ದಾವ​ಣ​ಗೆರೆ: ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರದಿಂದ ಎಚ್‌.​ಎಂ.ರೇವಣ್ಣ ಅಲ್ಲ, ಯಾವ ಅಣ್ಣನನ್ನೇ ನಿಲ್ಲಿ​ಸಿ​ದರೂ ಗೆಲ್ಲಿ​ಸುತ್ತೇವೆ. ಒಂದೊಮ್ಮೆ ನಾನೇ ದಾವ​ಣ​ಗೆರೆ ಅಭ್ಯ​ರ್ಥಿ​ಯಾಗಿ ನಿಂತರೂ ಅಚ್ಚರಿ ಇಲ್ಲ ಎನ್ನುವ ಮೂಲ​ಕ ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೊಸ ಸಂಚ​ಲ​ನವನ್ನುಂಟು ಮಾಡಿದ್ದಾರೆ.

ತಾಲೂ​ಕಿನ ಬೆಳ​ವ​ನೂರು ಗ್ರಾಮ​ದಲ್ಲಿ ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿಗೆ ಭೂಮಿ​ಪೂಜೆ ನೆರ​ವೇ​ರಿಸಿ ಮಾತ​ನಾ​ಡಿದ ಅವರು, ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಅವರಿಗೆ ನಮ್ಮ ಬೆಂಬಲವಿದೆ. ಅವರನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ.

ಅಧಿ​ಕಾ​ರ​ದ​ಲ್ಲಿ​ ಯಾರಿ​ರು​ತ್ತಾರೋ ಅವರೇ ಮುಖ್ಯ​ಮಂತ್ರಿ. ನಮ್ಮ ಪಕ್ಷ​ದ​ವ​ರಿಗೆ ಒಬ್ಬ ಮುಖ್ಯ​ಮಂತ್ರಿ, ಮತ್ತೊಂದು ಪಕ್ಷಕ್ಕೆ ಇನ್ನೊಬ್ಬ ಮುಖ್ಯ​ಮಂತ್ರಿ ಅಂತಾ ಇರು​ವು​ದಿಲ್ಲ ಎಂದಿರುವ ಅವರು ಈ ಮೂಲಕ ಸಿದ್ದರಾಮಯ್ಯ ಬೆಂಬಲಿಗರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಆಪರೇಷನ್‌ ಕಮಲ ಯಶಸ್ವಿಯಾಗಲ್ಲ:  ಬಿಜೆ​ಪಿ​ಯ​ವರ ಬಳಿ ಸಾಕಷ್ಟುದುಡ್ಡಿದೆ. ಇದೇ ಕಾರ​ಣಕ್ಕೆ ಆಪ​ರೇ​ಷನ್‌ ಕಮ​ಲಕ್ಕೆ ಮುಂದಾ​ಗು​ತ್ತಿ​ದ್ದಾರೆ. ಕಳೆದ 6 ತಿಂಗ​ಳಿ​ನಿಂದಲೂ ಬಿಜೆ​ಪಿ​ಯ​ವರು ಆಪ​ರೇ​ಷನ್‌ ಮಾಡಲು ಪ್ರಯ​ತ್ನಿ​ಸು​ತ್ತಿ​ದ್ದಾರೆ. ಆದರೆ, ಆಪ​ರೇ​ಷನ್‌ ಕಮಲ ಯಶ​ಸ್ವಿ​ಯಾಗುವುದಿಲ್ಲ ಎಂದಿದ್ದಾರೆ.