ಮಂಡ್ಯ :  ಮುಂಬರುವ ಲೋಕಸಭಾ ಚುನಾವಣೆಗೆ ದೇವೇಗೌಡರ ಕುಟುಂಬದ ಸದಸ್ಯರನ್ನೇ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳು ಮತ್ತಷ್ಟುದಟ್ಟವಾಗುತ್ತಿವೆ. ಇದಕ್ಕಾಗಿ ಈಗಾಗಲೇ ಬೆಂಬಲಿಗರು ವೇದಿಕೆಯನ್ನೂ ಸಿದ್ಧಪಡಿಸುತ್ತಿದ್ದಾರೆ.

ಮಂಡ್ಯದಿಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ, ಚಿತ್ರನಟ ನಿಖಿಲ್ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಜೆಡಿಎಸ್‌ ನಾಯಕರಾದ ಜಿಪಂನ ಅಧ್ಯಕ್ಷರು, ಸದಸ್ಯರು ಗುರುವಾರ ಒಕ್ಕೊರಲಿನಿಂದ ಒತ್ತಾಯಿಸಿದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳನ್ನು ಜೆಡಿಎಸ್‌ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘಟನಾ ಚಾತುರ್ಯ ಹೊಂದಿರುವ ಉತ್ಸಾಹಿ ಯುವ ಮುಖಂಡ ನಿಖಿಲ್ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.

ಜ.8 ರಂದು ನಾವೆಲ್ಲರೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ವಿಶ್ವನಾಥ್‌, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ರೇವಣ್ಣ ಅವರನ್ನು ಭೇಟಿ ಮಾಡಿ ನಿಖಿಲ್ ಸ್ಪರ್ಧೆಗೆ ಅನುವು ಮಾಡಿಕೊಡಬೇಕೆಂದು ಒತ್ತಡ ಹೇರಿ ಬಂದಿದ್ದೇವೆ. ಅದು ಫಲಕೊಡುವ ಸಾಧ್ಯತೆ ಇದೆ ಎಂದರು.

ನಿಖಿಲ್ ಕುಮಾರಸ್ವಾಮಿ ಜಿಲ್ಲೆಯಾದ್ಯಂತ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಮೃತರ ಮನೆಗೆ ಭೇಟಿ ನೀಡಿ ಸಂತೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಪರ್ಧೆಗೆ ಪಕ್ಷದ ವರಿಷ್ಠರು ಸಮ್ಮತಿ ನೀಡಬೇಕೆಂದು ಮನವಿ ಮಾಡಿದರು.

ನಮ್ಮ ಜಿಲ್ಲೆ ಬಗ್ಗೆ ಏಕೆ ಮೂಗು ತೂರಿಸುತ್ತಾರೆ?:

ಇದೇ ವೇಳೆ ಮಾಜಿ ಸಚಿವ, ನಟ ದಿ.ಅಂಬರೀಷ್‌ ಅವರ ಪುತ್ರ ಅಭಿಷೇಕ್‌ ಗೌಡ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಪ್ರಯತ್ನ ನಡೆಸುತ್ತಿರುವ ಮಾಜಿ ಸಚಿವ ಎ.ಮಂಜು ನೇತೃತ್ವದ ಕಾಂಗ್ರೆಸ್ಸಿಗರ ಪ್ರಯತ್ನಕ್ಕೆ ಸ್ಥಳೀಯ ಜೆಡಿಎಸ್‌ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಎ.ಮಂಜು ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಸಭೆ ಸೇರಿ ಅಭಿಷೇಕ್‌ ಗೌಡ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಒತ್ತಾಯ ಮಾಡಿದ್ದಾರೆ. ಹಾಸನದ ಮಂಜು ಅವರಿಗೂ ಮಂಡ್ಯಕ್ಕೂ ಏನು ಸಂಬಂಧ? ಅವರು ಹಾಸನಕ್ಕೆ ಮಾತ್ರ ಸೀಮಿತ. ಆ ಜಿಲ್ಲೆಯ ಬಗ್ಗೆ ಕಾಳಜಿ ತೋರಲಿ. ಮಂಡ್ಯ ಜಿಲ್ಲೆಯ ಬಗ್ಗೆ ಮೂಗು ತೂರಿಸುವುದು ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಪಂ ಸದಸ್ಯ ಸಿ.ಅಶೋಕ್‌ ಹೇಳಿದರು.

ಅಂಬರೀಷ್‌ ಕುಟುಂಬ ಸದಸ್ಯರು ಯಾವ ಸಂದರ್ಭದಲ್ಲಿ ರಾಜಕಾರಣ ಪ್ರವೇಶಿಸಬೇಕು ಎಂಬುದನ್ನು ಉನ್ನತ ಮಟ್ಟದ ನಾಯಕರು ನಿರ್ಧರಿಸುತ್ತಾರೆ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಶಿವರಾಮೇಗೌಡ, ಲಕ್ಷ್ಮಿಅಶ್ವಿನ್‌ ಗೌಡ ಸೇರಿದಂತೆ ಯಾವುದೇ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಸೂಚಿಸಿದರೂ ನಮ್ಮ ಅಭ್ಯಂತರವಿಲ್ಲ. ಆದರೂ ನಿಖಿಲ… ಕುಮಾರ ಸ್ವಾಮಿ ಸ್ಪರ್ಧೆಗಷ್ಟೇ ನಮ್ಮ ಬೇಡಿಕೆ ಇದೆ ಎಂದರು.