಶನ ಎಂದು ಸುರೇಶ್‌ ಕುಮಾರ್‌ ಸ್ಮರಿಸಿದರು.