ಬಿಬಿಎಂಪಿ ಕಚೇರಿಗಳ ಮೇಲೆ ದಿಢೀರ್ ದಾಳಿ ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಲೋಕಾಯುಕ್ತರು ಭರ್ಜರಿ ತಂತ್ರ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರು (ಆ.4) : ಬಿಬಿಎಂಪಿ ಕಚೇರಿಗಳ ಮೇಲೆ ದಿಢೀರ್ ದಾಳಿ ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಲೋಕಾಯುಕ್ತರು ಭರ್ಜರಿ ತಂತ್ರ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಬಿಬಿಎಂಪಿ ವಿರುದ್ಧ ಹೆಚ್ಚು ದೂರುಗಳು ಬರುತ್ತಿರುವ ಕಾರಣ ಲೋಕಾಯುಕ್ತರೇ ಬೇಸತ್ತಿದ್ದರು. ಇದರ ಅಕ್ರಮವನ್ನು ಬಯಲು ಮಾಡಬೇಕು ಎಂಬ ಉದ್ದೇಶದಿಂದ ಕೆಲವು ಕೆಲ ದಿನಗಳಿಂದಲೇ ಯೋಜನೆ ಕೈಗೊಂಡಿದ್ದರು. ಗುರುವಾರ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಲೋಕಾಯುಕ್ತ ಪೊಲೀಸರನ್ನು ಕರೆಸಿದ್ದರು. ಲೋಕಾಯುಕ್ತರು ಯಾವ ಉದ್ದೇಶಕ್ಕೆ ಕರೆಸಿದ್ದರು ಎಂಬ ಮಾಹಿತಿಯೂ ಯಾರಿಗೂ ಲಭ್ಯ ಇರಲಿಲ್ಲ. ಗುರುವಾರ ಬೆಳಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದಾಳಿಯ ರೂಪುರೇಷೆ ರೂಪಿಸಿದರು. ಪೊಲೀಸ್ ತಂಡಗಳನ್ನು ರಚಿಸಿ, ಯಾವ ತಂಡ ಎಲ್ಲಿ ಭೇಟಿ ನೀಡಬೇಕು ಎಂಬುದರ ಕುರಿತು ಸ್ಪಷ್ಟವಾದ ಸೂಚನೆ ನೀಡಲಾಯಿತು. ಮಧ್ಯಾಹ್ನದ ಬಳಿಕ ಹೊರಟ ತಂಡಗಳು ದಿಢೀರ್ ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದವು. ಲೋಕಾಯುಕ್ತ ಅಧಿಕಾರಿಗಳ ತಂಡಗಳನ್ನು ಕಂಡ ಬಿಬಿಎಂಪಿ ಸಿಬ್ಬಂದಿ ದಿಗ್ಭ್ರಮೆಗೊಂಡರು. ಕಾರ್ಯಾಚರಣೆಯು ತಡರಾತ್ರಿಯವರೆಗೆ ನಡೆದಿದ್ದು, ಶುಕ್ರವಾರ ಕಾರ್ಯಾಚರಣೆಯ ಸ್ಪಷ್ಟಚಿತ್ರಣ ಹೊರಬೀಳಲಿದೆ.
ಮರಣ ದೃಢೀಕರಣ ಪತ್ರ ನೀಡಲು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
130ಕ್ಕೂ ಹೆಚ್ಚು ಸಿಬ್ಬಂದಿ ದಾಳಿ
ಬಿಬಿಎಂಪಿ ಕಚೇರಿಗಳ ಮೇಲಿನ ಕಾರ್ಯಾಚರಣೆಯಲ್ಲಿ 130ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದಾರೆ. 13 ನ್ಯಾಯಾಂಗ ವಿಭಾಗದ ಅಧಿಕಾರಿಗಳು, ಏಳು ಪೊಲೀಸ್ ವರಿಷ್ಠಾಧಿಕಾರಿಗಳು, 19 ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 26 ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ 130ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಮಾತ್ರವಲ್ಲದೇ, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಲೋಕಾಯುಕ್ತ ಪೊಲೀಸರನ್ನು ಕರೆಸಿ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಸೇರಿದಂತೆ ಇತರೆ ಜಿಲ್ಲೆಗಳ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಖುದ್ದು ಲೋಕಾಯುಕ್ತರೇ ಅಖಾಡಕ್ಕೆ
ದಾಳಿಯ ಕಾರ್ಯಾಚರಣೆಯಲ್ಲಿ ಸಾಮಾನ್ಯವಾಗಿ ಉನ್ನತ ಅಧಿಕಾರಿಗಳು ಭಾಗಿಯಾಗುತ್ತಾರೆ. ಆದರೆ, ಬಿಬಿಎಂಪಿಯ ಅಕ್ರಮಗಳನ್ನು ಬಯಲಿಗೆಳೆಯಲು ಖುದ್ದು ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಮತ್ತು ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರೇ ಅಖಾಡಕ್ಕಿಳಿದಿದ್ದಾರೆ. ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ವಿಜಯನಗರ, ರಾಜಾಜಿನಗರ ಸೇರಿದಂತೆ ಇತರೆ ಬಿಬಿಎಂಪಿ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು. ಇನ್ನು, ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಸಹ ನಗರದ ಹಲವು ಬಿಬಿಎಂಪಿ ಕಚೇರಿಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬಿಬಿಎಂಪಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ನಮಗೆ ದೂರುಗಳು ಬಂದ ಕಾರಣ ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿ, ಪೊಲೀಸರು ಸೇರಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಧಿಕಾರಿಗಳಿಗೆ ಶೋಧ ನಡೆಸಲು ವಾರೆಂಟ್ ನೀಡಿ ಕಳುಹಿಸಲಾಗಿದೆ. ಬೆಂಗಳೂರು ಬಿಬಿಎಂಪಿಯ ಎಲ್ಲಾ ವಲಯಗಳಲ್ಲಿಯೂ ಶೋಧ ಕಾರ್ಯ ನಡೆದಿದೆ. ಕಾರ್ಯಾಚರಣೆಯ ಮುಗಿದ ಬಳಿಕ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
-ನ್ಯಾ.ಬಿ.ಎಸ್.ಪಾಟೀಲ್, ಲೋಕಾಯುಕ್ತ.
ಲೋಕಾಯುಕ್ತ ಸಂಸ್ಥೆಯ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಿಢೀರ್ ದಾಳಿ ನಡೆಸಿದ್ದು ಇದೇ ಮೊದಲಾಗಿದೆ. ಸಂಸ್ಥೆಯ ಪೊಲೀಸ್ ವಿಭಾಗ ಮಾತ್ರವಲ್ಲದೇ, ನ್ಯಾಯಾಂಗ ಸಿಬ್ಬಂದಿಯೂ ಸಹ ಕಾರ್ಯಾಚರಣೆ ಕೈಗೊಂಡಿರುವುದು ಇದೇ ಮೊದಲು ಎನ್ನಬಹುದಾಗಿದೆ.
ಖಾತಾ ಬದಲಾವಣೆ, ಸಕಾಲ ಯೋಜನೆಯನ್ವಯ ನಿಗದಿತ ಅವಧಿಯಲ್ಲಿ ಸೇವೆ ಸಲ್ಲಿಸದಿರುವುದು, ಭ್ರಷ್ಟಾಚಾರ, ದುರಾಡಳಿತ ಸೇರಿದಂತೆ ಇತರೆ ಅಕ್ರಮಗಳ ನಿದರ್ಶನಗಳನ್ನು ಕಂಡ ಲೋಕಾಯುಕ್ತ ಸಂಸ್ಥೆಯು ಬಿಬಿಎಂಪಿ ವಿರುದ್ಧ ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಂಡಿದೆ. ಲೋಕಾಯುಕ್ತ ಸಂಸ್ಥೆಗೆ ಬಂದಿರುವ ದೂರುಗಳ ಪೈಕಿ ಬಿಬಿಎಂಪಿ ವಿರುದ್ಧದವೇ ಅತಿ ಹೆಚ್ಚಿನವಾಗಿವೆ. ಖಾತಾ ಬದಲಾವಣೆ, ಯೋಜನೆ ನಕ್ಷೆ ಮಂಜೂರು ಸೇರಿದಂತೆ ಹಲವು ದೂರುಗಳು ಬಿಬಿಎಂಪಿಗೆ ಸೇರಿದ್ದನ್ನು ಗಮನಿಸಿದ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಅವರೇ ರೋಸಿ ಹೋಗಿ ಇಡೀ ಬಿಬಿಎಂಪಿ ಕಚೇರಿಗಳನ್ನು ಜಾಲಾಡಲು ತೀರ್ಮಾನಿಸಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಿಬಿಎಂಪಿ 45 ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಖುದ್ದು ಫೀಲ್ಡ್‌ಗಿಳಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್
ಸಿ.ವಿ.ರಾಮನ್‌ನಗರ, ಶಾಂತಿನಗರ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಮಲ್ಲೇಶ್ವರ, ರಾಜಾಜಿನಗರ, ಮಹದೇವಪುರ, ಕೆ.ಆರ್.ಪುರ, ಬನಶಂಕರಿ ಸೇರಿದಂತೆ 45 ಕಂದಾಯ ಕಚೇರಿ ಮತ್ತು ನಗರ ಯೋಜನಾ ವಿಭಾಗಗಳಲ್ಲಿ ನಡೆದ ಶೋಧ ಕಾರ್ಯದಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ. ಬಿಬಿಎಂಬಿ ಸಿಬ್ಬಂದಿ ಬಳಿ ನಗದು ಸಹ ಪತ್ತೆಯಾಗಿದ್ದು, ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಅದನ್ನು ಲೆಕ್ಕ ಹಾಕುತ್ತಿದ್ದಾರೆ. ಗುರುವಾರ ತಡರಾತ್ರಿಯವರೆಗೆ ನಡೆದ ಕಾರ್ಯಾಚರಣೆಯು ಶುಕ್ರವಾರವು ಮುಂದುವರಿಯುವ ಸಾಧ್ಯತೆ ಇದೆ. ಕಾರ್ಯಾಚರಣೆ ಮುಕ್ತಾಯದ ಬಳಿಕ ಸಮರ್ಪಕವಾದ ಮಾಹಿತಿ ಲಭ್ಯವಾಗಲಿದೆ. ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಸಹ ಕಾರ್ಯಾಚರಣೆಯ ಒಟ್ಟಾರೆ ಮಾಹಿತಿಯನ್ನು ಕ್ರೋಢೀಕರಣ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.
