ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ದಾಳಿಯ ವೇಳೆ, ಅವರ ಸ್ನೇಹಿತನ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.70 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು (ಫೆ.12): ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಸಮರವನ್ನು ಮುಂದುವರಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಅಭಿಯಂತರರಾದ (Superintendent Engineer) ಎಚ್.ಎಂ. ಜನಾರ್ಧನ್ ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಅಧಿಕಾರಿಯ ಸ್ನೇಹಿತನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಅಧಿಕಾರಿಗಳನ್ನೇ ದಂಗಾಗಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ:

ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ಖಚಿತ ಮಾಹಿತಿ ಮತ್ತು ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಂದು ಮುಂಜಾನೆ ಲೋಕಾಯುಕ್ತ ಎಸ್ಪಿ ನೇತೃತ್ವದ ತಂಡಗಳು ಬೆಂಗಳೂರು ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದವು.

ಸ್ನೇಹಿತನ ಪ್ಲಾಟ್‌ನಲ್ಲಿ ಹಣದ ರಾಶಿ:

ಲೋಕಾಯುಕ್ತ ಅಧಿಕಾರಿಗಳು ಜನಾರ್ಧನ್ ಅವರಿಗೆ ಸೇರಿದ ಸ್ಥಳಗಳ ಜೊತೆಗೆ ಅವರ ಆಪ್ತ ಸ್ನೇಹಿತ ಸುಜಯ್ ಶೆಟ್ಟಿ ಎಂಬುವವರಿಗೆ ಸೇರಿದ ಪ್ಲಾಟ್ ಮೇಲೆಯೂ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿ ಬಚ್ಚಿಡಲಾಗಿದ್ದ ಬರೋಬ್ಬರಿ 1 ಕೋಟಿ 70 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ಈ ಹಣವು ಅಕ್ರಮವಾಗಿ ಗಳಿಸಿರುವುದಾಗಿದ್ದು, ಪತ್ತೆಯಾಗುವ ಭೀತಿಯಿಂದ ಸ್ನೇಹಿತನ ಮನೆಯಲ್ಲಿ ಇರಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಧಿಕಾರಿಗಳು ಪ್ಲಾಟ್‌ನಲ್ಲಿ ಸಿಕ್ಕ ಕಂತೆ ಕಂತೆ ನೋಟುಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಮುಂದುವರಿದ ಶೋಧ ಕಾರ್ಯ:

ಸದ್ಯ ಪತ್ತೆಯಾದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ನೋಟು ಎಣಿಸುವ ಯಂತ್ರಗಳ ಮೂಲಕ ನಿಖರವಾದ ಮೊತ್ತದ ಲೆಕ್ಕಾಚಾರ ನಡೆಯುತ್ತಿದೆ. ಇದರೊಂದಿಗೆ ಜನಾರ್ಧನ್ ಅವರ ನಿವಾಸದಲ್ಲಿ ಪ್ರಮುಖ ಆಸ್ತಿ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಚಿನ್ನಾಭರಣ ಮತ್ತು ಐಷಾರಾಮಿ ಕಾರುಗಳ ಬಗ್ಗೆಯೂ ತನಿಖೆ ಚುರುಕುಗೊಳಿಸಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಮಹತ್ವದ ಹುದ್ದೆಯಲ್ಲಿದ್ದ ಜನಾರ್ಧನ್, ಹಲವು ಯೋಜನೆಗಳ ನಿರ್ವಹಣೆಯ ವೇಳೆ ಅಕ್ರಮ ಎಸಗಿರುವ ಸಾಧ್ಯತೆಗಳ ಬಗ್ಗೆಯೂ ಲೋಕಾಯುಕ್ತ ಪೊಲೀಸರು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಗಳಿಕೆಯ ಮೂಲವನ್ನು ಹುಡುಕುತ್ತಿದ್ದು, ಸಂಜೆಯ ವೇಳೆಗೆ ದಾಳಿಯ ಸಂಪೂರ್ಣ ವಿವರ ಲಭ್ಯವಾಗುವ ಸಾಧ್ಯತೆಯಿದೆ. ಜನಾರ್ಧನ್ ಹಾಗೂ ಅವರ ಸ್ನೇಹಿತ ಸುಜಯ್ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.