ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮೇಲೆ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ, ಐಷಾರಾಮಿ ರೆಸಾರ್ಟ್‌ಗಳು ಪತ್ತೆಯಾಗಿವೆ.
ಬೆಂಗಳೂರು/ಮಡಿಕೇರಿ (ಡಿ.24): ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ (PS) ಸರ್ಫರಾಜ್ ಖಾನ್ ಅವರಿಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಸರ್ಫರಾಜ್ ಖಾನ್ ಅವರಿಗೆ ಸೇರಿದ ಬೆಂಗಳೂರು ಹಾಗೂ ಕೊಡಗಿನ ಒಟ್ಟು 13 ಸ್ಥಳಗಳ ಮೇಲೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
10 ಕಡೆಗಳಲ್ಲಿ ಮಿಂಚಿನ ಕಾರ್ಯಾಚರಣೆ
ಬೆಂಗಳೂರಿನ ಹಲಸೂರಿನಲ್ಲಿರುವ ಸರ್ಫರಾಜ್ ಅವರ ನಿವಾಸ ಸೇರಿದಂತೆ ನಗರದ 5 ಮನೆಗಳು ಹಾಗೂ ಕೊಡಗಿನಲ್ಲಿರುವ ಐಷಾರಾಮಿ ರೆಸಾರ್ಟ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ, ಅಧಿಕಾರಿಗಳು ದಾಖಲೆಗಳನ್ನು ಜಾಲಾಡಿದಾಗ ಬೆಚ್ಚಿಬೀಳಿಸುವಂತಹ ಅಂಕಿಅಂಶಗಳು ಹೊರಬಂದಿವೆ. ಸರ್ಫರಾಜ್ ಖಾನ್ ಕೇವಲ ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ, ಅವರ ಬಳಿ ಇರುವ ಆಸ್ತಿ ಮಾತ್ರ ಕುಬೇರನನ್ನೂ ಮೀರಿಸುವಂತಿದೆ.
- ಪತ್ತೆಯಾದ ಆಸ್ತಿಯ ವಿವರ: ಲೋಕಾಯುಕ್ತ ತನಿಖೆಯ ವೇಳೆ ಒಟ್ಟು 14.38 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದೆ. ಇದರಲ್ಲಿ ಸ್ಥಿರಾಸ್ತಿಯ ಪಾಲು ದೊಡ್ಡದಿದೆ.
- ಸ್ಥಿರಾಸ್ತಿ (8.44 ಕೋಟಿ ರೂ.): 4 ಸುಸಜ್ಜಿತ ವಾಸದ ಮನೆಗಳು ಹಾಗೂ 37 ಎಕರೆ ಕೃಷಿ ಜಮೀನಿನ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
- ಚರಾಸ್ತಿ (5.93 ಕೋಟಿ ರೂ.): 1.29 ಕೋಟಿ ರೂಪಾಯಿ ಬ್ಯಾಂಕ್ ಠೇವಣಿ, 1.64 ಕೋಟಿ ಮೌಲ್ಯದ ಐಷಾರಾಮಿ ವಾಹನಗಳು, 2.99 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
ಕೊಡಗಿನಲ್ಲಿ ಬೇನಾಮಿ ರೆಸಾರ್ಟ್
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ವ್ಯಾಪ್ತಿಯಲ್ಲಿ ಸರ್ಫರಾಜ್ ಖಾನ್ ಬೇನಾಮಿ ಹೆಸರಿನಲ್ಲಿ ಬೃಹತ್ ರೆಸಾರ್ಟ್ ನಡೆಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನಿಂದ ಬಂದ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡವು ಈ ರೆಸಾರ್ಟ್ ಮೇಲೆ ದಾಳಿ ನಡೆಸಿ, ಭೂಮಿಯ ಖರೀದಿ ಪತ್ರ ಹಾಗೂ ಆದಾಯದ ಮೂಲಗಳ ಬಗ್ಗೆ ತನಿಖೆ ನಡೆಸುತ್ತಿದೆ. ಸದ್ಯ ಸರ್ಫರಾಜ್ ಖಾನ್ ಅವರ ಬ್ಯಾಂಕ್ ಅಕೌಂಟ್ ಮತ್ತು ಲಾಕರ್ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಸಚಿವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯ ಮೇಲೆ ನಡೆದಿರುವ ಈ ದಾಳಿ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.


