ಲೋಕಾ ರೇಡ್: ಬೆಳ್ಳಂಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು
ಬೆಂಗಳೂರು, ಮಂಡ್ಯ, ವಿಜಯನಗರ ಹಾಗೂ ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆಯೇ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು
ಬೆಂಗಳೂರು(ಜ.09): ಬೆಂಗಳೂರು, ಮಂಡ್ಯ, ವಿಜಯನಗರ ಹಾಗೂ ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಇಂದು(ಮಂಗಳವಾರ) ಬೆಳ್ಳಂಬೆಳಗ್ಗೆಯೇ ದಾಳಿ ಮಾಡಿದ್ದಾರೆ. ಬೆಂಗಳೂರು ಬಿಬಿಎಂಪಿ ಅಧಿಕಾರಿ ಮಂಜು ಸಂಬಂಧಿಗಳ ಮಂಡ್ಯದಲ್ಲಿರುವ ಮನೆಗಳ ಮೇಲೆ ದಾಳಿ ಹಾಗೂ ಮಂಡ್ಯ ಜಿಲ್ಲೆಯ ಹಲಗೂರು ಗ್ರಾ.ಪಂ ಸದಸ್ಯ ಸುರೇಂದ್ರ ಎಂಬುವವರ ಮನೆ ಮೇಲೆ ರೇಡ್ ಮಾಡಲಾಗಿದೆ. ಹಲಗೂರು ಪಟ್ಟಣದ ಜೆಪಿಎಂ ಬಡಾವಣೆಯಲ್ಲಿನ ಸುರೇಂದ್ರ ಮನೆ ಹಾಗೂ ಸುರೇಂದ್ರ ಅವರ ಸ್ವಗ್ರಾಮ ಗುಂಡಾಪುರ ಗ್ರಾಮದಲ್ಲಿ ಮನೆಗಳ ಮೇಲೂ ದಾಳಿ ಮಾಡಲಾಗಿದೆ.
ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ಮನೆ ಮೇಲೆ ಲೋಕಯುಕ್ತ ದಾಳಿ
ವಿಜಯನಗರ: ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ನಾಗರಾಜ್ ಅವರ ಮನೆ ಮೇಲೆ ಲೋಕಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಮತ್ತು ವಿಜಯನಗರ ಜಿಲ್ಲೆಯ ಕೆಲವೆಡೆ ದಾಳಿ ನಡೆಸಲಾಗಿದೆ. ಕೂಡ್ಲಿಗಿ ಪಟ್ಟಣ ಮತ್ತು ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಅಸ್ತಿ ಮಾಡಿರೋ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.
ಚಿಕ್ಕಮಗಳೂರು: ಅನುಕಂಪದ ಆಧಾರದ ಕೆಲಸಕ್ಕೆ ಶಿಫಾರಸ್ಸು, ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ
ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಗುಡೇಕೋಟೆಯಲ್ಲಿ ಪೆಟ್ರೋಲ್ ಬಂಕ್, ಮನೆ, ಜಮೀನು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಾಗರಾಜ್ ಅವರ ಮನೆ, ಪೆಟ್ರೋಲ್ ಬಂಕ್, ಶಿಕ್ಷಣ ಸಂಸ್ಥೆಗಳು, ಸಂಬಂಧಿಕರ ಮನೆಯ ಹಾಗೂ ಕೂಡ್ಲಿಗಿ ಮತ್ತು ಗುಡೇಕೋಟೆ ಗ್ರಾಮದಲ್ಲಿರೋ ಮನೆ, ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿದ್ದರಾಜು, ಸಿಪಿಐ ಸಂಗಮೇಶ್, ರಾಜೇಶ್ ಲಮಾಣಿ, ಸುರೇಶ್ ಬಾಬು, ಮಹಮ್ಮದ್ ರಫೀಕ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಳಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.