ಬೆಂಗಳೂರು[ನ.16]: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ. ಕೈ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಇಂದಿನಿಂದ ಮೂರು ದಿನಗಳ ಕಾಲ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಜೆಡಿಎಸ್‌ಗೆ ಸೀಟು ನೀಡುವ ವಿಚರವಾಗಿ ಕೈ ಮಾಸ್ಟರ್ ಪ್ಲಾನ್ ಮಾಡುತ್ತದೆ ಎನ್ನಲಾಗಿದೆ.

ತಾನು ಸೋಲುವ ಸಾಧ್ಯತೆಗಳಿರುವ ಹಾಗೂ ತನ್ನ ಅಭ್ಯರ್ಥಿಗಳಿಲ್ಲದ 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ಯೋಜನೆಯಾಗಿದೆ. ಇದೇ ಸಂದರ್ಭದಲ್ಲಿ ಹಳೆ ಮೈಸೂರು ಭಾಗದಲ್ಲಿ ತನ್ನ ಪಕ್ಷದ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. 

ಬಿಜೆಪಿ ಪ್ರಬಲವಾಗಿರುವ 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಅಂಟಿಸಲು ಕೈ ಪಾಳಯದಲ್ಲಿ ಚರ್ಚೆ ನಡೆದಿದೆ. ಹೀಗಾಗಿ ಮೈಸೂರು ಬದಲು ಶಿವಮೊಗ್ಗ ಜೆಡಿಎಸ್ ಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಈಗಾಗಲೇ ತುಮಕೂರು, ಚಿಕ್ಕಬಳ್ಳಾಪುರ ಚಿತ್ರದುರ್ಗ ಕೇಳುತ್ತಿರುವ ಜೆಡಿಎಸ್‌ಗೆ ಬದಲಿ‌ ಕ್ಷೇತ್ರಗಳನ್ನ ನೀಡಲೂ ಕೈ ರಣತಂತ್ರ ಹೂಡಿದೆ.

ಜೆಡಿಎಸ್‌ಗೆ ಯಾವೆಲ್ಲ ಕ್ಷೇತ್ರ?

  •  ಹಾಸನ ಲೋಕಸಭಾ ಕ್ಷೇತ್ರ
  • ಮಂಡ್ಯ ಲೋಕಸಭಾ ಕ್ಷೇತ್ರ
  • ಶಿವಮೊಗ್ಗ ಲೋಕಸಭಾ ಕ್ಷೇತ್ರ
  • ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
  • ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
  • ಬೀದರ್ ಲೋಕಸಭಾ ಕ್ಷೇತ್ರ

ಕಾಂಗ್ರೆಸ್ ಸ್ಟಾಟರ್ಜಿಗೆ ಒಪ್ತಾರ ದೇವೇಗೌಡರು..? 

ಆದರೆ ಕಾಂಗ್ರೆಸ್‌ನ ಈ ನಿರ್ಧಾರವನ್ನು ದೇವೇಗೌಡರು ಒಪ್ಪುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಜೆಡಿಎಸ್ ಕೂಡಾ ಹಳೇ ಮೈಸೂರು ಭಾಗದ ಕ್ಷೇತ್ರಗಳನ್ನೇ ಕೇಳುತ್ತಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ನೇರ ಮಾತುಕತೆ ನಡೆಸಿ ತಮಗೆ ಬೇಕಾದ ಕ್ಷೇತ್ರಗಳನ್ನು ಪಡೆಯುವುದು ದೇವೇಗೌಡರ ಪ್ಲಾನ್ ಆಗಿದೆ.

ಹೀಗಿರುವಾಗ ದೇವೇಗೌಡರಿಗೆ ಟಾಂಗ್ ಕೊಡಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಜಿಲ್ಲಾ ಮಟ್ಟದ ನಾಯಕರ ಸಭೆ ನಡೆಸಿ ಹೈಕಮಾಂಡ್‌ಗೆ ವರದಿ ನೀಡಲು ಯೋಚಿಸಿದ್ದಾರೆ. ಈ ಮೂಲಕ 'ಗೌಡರು ಹೇಳಿದ್ದನ್ನ ಕೇಳಬೇಡಿ, ಕಾಂಗ್ರೆಸ್ ಸ್ಥಳೀಯ ನಾಯಕರ ಅಭಿಪ್ರಾಯ ಹೀಗಿದೆ' ಎಂದು ರಾಹುಲ್ ಗಾಂಧಿಗೆ ಮನವರಿಕೆ ಮಾಡಲು ಯತ್ನಿಸಲಿದ್ದಾರೆ.