Lok Sabha election 2024: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಯಾವಾಗ ಮತದಾನ?
ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ...
ಬೆಂಗಳೂರು (ಮಾ.16): ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಏಪ್ರಿಲ್ 19 ರಿಂದ ಜೂನ್ 1ರವರೆಗೆ ಚುನಾವಣೆ ನಡೆಯಲಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಆದರೆ, ಕರ್ನಾಟಕದಲ್ಲಿ ಒಟ್ಟು 2 ಹಂತಗಳಲ್ಲಿ ಚುನಾವಣೆಯನ್ನುನಡೆಸಲಾಗುತ್ತಿದೆ. ಅದರಲ್ಲಿ ತಲಾ 14 ಲೋಕಸಭಾ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ.
ಇನ್ನು ಇಡೀ ದೇಶಕ್ಕೆ ಹೋಲಿಕೆ ಮಾಡಿದರೆ 2ನೇ ಹಂತದಲ್ಲಿ ನಡೆಯುವ ಏ.26ರ ಚುನಾವಣೆಯು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಆಗಿರುತ್ತದೆ. ನಮ್ಮ ರಾಜ್ಯದ ಮೊದಲ ಹಂತದ ಚುನಾವಣೆಯು ಏ.26ರಂದು ನಡೆಯಲಿದೆ. ಮೊದಲ ಹಂತದಲ್ಲಿ ಉಡುಪಿ - ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
Breaking: ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್ 4 ರಂದು ಫಲಿತಾಂಶ
ಇನ್ನು ಕರ್ನಾಟಕ 2ನೇ ಹಂತದ ಮತದಾನ ಪ್ರಕ್ರಿಯೆ ಮೇ 07ರಂದು ನಡೆಯಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ (ಎಸ್‌ಸಿ), ಗುಲ್ಬರ್ಗಾ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಮತದಾರರು ಮೇ 7ರಂದು ಮತದಾನ ಮಾಡಲಿದ್ದಾರೆ. ಕರ್ನಾಟಕದ ಎರಡು ಹಂತಗಳು ಸೇರಿದಂತೆ ಇಡೀ ದೇಶದ ಏಳು ಹಂತಗಳ ಚುನಾವಣಾ ಫಲಿತಾಂಶವು ಜೂ.4ರಂದು ಹೊರ ಬೀಳಲಿದೆ.
ಲೋಕಸಭಾ ಚುನಾವಣೆಯ ವೇಳೆಯೇ ಒಡಿಶಾ, ಅಸ್ಸಾಂ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಇದೇ ವೇಳೆ ಆಯಾ ರಾಜ್ಯಗಳಲ್ಲಿ ನಡೆಯುವ ಲೋಕಸಭಾ ಚುನಾವಣಾ ಹಂತದಲ್ಲಿಯೇ ಈಗಾಗಲೇ ಖಾಲಿಯಾಗಿರುವ ಶಾಸಕರ ಸ್ಥಾನಗಳಿಗೆ ವಿಧಾನಸಭಾ ಉಪ ಚುನಾವಣೆಯನ್ನೂ ನಡೆಸಲಾಗುತ್ತದೆ. ಕರ್ನಾಟಕದಲ್ಲಿ 2023ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪಟ್ಟ ನಾಯಕ 2024ರ ಫೆ.25ರಂದು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಮೇ 7ರಂದು ಉಪ ಚುನಾವಣೆಯನ್ನು ಮಾಡಲಾಗುತ್ತಿದೆ.
ಕರ್ನಾಟಕ ಮೊದಲ ಹಂತದ ಚುನಾವಣೆ
ನಾಮಪತ್ರ ಸಲ್ಲಿಕೆ ಆರಂಭ- ಮಾರ್ಚ್ 28
ನಾಮಪತ್ರ ಸಲ್ಲಿಕೆಗೆ ಕೊನೇ ದಿನ- ಏಪ್ರಿಲ್ 4
ನಾಮಪತ್ರ ಪರಿಶೀಲನೆ- ಏಪ್ರಿಲ್ 5
ನಾಮಪತ್ರ ವಾಪಸ್ಗೆ ಕೊನೇ ದಿನ- ಏಪ್ರಿಲ್ 8
ಮತದಾನ- ಏಪ್ರಿಲ್ 26
ಫಲಿತಾಂಶ - ಜೂನ್ 4
ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ 7ರಂದು ಉಪ ಚುನಾವಣೆ ಘೋಷಣೆ
ಕರ್ನಾಟಕ 2ನೇ ಹಂತದ ಚುನಾವಣೆ
ನಾಮಪತ್ರ ಸಲ್ಲಿಕೆ ಆರಂಭ- ಏಪ್ರಿಲ್ 12
ನಾಮಪತ್ರ ಸಲ್ಲಿಕೆಗೆ ಕೊನೇ ದಿನ- ಏಪ್ರಿಲ್ 19
ನಾಮಪತ್ರ ಪರಿಶೀಲನೆ- ಏಪ್ರಿಲ್ 20
ನಾಮಪತ್ರ ವಾಪಸ್ಗೆ ಕೊನೇ ದಿನ- ಏಪ್ರಿಲ್ 22
ಮತದಾನ- ಮೇ 7
ಫಲಿತಾಂಶ- ಜೂನ್ 4
ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ನೀತಿ ಸಂಹಿತೆ ಜಾರಿಯಾಗಿದೆ. ಅದರಂತೆ ಸರ್ಕಾರ/ಸಚಿವರು ಅನುದಾನ ಅಥವಾ ಭರವಸೆಗಳನ್ನು ಪ್ರಕಟಿಸುವಂತಿಲ್ಲ. ಶಂಕುಸ್ಥಾಪನೆ, ಉದ್ಘಾಟನೆ, ಚಾಲನೆ ಕಾರ್ಯಕ್ರಮ ನೆರವೇರಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವಂತಹ ನೇಮಕಾತಿ ಮಾಡುವಂತಿಲ್ಲ ಹಾಗೂ ಚುನಾವಣೆ ಕೆಲಸಕ್ಕೆ ರಾಜಕಾರಣಿಗಳು ಸರ್ಕಾರಿ ವಾಹನ ಬಳಸುವಂತಿಲ್ಲ.