ಬೆಂಗಳೂರು :  ತಮ್ಮ ಲೋಕಸಭಾ ಕ್ಷೇತ್ರವನ್ನು ಕುಟುಂಬದ ಕುಡಿ ಪ್ರಜ್ವಲ್‌ ರೇವಣ್ಣಗೆ ಬಿಟ್ಟುಕೊಡುತ್ತಿದ್ದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸ್ಪರ್ಧೆ ಎಲ್ಲಿಂದ ಎಂಬ ಯಕ್ಷಪ್ರಶ್ನೆ ಮೂಡಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೋ ಇಲ್ಲವೋ ಎಂದು ಹೇಳಿಕೆ ನೀಡುವ ಮೂಲಕ ದೇವೇಗೌಡರು, ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿದ್ದಾರೆಯೇ? ಅಥವಾ ಇದೊಂದು ರಾಜಕೀಯ ಗಿಮಿಕ್‌ ಇರಬಹುದೇ ಎನ್ನುವ ಅನುಮಾನ ಮೂಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಪಾಲುದಾರಿಕೆಯಲ್ಲಿ ಸರ್ಕಾರ ರಚನೆ ಮಾಡಲಾಗಿದ್ದು, ತಾವಾಗಿಯೇ ಕ್ಷೇತ್ರ ಕೇಳುವುದಕ್ಕಿಂತ ಕಾಂಗ್ರೆಸ್‌ ಕಡೆಯಿಂದಲೇ ಕ್ಷೇತ್ರದ ಹೆಸರು ಪ್ರಸ್ತಾಪವಾಗಲಿ ಎಂಬ ಆಶಯವೂ ಹೇಳಿಕೆಯ ಹಿಂದಿದೆ ಎಂಬ ಮಾತುಗಳು ಕೇಳಿಬಂದಿವೆ.

ಪ್ರಜ್ವಲ್‌ ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸಿ ದೆಹಲಿಗೆ ಕಳುಹಿಸುವ ಅಭಿಲಾಷೆ ಹೊಂದಿರುವ ದೇವೇಗೌಡರು ಪಕ್ಷದ ಅಸ್ತಿತ್ವಕ್ಕಾಗಿ ತಾವು ಕಣಕ್ಕಿಳಿಯುವ ಆಸೆ ಹೊಂದಿದ್ದಾರೆ. ಆದರೆ, ಈಗಾಗಲೇ ಹಾಸನ ಕ್ಷೇತ್ರದಿಂದ ಪ್ರಜ್ವಲ್‌ರನ್ನು ಅಖಾಡಕ್ಕಿಳಿಸುವುದಾಗಿ ಪ್ರಕಟಿಸಿದ್ದಾರೆ. ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಬಳಿಕ ತಮ್ಮ ಕ್ಷೇತ್ರ ಯಾವುದು ಎಂಬ ಜಿಜ್ಞಾಸೆಗೊಳಗಾಗಿದ್ದಾರೆ. ಮಂಡ್ಯ, ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸುವ ಸಾಧ್ಯತೆ ಇವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್‌ನ ಸಹಮತ ಇದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.

ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್‌ ಅವರನ್ನು ಕಣಕ್ಕಿಳಿಸುವ ಕೈ ಪಾಳೆಯ ಸಜ್ಜಾಗಿದೆ. ಕಾಂಗ್ರೆಸ್‌ನನ್ನು ವಿರೋಧ ಹಾಕಿಕೊಳ್ಳಲು ದೇವೇಗೌಡರಿಗೆ ಮನಸಿಲ್ಲ. ಬೆಂಗಳೂರು ಉತ್ತರದಿಂದ ಕಣಕ್ಕಿಳಿಯುವಂತೆ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು ಒತ್ತಾಯ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಇದಕ್ಕೆ ಇನ್ನೂ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಏನು ಮಾಡಬೇಕು ಎಂಬುದು ದೇವೇಗೌಡರ ಚಿಂತನೆಯಾಗಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೋ, ಇಲ್ಲವೋ ಎಂಬ ಹೇಳಿಕೆಯಲ್ಲಿಯೂ ರಾಜಕೀಯ ರಣತಂತ್ರ ಅಡಗಿದೆ ಎಂದು ಹೇಳಲಾಗಿದೆ. ಇಂತಹ ಹೇಳಿಕೆ ನೀಡುವುದರಿಂದ ಮಿತ್ರ ಪಕ್ಷ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿಯುವ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಒಂದು ವೇಳೆ ಸ್ಪರ್ಧಿಸುವುದಾದರೆ ಯಾವ ಕ್ಷೇತ್ರದಿಂದ ಎಂಬ ಪ್ರಶ್ನೆ ಮೂಡಿದಾಗಲೂ ಕಾಂಗ್ರೆಸ್ಸಿಗರೇ ಕ್ಷೇತ್ರವನ್ನು ತಿಳಿಸುವ ಸಾಧ್ಯತೆ ಇದೆ. ಆಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಆಯ್ಕೆ ವಿಚಾರದಲ್ಲಿ ಕಷ್ಟವಾಗುವುದಿಲ್ಲ ಎಂಬುದು ದೇವೇಗೌಡರ ಲೆಕ್ಕಾಚಾರ ಎಂದು ಹೇಳಲಾಗಿದೆ.