Asianet Suvarna News Asianet Suvarna News

Bengaluru Mysuru Expressway: ಬೆಂಗ್ಳೂರು-ಮೈಸೂರು ದಶಪಥ ವರವೇ? ಶಾಪವೇ?

ನೂತನ ಎಕ್ಸ್‌ಪ್ರೆಸ್‌ ಹೆದ್ದಾರಿಯ ಅವೈಜ್ಞಾನಿಕತೆ ಬಗ್ಗೆ ಮುಖ್ಯಮಂತ್ರಿಗೆ ಶಾಸಕ ತಮ್ಮಣ್ಣ ಬಹಿರಂಗ ಪತ್ರ

Maddur MLA DC Thammanna Talks Over Bengaluru Mysuru Expressway grg
Author
First Published Sep 16, 2022, 11:22 AM IST

ಮದ್ದೂರು ಶಾಸಕ: ಡಿ.ಸಿ.ತಮ್ಮಣ್ಣ

ಮಂಡ್ಯ(ಸೆ.16):  ಹಿಂದೆ ಬೆಂಗಳೂರು, ಮೈಸೂರು ಮಧ್ಯೆ ದ್ವಿಪಥ ರಸ್ತೆಯಿತ್ತು. ಅದನ್ನು ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಚತುಷ್ಪಥ ಮಾಡಲಾಯಿತು. ಅದರಿಂದಾಗಿ ರಸ್ತೆಯ ಅಕ್ಕಪಕ್ಕ ಕೈಗಾರಿಕೆಗಳು ಬಂದು, ಸಾವಿರಾರು ಉದ್ಯೋಗ ಸೃಷ್ಟಿಯಾಗಿ, ಗ್ರಾಮೀಣ ಜನರ ಜೀವನ ಉತ್ತಮಗೊಂಡಿತು. ವಾಣಿಜ್ಯ, ವ್ಯಾಪಾರ ಕೂಡ ಬೆಳವಣಿಗೆ ಕಂಡಿತು. ಆದರೆ ಈಗ ಇದೇ ರಸ್ತೆಯನ್ನು ದಶಪಥ ಮಾಡಲಾಗುತ್ತಿದೆ. ಇದು ಸಾವಿರಾರು ಜನರ ಉದ್ಯೋಗವನ್ನೇ ಕಿತ್ತುಕೊಳ್ಳಲಿದೆ. ಜೊತೆಗೆ ಅವೈಜ್ಞಾನಿಕ ಕಾಮಗಾರಿಯು ಅಪಾಯಕ್ಕೂ ಆಹ್ವಾನ ನೀಡುವಂತಿದೆ.

ಮಾನ್ಯ ಮುಖ್ಯಮಂತ್ರಿಗಳೇ,

ಬೆಂಗಳೂರು-ಮೈಸೂರು ಮಧ್ಯೆ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸರ್‌.ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ದ್ವಿಪಥದ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದರು. 8 ದಶಕಗಳ ಕಾಲ ಉಭಯ ನಗರಗಳಿಗೆ ಸಂಪರ್ಕ ಕಲ್ಪಿಸಿದ್ದ ಈ ರಸ್ತೆಯು 2001ರವರೆಗೆ ಅಲ್ಲಲ್ಲಿ ಹಾಳಾಗಿ, ಹಾಳಾದ ಜಾಗದಲ್ಲಿ ಡಾಂಬರೀಕರಣಗೊಂಡು ಜನರ ಸಂಚಾರಕ್ಕೆ ಒದಗಿಬರುತ್ತಿತ್ತು. 1998ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿಗೆ ಟೊಯೋಟಾ ಕಿರ್ಲೋಸ್ಕರ್‌ ಮೋಟಾರು ವಾಹನ ಕಾರ್ಖಾನೆ ಬಂದು ವಾಹನ ದಟ್ಟಣೆ ಜಾಸ್ತಿಯಾದ ಮೇಲೆ ಟೊಯೋಟಾ ಕಂಪನಿಯವರು ಬಿಡದಿಯವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಕೋರಿಕೆ ಸಲ್ಲಿಸಿದರು. ಆಗ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ. ನಾನು ಕಿರುಗಾವಲು ಶಾಸಕ. ಸಭೆಯೊಂದರಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ವಿಷಯ ಬಂದಾಗ ನಾನು ಬೇಡ ಅಂದೆ. ಏಕೆಂದು ಕೃಷ್ಣ ಅವರು ಅಚ್ಚರಿಯಿಂದ ಕೇಳಿದರು. ಆಗ ನಾನು, ಬರೀ ಬಿಡದಿಯವರೆಗೆ ಚತುಷ್ಪಥ ನಿರ್ಮಾಣ ಬೇಡ, ಬೆಂಗಳೂರು-ಮೈಸೂರು ಮಧ್ಯೆ ಪೂರ್ಣ ಪ್ರಮಾಣದಲ್ಲಿ ಮಾಡುವುದಾದರೆ ನನ್ನ ಅಭ್ಯಂತರವಿಲ್ಲ ಎಂದೆ. ಕೃಷ್ಣ ಅವರು ಅದಕ್ಕೆ ಒಪ್ಪಿ 300 ಕೋಟಿ ರು. ಅನುದಾನ ನೀಡಿದರು. ಹೀಗೆ ಆರಂಭವಾದ ಬೆಂಗಳೂರು-ಮೈಸೂರು ಚತುಷ್ಪಥ ಕಾಮಗಾರಿ 2004ರಲ್ಲಿ ಪೂರ್ಣಗೊಂಡಿತು.

ಬೆಂಗಳೂರು-ಮೈಸೂರು ಹೈವೇ: ಹೆದ್ದಾರಿ ಪ್ರಾಧಿಕಾರ ವಿರುದ್ಧ ಕ್ರಿಮಿನಲ್‌ ಕೇಸು

ಈ ಹೆದ್ದಾರಿಯ ಕಾರಣ ರಸ್ತೆಯ ಅಕ್ಕಪಕ್ಕ ಎರಡೂ ಭಾಗದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಪ್ರಾರಂಭವಾಗಿ ಪ್ರಗತಿಯ ಶಕೆ ಆರಂಭವಾಯಿತು. ಸುಮಾರು 200 ಗ್ರಾಮಗಳ ಜನರ ಆರ್ಥಿಕ ಅಭಿವೃದ್ಧಿಯ ಜೊತೆಗೆ 35 ಸಾವಿರ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಿತು.

ಈಗ ಸಾವಿರಾರು ಉದ್ಯೋಗ ನಷ್ಟ

ಈಗ ಬೆಂಗಳೂರು-ಮೈಸೂರು ಮಧ್ಯೆ ದಶಪಥ ಹೆದ್ದಾರಿ ನಿರ್ಮಾಣವಾಗುತ್ತಿದೆ. ಈ ಹೆದ್ದಾರಿಯು ಅಭಿವೃದ್ಧಿಗೆ ಕೊಡುಗೆ ನೀಡುವುದರ ಬದಲು ಹೆದ್ದಾರಿಯ ಪಕ್ಕದ ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಲಿದೆ. ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಹೆದ್ದಾರಿಯ ಎರಡೂ ಬದಿಯ ಹೋಟೆಲ್‌, ಡಾಬಾ ಮತ್ತು ಸರಕು ಮಾರಾಟಗಾರರಿಗೆ ತೊಂದರೆಯಾಗಿತ್ತು. ಇನ್ನುಮುಂದೆ ಅವು ಶಾಶ್ವತವಾಗಿ ಮುಚ್ಚುವ ಸ್ಥಿತಿಗೆ ತಲುಪುತ್ತವೆ. ಈಗಾಗಲೇ ಕೋಟ್ಯಂತರ ರು. ಸಾಲ ಮಾಡಿ, ಹೂಡಿಕೆ ಮಾಡಿರುವವರು ದಿವಾಳಿಯಾಗುವುದರ ಜೊತೆಗೆ ಅನೇಕ ಸಾವಿರ ಉದ್ಯೋಗ ನಷ್ಟವಾಗಿ, ಈಗಾಗಲೇ ಉದ್ಯೋಗ ಕಂಡುಕೊಂಡಿದ್ದ ಗ್ರಾಮೀಣ ಯುವಕ-ಯುವತಿಯರು ಪುನಃ ನಿರುದ್ಯೋಗಿಗಳಾಗುವ ಸಂಭವವಿದೆ.

ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ

ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಹೇಳುವುದಾದರೆ, ಕೇಂದ್ರ ಸರ್ಕಾರ ಮಾಡಿರುವ ಯೋಜನೆ ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಬದಲಾಗಿ ಗುತ್ತಿಗೆದಾರರಿಗೆ ಅನುಕೂಲ ಮಾಡುವ ಮತ್ತು ಟೋಲ್‌ ಕಲೆಕ್ಷನ್‌ನಿಂದ ಕೇಂದ್ರ ಸರ್ಕಾರ ಹಣ ಮಾಡುವಂತಹ ಯೋಜನೆಯಾಗಿದೆ.

1. ಬೆಂಗಳೂರಿಗೆ ಹತ್ತಿರದ ಕಣಿಮಿಣಿಕೆ ಟೋಲ್‌ ಪ್ಲಾಜಾದ ಮೇಲ್ಭಾಗದಲ್ಲಿ ಡಾ.ರಾಜಕುಮಾರ್‌ ಅವರ ತೋಟದ ಹಿಂಭಾಗ ಕೆರೆಯಿದೆ. ಈ ಕೆರೆಗೆ ಮೇಲ್ಬಾಗದ ಫಾರೆಸ್ಟ್‌ ಜಮೀನಿನಿಂದ ನೀರು ಬರುತ್ತದೆ. ಟೋಲ್‌ಪ್ಲಾಜಾದ ಮಟ್ಟಕೆರೆಯ ಮಟ್ಟಕ್ಕಿಂತ ಕೆಳಗಿರುವುದರಿಂದ ಮುಂದೆಯೂ ಕೂಡ ಟೋಲ್‌ಪ್ಲಾಜಾ ಏರಿಯಾ ಕೆರೆಯಂತಾಗುವ ಸಂಭವವಿದೆ. ಇದರ ಜೊತೆಗೆ ವಂಡರ್‌ಲಾ ಅಂಡರ್‌ಪಾಸ್‌ ನೀರು ಕೂಡ ಈ ಕಡೆಗೆ ಹರಿದುಬರುವುದರಿಂದ ಈ ನೀರನ್ನು ಹೊರ ಸಾಗಿಸಲು ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡಬೇಕಿದೆ.

2. ಬಿಡದಿ ಅಂಡರ್‌ಪಾಸ್‌, ಸಂಗನಬಸವನದೊಡ್ಡಿ ಕೆಳರಸ್ತೆ ಮತ್ತು ರಾಮನಗರ ಬೈಪಾಸ್‌ಗೆ ಮೊದಲು ಬರುವ ಅಂಡರ್‌ಪಾಸ್‌ಗಳಲ್ಲಿ ಶೇಖರಣೆಯಾಗುವ ನೀರನ್ನು ಹೊರಸಾಗಿಸಲು ಹಾಗೂ ಮಳೂರು ಬಳಿ ಬರುವ ಅಂಡರ್‌ಪಾಸ್‌ಗೆ ಬರುವ ನೀರು ಸಾಗಾಣಿಕೆ ಮಾಡಲು ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡಬೇಕಿದೆ.

3. ಆರು ಪಥದ ಎಕ್ಸ್‌ಪ್ರೆಸ್‌ ರಸ್ತೆಯ ಎರಡೂ ಕಡೆ ನಿರ್ಮಾಣ ಮಾಡಿರುವ ದ್ವಿಪಥ ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.

(ಅ) ಇಲ್ಲಿ ಎರಡು ವಾಹನ ಚಾಲನೆಗೆ ಬೇಕಾದ 7.50 ಮೀ. ಡಾಂಬರೀಕರಣ ರಸ್ತೆ ಮಾತ್ರ ನಿರ್ಮಿಸಿದೆ. ಈ ರಸ್ತೆಯ ಎರಡೂ ಬದಿ ಕನಿಷ್ಠ 2 ಮೀಟರ್‌ ಶೋಲ್ಡರ್‌ ಜಾಗವಿರಬೇಕಿತ್ತು. ಇದರಿಂದ ಎರಡು ವಾಹನ ಒಂದೇ ದಿಕ್ಕಿನಲ್ಲಿ ಚಲಿಸುವಾಗ ಸ್ವಲ್ಪ ವ್ಯತ್ಯಾಸವಾದರೂ ಅಪಘಾತವಾಗಬಹುದು.

(ಆ) ರಸ್ತೆಯ ಒಂದು ಬದಿಗೆ ಗ್ರಾಮಗಳು ಬರುವುದರಿಂದ ಶೋಲ್ಡರ್‌ ಜಾಗವಿಲ್ಲದ ಕಾರಣ ಅಪಘಾತದ ಸಮಯದಲ್ಲಿ ನೇರವಾಗಿ ಮನೆಗಳಿಗೆ ವಾಹನಗಳು ನುಗ್ಗಬಹುದು. ರಸ್ತೆಯ ಒಳಚರಂಡಿಗೆ ಹೊಂದಿಕೊಂಡಿರುವ ಮನೆಯ ಜನರಿಗೆ ಓಡಾಟಕ್ಕೆ ಬೇಕಾದ ಫುಟ್‌ಪಾತ್‌ ಜಾಗವಿಲ್ಲದಿರುವುದರಿಂದ ಮಕ್ಕಳು ನೇರವಾಗಿ ರಸ್ತೆಗೆ ಬಂದಾಗ ಅಪಘಾತವಾಗಬಹುದು.

(ಇ) ಸರ್ವಿಸ್‌ ರಸ್ತೆಯ ಬದಿಯಲ್ಲಿರುವ ಗ್ರಾಮಗಳ ಬಳಿ ಬಸ್‌ಬೇ, ಪ್ರಯಾಣಿಕರ ತಂಗುದಾಣಕ್ಕೆ ವ್ಯವಸ್ಥೆ ಮಾಡದಿರುವುದರಿಂದ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳಬೇಕಿದೆ.

(ಈ) ಸರ್ವಿಸ್‌ ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಮನೆಗಳು ಒಳಚರಂಡಿಗೆ ಹೊಂದಿಕೊಂಡಿವೆ. ಮನೆಯಲ್ಲಿ ವಾಸಿಸುವವರಿಗೆ ಶಬ್ದಮಾಲಿನ್ಯ, ವಾಯುಮಾಲಿನ್ಯ ಹಾಗೂ ರಸ್ತೆ ಮಟ್ಟದಿಂದ ಡ್ರೈನೇಜ್‌ ಮಟ್ಟಒಂದು ಅಡಿ ಮೇಲಿರುವುದರಿಂದ ಮನೆಗಳಿಗೆ ನೇರವಾಗಿ ರಸ್ತೆಯಿಂದ ದ್ವಿಚಕ್ರ ವಾಹನಗಳನ್ನು ಸಾಗಿಸಲು ಸಾದ್ಯವಿಲ್ಲದಂತಹ ಪರಿಸ್ಥಿತಿ ಇದೆ.

(ಉ) ಕೆಲವು ಕಡೆ ಎರಡೂ ಕಡೆಯ ದ್ವಿಪಥದ ರಸ್ತೆ, ಆರುಪಥದ ಎಕ್ಸ್‌ಪ್ರೆಸ್‌ ರಸ್ತೆ ಮೇಲ್ಮಟ್ಟದಲ್ಲಿ ಸಾಗುವುದರಿಂದ ಅಪಘಾತ ತಪ್ಪಿಸಲು ಈಗ ಅಳವಡಿಸಿರುವ ಅಲ್ಯುಮಿನಿಯಂ ಬ್ಯಾರಿಕೇಡ್‌ಗಳಿಂದ ಸಾಧ್ಯವಿಲ್ಲ. ಒಂದು ವೇಳೆ ಅವಘಡ ಸಂಭವಿಸಿದರೆ, ಬ್ಯಾರಿಕೇಡ್‌ ಮುರಿದುಕೊಂಡು ನೇರವಾಗಿ ಕೆಳಮಟ್ಟದಲ್ಲಿ ಹೆಚ್ಚು ವೇಗವಾಗಿ ಸಾಗುವ ವಾಹನಗಳ ಮೇಲೆ ಬಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಹಾನಿಯಾಗುವ ಸಾಧ್ಯತೆಗಳಿವೆ. ಅದೇ ರೀತಿ ಕೆಲವು ಕಡೆ 6 ಪಥದ ಎಕ್ಸ್‌ಪ್ರೆಸ್‌ ರಸ್ತೆಯನ್ನು ಸವೀರ್‍ಸ್‌ ರಸ್ತೆಗಳ ಮೇಲ್ಭಾಗದಲ್ಲಿ ನಿರ್ಮಿಸಿರುವುದರಿಂದ ಅಲ್ಲಿಯೂ ಅಪಘಾತವಾದಾಗ ಹೆಚ್ಚಿನ ಪ್ರಾಣಹಾನಿಯಾಗಲಿದೆ. ಆದ್ದರಿಂದ ಬ್ಯಾರಿಕೇಡ್‌ ಬದಲು ಆರ್‌ಸಿಸಿ ಪ್ಯಾರಾಪೆಟ್‌ ನಿರ್ಮಾಣ ಮಾಡಬೇಕಿದೆ.

(ಊ) 6 ಪಥದ ರಸ್ತೆ ಮತ್ತು ದ್ವಿಪಥದ ರಸ್ತೆ ಸಮನಾಂತರವಾಗಿರುವಾಗ ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಹಾಕಿರುವ ಚೈನ್‌ಲಿಂಕ್‌ ಫೆನ್ಸಿಂಗ್‌ನಿಂದ ಅಪಘಾತ ತಡೆಯಲಾಗದು. ಫೆನ್ಸಿಂಗ್‌ ಮುರಿದು ಪಕ್ಕದ ರಸ್ತೆಗೆ ವಾಹನ ನುಗ್ಗಿ ಅಪಘಾತವಾಗಬಹುದು.

(ಋು) ಹಲವು ಕಡೆ ನಿರ್ಮಾಣ ಮಾಡಿರುವ ಅಂಡರ್‌ಪಾಸ್‌ಗಳನ್ನು ಸೂಕ್ತ ಸ್ಥಳಗಳಲ್ಲಿ ನಿರ್ಮಾಣ ಮಾಡದೆ, ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಮತ್ತು ಅಪಘಾತಗಳಿಗೆ ರಹದಾರಿಯಾಗಿದೆ. ಉದಾಹರಣೆಗೆ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಬಳಿ ನಿರ್ಮಿಸಿರುವ ಅಂಡರ್‌ಪಾಸ್‌.

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಸರಿ ಎನ್ನುವವರು ಬಂದು ನೋಡಲಿ: ಪ್ರತಾಪ್‌ ಸಿಂಹ ವಿರುದ್ಧ ಸುಮಲತಾ ಕಿಡಿ

(ಎ) ಸರ್ಕಾರದ ಆದೇಶದ ಪ್ರಕಾರ ಕೆರೆಗಳಲ್ಲಿ ಮಣ್ಣು ತೆಗೆಯುವಾಗ 1 ಮೀಟರ್‌ನಿಂದ 1.50 ಮೀಟರ್‌ ಆಳದವರೆಗೆ ಮಾತ್ರ ಸಮತಟ್ಟಾಗಿ ಮಣ್ಣು ತೆಗೆಯಬೇಕು. ಆದರೆ ಇಲ್ಲಿ ಅವೈಜ್ಞಾನಿಕವಾಗಿ ಮಣ್ಣು ಸಿಗುವ ಜಾಗದಲ್ಲಿ ಸುಮಾರು 3 ಮೀಟರ್‌ ಆಳಕ್ಕೆ ಮಣ್ಣು ತೆಗೆದು ಅಲ್ಲಲ್ಲಿ ಗುಂಡಿಗಳನ್ನು ಮಾಡಿದ್ದಾರೆ. ಈಗ ಕೆರೆಯ ಅಂಗಳ ಸಮತಟ್ಟು ಮಾಡಲು ಸರ್ಕಾರ ಹಣ ಖರ್ಚು ಮಾಡಬೇಕಿದೆ ಹಾಗೂ 40 ಟನ್‌ಗೂ ಹೆಚ್ಚು ಭಾರದ ಟಿಪ್ಪರ್‌ಗಳಲ್ಲಿ ಮಣ್ಣು ಸಾಗಿಸಿ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಅಂತೆಯೇ ಕಲ್ಲು ಗಣಿಗಾರಿಕೆ ಪ್ರದೇಶದಿಂದ ಜಲ್ಲಿ ಮತ್ತು ಬೌಲ್ಡ​ರ್‍ಸ್ ಸಾಗಾಣಿಕೆಯಿಂದಲೂ ಅಧ್ವಾನಗೊಂಡಿವೆ. ಕಲ್ಲು ಮತ್ತು ಮಣ್ಣು ಗಣಿಗಾರಿಕೆ ಆರಂಭವಾದ ದಿನದಿಂದಲೂ ಅನೇಕ ಬಾರಿ ನಾನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಗುತ್ತಿಗೆದಾರರ ಹಾಗೂ ಸಂಬಂಧಪಟ್ಟಅಧಿಕಾರಿಗಳ ಸಭೆ ನಡೆಸಿ, ರಸ್ತೆಗಳ ಮರು ನಿರ್ಮಾಣ, ದುರಸ್ತಿಗೆ ಸೂಚಿಸಿದ್ದೇನೆ. ಆದರೆ ಅಧಿಕಾರಿಗಳು ಇಲ್ಲಿಯವರೆಗೂ ರಸ್ತೆಗಳನ್ನು ದುರಸ್ತಿ, ಅಭಿವೃದ್ಧಿ ಮಾಡಿಲ್ಲ. ಇದರಲ್ಲಿ ಜಿಲ್ಲಾಡಳಿತವೇ ಗುತ್ತಿಗೆದಾರರ ಜೊತೆ ಶಾಮೀಲಾದಂತಿದೆ.

ಈ ಸಲಹೆಗಳನ್ನು ಪರಿಗಣಿಸಿ

1. ಹೆದ್ದಾರಿಯ ಎರಡೂ ಕಡೆ ಡ್ರೈನೇಜ್‌ನಿಂದ ಹೊರಗೆ ಕನಿಷ್ಠ 2 ಮೀಟರ್‌ ಬಫರ್‌ ಝೋನ್‌ ಬಿಡುವುದು.
2. ಹೆದ್ದಾರಿಯ ಎರಡೂ ಬದಿಯ ಗ್ರಾಮಗಳ ವ್ಯಾಪ್ತಿಯಲ್ಲಿ ಬಸ್‌ಬೇ, ಶೆಲ್ಟರ್‌ ಹಾಗೂ ಶೌಚಾಲಯ ನಿರ್ಮಾಣ ಹಾಗೂ ಹೆಚ್ಚು ವಾಹನ ದಟ್ಟಣೆಯ ಗ್ರಾಮಗಳಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡುವುದು.
3. ಹೆದ್ದಾರಿಯ ಅಕ್ಕಪಕ್ಕ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಾಲಿನ ಡೈರಿಗಳು ಹಾಗೂ, ಕೃಷಿಪತ್ತಿನ ಸಹಕಾರ ಸಂಘಗಳು, ದೇವಸ್ಥಾನಗಳು ಹೆದ್ದಾರಿಗೆ ಹೊಂದಿಕೊಂಡಿದ್ದರೆ, ಅಪಘಾತ ತಡೆಗೆ ಅವುಗಳಿಗೆ ಕಾಂಪೌಂಡ್‌ ನಿರ್ಮಿಸಬೇಕು.
4. ಪ್ರತಿ 100 ಕಿ.ಮೀ.ಗೆ ಒಂದರಂತೆ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರಾಮಾ ಸೆಂಟರ್‌ ನಿರ್ಮಾಣ, ಸಲಕರಣೆ ಮತ್ತು ಆಂಬುಲೆನ್ಸ್‌ ಒದಗಿಸುವುದು.
5. ಪ್ರತಿ 50 ಕಿ.ಮೀ.ನಲ್ಲಿ ಹೋಟೆಲ್‌, ಡಾಬಾ, ಮಾರಾಟ ಮಳಿಗೆಗಳಿಗೆ ಮತ್ತು ವಾಹನಗಳ ನಿಲುಗಡೆಗೆ ಜಾಗ ಮೀಸಲಿಡುವುದು ಮತ್ತು ಹೈಟೆಕ್‌ ಶೌಚಾಲಯ ನಿರ್ಮಾಣ.
6. ಪ್ರತಿ 100 ಕಿ.ಮೀ. ಅಂತರದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ, ಪಕ್ಕದ ಗ್ರಾಮಗಳು ಮತ್ತು ತಾಲ್ಲೂಕು ಕೇಂದ್ರಗಳಿಂದ ಬರುವ ರೈತರ ಸರಕುಗಳನ್ನು ಶೇಖರಣೆ ಮಾಡಲು ಗೋಡೌನ್‌ ವ್ಯವಸ್ಥೆ, ಸಾಗಾಣಿಕಾ ವ್ಯವಸ್ಥೆ, ಹೋಟೆಲ್‌, ಡಾಬಾ ಮತ್ತು ಗ್ರಾಮೀಣ ಮಾರುಕಟ್ಟೆಗೆ ವ್ಯವಸ್ಥೆ.
7. ಹೆದ್ದಾರಿಯಲ್ಲಿ ಸೂಕ್ತ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ.
8. ಹೆದ್ದಾರಿ ಕಾವಲಿಗೆ 50 ಕಿ.ಮೀ.ಗೆ ಒಂದರಂತೆ ಪೊಲೀಸ್‌ ಚೆಕ್‌ಪೋಸ್ಟ್‌ ನಿರ್ಮಾಣ ಮತ್ತು ಅದಕ್ಕೆ ಬೇಕಾದ ವಾಹನ ಹಾಗೂ ಸಿಬ್ಬಂದಿ ಒದಗಿಸುವುದು.

ಗಡ್ಕರಿಯವರ ಗಮನಕ್ಕೆ ತರುವಿರಾ?

ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವ್ಯಾಲ್ಯು ಇಂಜಿನಿಯರಿಂಗ್‌ ಅಳವಡಿಸಲು ತೀರ್ಮಾನಿಸಿದೆ. ಆದರೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಗುಣಮಟ್ಟದ ವಸ್ತುಗಳ ತಂತ್ರಜ್ಞಾನ ಬಳಕೆ, ಸುದೀರ್ಘ ಬಾಳಿಕೆ, ಸುರಕ್ಷತೆ ಮತ್ತು ಗುಣಮಟ್ಟಕ್ಕೆ ತಿಲಾಂಜಲಿ ನೀಡಲಾಗಿದೆ. ಈ ಹೆದ್ದಾರಿ ಕಾಮಗಾರಿಯಲ್ಲಿ ವ್ಯಾಲ್ಯು ಇಂಜಿನಿಯರಿಂಗ್‌ ಅಳವಡಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೇಳಬೇಕಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳ ಆಗರವಾಗಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಅಕ್ಕಪಕ್ಕದ ಗ್ರಾಮೀಣ ಜನರ ಬದುಕಿಗೆ ವರವೋ ಅಥವಾ ಶಾಪವೋ ಎಂಬುದನ್ನು ಪ್ರಜ್ಞಾವಂತ ಜನರೇ ತೀರ್ಮಾನಿಸಬೇಕಿದೆ. ದಶಪಥ ನಿರ್ಮಾಣ ನಮ್ಮ ಸಾಧನೆಯೆಂದು ಡಂಗೂರ ಬಾರಿಸುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಎಲ್ಲ ವಿಚಾರಗಳನ್ನು ತಾವು ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್‌ ಗಡ್ಕರಿಯವರ ಗಮನಕ್ಕೆ ತರಬೇಕೆಂದು ಕೋರುತ್ತೇನೆ.
 

Follow Us:
Download App:
  • android
  • ios