ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಚುನಾವಣಾ ಪೂರ್ವ ಸಮೀಕ್ಷೆಯೊಂದು ನಡೆದಿದ್ದು, ಒಂದು ವೇಳೆ ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ಹಾಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟ ಸಮಭಲ ಸಾಧಿಸಲಿದೆ ಎನ್ನುವುದು ತಿಳಿದು ಬಂದಿದೆ.
ನವದೆಹಲಿ: ಕರ್ನಾಟಕದಲ್ಲಿ ಲೋಕಸಭೆಗೆ ತಕ್ಷಣ ಚುನಾವಣೆ ನಡೆದರೆ, ಎನ್‌ಡಿಎ ಮತ್ತು ಯುಪಿಎ ಮೈತ್ರಿಕೂಟ ಸಮಬಲದ ಸಾಧನೆ ಮಾಡಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಟೈಮ್ಸ್ ನೌ ಸುದ್ದಿವಾಹಿನಿಯು ವಿಎಂಆರ್ ಜೊತೆಗೂಡಿ ಸಮೀಕ್ಷೆ ನಡೆಸಿ ಅದರ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಸಮೀಕ್ಷೆ ಅನ್ವಯ ಕರ್ನಾಟಕದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಎನ್‌ಡಿಎದ ದೊಡ್ಡ ಪಕ್ಷವಾದ ಬಿಜೆಪಿ 14 ಸ್ಥಾನಗಳಲ್ಲಿ ಗೆಲ್ಲಲಿದೆ. ಆದರೆ ಹಿಂದಿನ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿ 3 ಸ್ಥಾನ ಕಳೆದುಕೊಳ್ಳಲಿದೆ.
ಇನ್ನು, ಕಳೆದ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಆ ಮೈತ್ರಿಕೂಟ 14 ಸ್ಥಾನ ಗೆಲ್ಲಲಿದೆ. ಇದು, ಉಭಯ ಪಕ್ಷಗಳು ಕಳೆದ ಬಾರಿ ಪ್ರತ್ಯೇಕವಾಗಿ ಗೆದ್ದಿದ್ದಕ್ಕಿಂತ 3 ಸ್ಥಾನ ಹೆಚ್ಚು ಎಂದು ಸಮೀಕ್ಷೆ ಹೇಳಿದೆ.
ಇತ್ತೀಚೆಗೆ ಕನ್ನಡಪ್ರಭ ಬಳಗದ ರಿಪಬ್ಲಿಕ್ ಟೀವಿ ಚಾನಲ್ ಹಾಗೂ ಸಿ- ವೋಟರ್ ಸಂಸ್ಥೆ ನಡೆಸಿದ್ದ ಸಮೀಕ್ಷೆಯೂ ಇದೇ ರೀತಿಯ ಫಲಿತಾಂಶದ ಭವಿಷ್ಯ ನುಡಿದಿತ್ತು.
ಟೈಮ್ಸ್ ನೌ-ವಿಎಂಆರ್ ಜನಮತಗಣನೆ
- ಬಿಜೆಪಿಗೆ ಕಳೆದ ಸಲಕ್ಕಿಂತ 3 ಎಂಪಿ ಕ್ಷೇತ್ರ ನಷ್ಟ
ಒಟ್ಟು ಸ್ಥಾನ: 28
ಪಕ್ಷ 2019 2014
ಬಿಜೆಪಿ: 14 17
ಕಾಂಗ್ರೆಸ್+ ಜೆಡಿಎಸ್: 11 14
