ಮುಷ್ಕರ ನಡೆಸಿ ಸಾರಿಗೆ ಸಂಸ್ಥೆಗಳಿಗೆ ನಷ್ಟ: ಸರ್ಕಾರ ವಾದ| 4 ಸಾವಿರ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ: ಸಾರಿಗೆ ನಿಗಮ| ಆರು ವಾರಗಳಲ್ಲಿ ಪ್ರಕರಣ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸಾರಿಗೆ ನಿಗಮಕ್ಕೆ ನಿರ್ದೇಶನ| 

ಬೆಂಗಳೂರು(ಮಾ.31):  ಕಳೆದ ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಕಾರ್ಮಿಕ ಸಂಘಟನೆಗಳಿಂದ 2.5 ಕೋಟಿ ಹಣ ವಸೂಲು ಮಾಡಲು ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಮತ್ತು ಮುಷ್ಕರ ನಿರತ ನಾಲ್ಕು ಸಾವಿರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ನಿಗಮ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಸಿಬ್ಬಂದಿ ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಮುಷ್ಕರ ನಿರತರಿಂದಲೇ ವಸೂಲು ಮಾಡಲು ನಿರ್ದೇಶಿಸುವಂತೆ ಕೋರಿ ನಗರದ ಸಮರ್ಪಣಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್‌. ಮೋಹನ್‌, ಮುಷ್ಕರ ನಿರತ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ, ಆದರೆ ನಂತರ ಯಾವುದೇ ಕ್ರಮ ಜರುಗಿಸಿಲ್ಲ, ನಷ್ಟಕ್ಕೆ ಕಾರಣರಾದ ಸಂಘಟನೆಗಳಿಂದ ನಷ್ಟ ವಸೂಲಿಗೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಏಪ್ರಿಲ್ 7 ರಿಂದ KSRTC ಬಸ್ ಸೇವೆ ಬಂದ್ : ಹಿಂದೆಯೇ ಕಾರ್ಯತಂತ್ರ

ಸಾರಿಗೆ ನಿಗಮದ ಪರ ವಕೀಲರು ಉತ್ತರಿಸಿ, ಈಗಾಗಲೇ ಮುಷ್ಕರಕ್ಕೆ ಕರೆ ನೀಡಿದ್ದ ಸಂಘಟನೆಗಳಿಂದ 2.5 ಕೋಟಿ ರು. ನಷ್ಟ ವಸೂಲಿಗೆ ಸಿವಿಲ್‌ ಕೋರ್ಟ್‌ ನಲ್ಲಿ ದಾವೆ ಹೂಡಲಾಗಿದೆ. ನಾಲ್ಕು ಸಾವಿರ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

ಅದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ನ್ಯಾಯಪೀಠ, ಆರು ವಾರಗಳಲ್ಲಿ ಪ್ರಕರಣ ಕುರಿತು ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಾರಿಗೆ ನಿಗಮಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜೂ.4ಕ್ಕೆ ಮುಂದೂಡಿತು.