Asianet Suvarna News Asianet Suvarna News

ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ; ಆರೋಪಿ ಶಿವಾಜಿರಾವ್ ಆರೆಸ್ಟ್, ಸಿಸಿಬಿ ಮುಂದೆ ಹೇಳಿದ್ದೇನು?

ಎರಡು ವರ್ಷಗಳಿಂದ ಸಾಲು‌ ಸಾಲಾಗಿ ಬರ್ತಿದ್ದ ಬೆದರಿಕೆ ಪತ್ರಗಳು ಸಾಹಿತಿಗಳನ್ನ ಭೀತಿಗೆ ತಳ್ಳಿತ್ತು. ಸಾಹಿತಿಗಳಿಗೆ ಬಂದ ಅನಾಮಧೇಯ ಬೆದರಿಕೆ ಪತ್ರ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Literary threat letter case accused Shivaji Rao arrested by ccb police at davanagere rav
Author
First Published Sep 30, 2023, 7:56 PM IST

ಕಿರಣ್ ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು (ಸೆ.30) : ಎರಡು ವರ್ಷಗಳಿಂದ ಸಾಲು‌ ಸಾಲಾಗಿ ಬರ್ತಿದ್ದ ಬೆದರಿಕೆ ಪತ್ರಗಳು ಸಾಹಿತಿಗಳನ್ನ ಭೀತಿಗೆ ತಳ್ಳಿತ್ತು. ಸಾಹಿತಿಗಳಿಗೆ ಬಂದ ಅನಾಮಧೇಯ ಬೆದರಿಕೆ ಪತ್ರ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಪ್ರಕರಣ ಭೇದಿಸುವ ಜವಾಬ್ದಾರಿ ಸಿಸಿಬಿಗೆ ವಹಿಸಿತ್ತು. ಎರಡು ವರ್ಷಗಳಿಂದ ಕಗ್ಗಂಟಾಗಿದ್ದ  ಪ್ರಕರಣವನ್ನ ಒಂದೇ ತಿಂಗಳಲ್ಲಿ ಭೇದಿಸಿದ ಸಿಸಿಬಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಸಾಹಿತಿಗಳಿಗೆ ಬೆದರಿಕೆ ಹಾಕ್ತಿದ್ದ ಆಸಾಮಿ ಯಾರು?

ರಾಜ್ಯದಲ್ಲಿ ತೀವ್ರ ಚರ್ಚಗೆ ಗ್ರಾಸವಾಗಿದ್ದ ಸಾಹಿತಿಗಳಿಗೆ ಬೆದರಿಕೆ ಪತ್ರ ವಿವಾದ ಸುಖಾಂತ್ಯಗೊಂಡಿದೆ. ಸರಿ‌ ಸುಮಾರು ಎರಡು ವರ್ಷಗಳಿಂದ ಪತ್ತೆಯಾಗದೆ ಇದ್ದ ಅನಾಮಧೇಯ ಪತ್ರದ ರೂವಾರಿ ಹಾಗೂ ಕಿಂಗ್ ಪಿನ್ ನ್ನ ಪತ್ತೆ ಹಚ್ಚುವಲ್ಲಿ ಸಿಸಿಬಿ ಪೊಲೀಸ್ರು ಯಶಸ್ವಿಯಾಗಿದ್ದು, ಆರೋಪಿ ಶಿವಾಜಿರಾವ್ ಜಾದವ್(Shivajirao jadhav) ಎಂಬಾತ ಸಿಸಿಬಿ ಪೊಲೀಸ್ರಿಂದ ಬಂಧನಕ್ಕೊಳಗಾಗಿದ್ದಾನೆ.

ಸಾಹಿತಿ, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆ: ಹಿಂದೂ ಕಾರ್ಯಕರ್ತ ಶಿವಾಜಿ ರಾವ್‌ ಅರೆಸ್ಟ್!

ದಾವಣಗೆರೆ ಮೂಲದ ಆರೋಪಿ ಶಿವಾಜಿರಾವ್ ಜಾದವ್ , ಸ್ಥಳೀಯ ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿ ಕೊಂಡಿದ್ದ. ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡೋರನ್ನ ಹಾಗೂ ಬರೆಯುವವರನ್ನ ಟಾರ್ಗೆಟ್ ಮಾಡಿ, ಅವ್ರಿಗೆ ನಿಮ್ಮನ್ನ ಯಾಕೆ ಕೊಲೆ ಮಾಡಬಾರದು..!?, ನಿಮ್ಮ ತಲೆ ಯಾಕೆ ಕಡಿಯಬಾರದು, ನಿಮ್ಮನ್ನ ಯಾಕೆ ಗುಂಡಿಟ್ಟು ಕೊಲ್ಲಬಾರದು. ನಿಮ್ಮ ಕೊನೆ ದಿನಗಳನ್ನ ಎಣಿಸ್ತಿದ್ದೀರಿ. ಅಂತೆಲ್ಲಾ ಬೆದರಿಕೆ ಸಂದೇಶವಿದ್ದ ಪತ್ರ ಬರೆದು ಪೋಸ್ಟ್ ಮಾಡುತ್ತಿದ್ದ.

ಹೀಗೆ ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ಬಿಟಿ ಲಲಿತಾನಾಯಕ್ , ಕುಂ ವೀರಭದ್ರಪ್ಪ, ಬಿಎಲ್ ವೇಣು, ಡಾ. ವಸುಂಧರಾಗೆ ಬೆದರಿಕೆ ಪತ್ರ ಬರೆದಿದ್ದ. ಈ ಸಂಬಂಧ ಸಂಜಯನಗರ, ಕೊಟ್ಟೂರು, ಚಿತ್ರದುರ್ಗ, ಹಾರೋಹಳ್ಳಿ -2 ಎಫ್ಐಆರ್, ಬಸವೇಶ್ವರ ನಗರ -2 ಎಫ್ಐಆರ್ ದಾಖಲಾಗಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಭೇದಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಕರಣದ ಗಂಭೀರತೆ ಅರಿತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಕಳೆದ ಆಗಸ್ಟ್ 24 ರಂದು ಪ್ರಕರಣದ ತನಿಖೆಯನ್ನ ಸಿಸಿಬಿ ಗೆ ವರ್ಗಾಹಿಸಿ ಆದೇಶಿಸಿದ್ದರು. 

ಇತ್ತ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಎಫ್ ಎಸ್ ಎಲ್ ಗೆ ಬೆದರಿಕೆ ಪತ್ರವನ್ನ ಕಳುಹಿಸಿದ್ದ ಸಿಸಿಬಿ ಪೊಲೀಸರು ಬೆದರಿಕೆ ಪತ್ರವನ್ನ ಎಫ್ ಎಸ್ ಎಲ್ ಪರೀಕ್ಷೆಗೆ ಒಳಪಡಿಸಿದ್ದು, ಎಫ್ಎಸ್ಎಲ್ ವರದಿಯಲ್ಲಿ ಬರವಣಿಗೆ ಒಬ್ಬನದೇ ಎಂದು ಧೃಡವಾಗಿತ್ತು. ಬಳಿಕ ತನಿಖೆ ಕೈಗೊಂಡ ಸಿಸಿಬಿ ಟೀಂ ಬೆದರಿಕೆ ಪತ್ರದ ಮೇಲಿನ ಸೀಲ್ ಹಾಗೂ ಪೋಸ್ಟ್ ಆಫೀಸ್ ಗಳ ಬಳಿಯಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿ ಶಿವಾಜಿರಾವ್ ಜಾದವ್ ಬಂಧಿಸಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರೋ ಸಿಎಂ ಸಿದ್ದರಾಮಯ್ಯ ನಾಡಿನ ಹಿರಿಯ ಸಾಹಿತಿಗಳು, ಬರಹಗಾರರು, ರಾಜಕೀಯ ನಾಯಕರು, ಧರ್ಮ ಗುರುಗಳಿಗೆ ಪತ್ರಗಳ ಮೂಲಕ ಜೀವ ಬೆದರಿಕೆ ಒಡ್ಡುತ್ತಿದ್ದ ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ..
ಆರೋಪಿಯ ಜೊತೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳು ಷಾಮೀಲಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನಿನ ಕೈಗಳಿಗೆ ಒಪ್ಪಿಸುವ ಮೂಲಕ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದಿದ್ದಾರೆ.

ನಾಡಿನ ಪ್ರತಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಬದ್ಧವಿದೆ. ಸಮಾಜಮುಖಿ ಧ್ವನಿಯನ್ನು ಅಡಗಿಸಲು ಯತ್ನಿಸುವ ದುಷ್ಟ ಶಕ್ತಿಗಳೆಡೆಗೆ ನಮ್ಮದು 'ಜೀರೊ ಟಾಲರೆನ್ಸ್' ಎಂದು ತಿಳಿಸಿದ್ದಾರೆ. 

ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ; ಸಿಸಿಬಿ ತನಿಖೆ ಶುರು!

ಇನ್ನು ಮತ್ತೊಂದೆಡೆ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಹಿನ್ನಲೆ ದಾವಣಗೆರೆ ಮೂಲದ ಶಿವಾಜಿರಾವ್ ಜಾಧವ್ ಬಂಧಿಸಿದ ಬಳಿಕ ಸಿಸಿಬಿ ಪೊಲೀಸರು ದಾವಣಗೆರೆ ನಗರದ  ಇಡಬ್ಲು ಎಸ್ ಕಾಲೋನಿ ಮಹಜರ್‌ ನಡೆಸಿದ್ರು.  ಅಲ್ಲದೆ ದಾವಣಗೆರೆ ಶಿವಪ್ಪ ನಗರದಲ್ಲಿರುವ ರಾಜು ಪ್ರಿಂಟರ್ಸ್ , ಲೈಬ್ರರಿ ಸೇರಿದಂತೆ ಹಲವು ಕಡೆಗಳಲ್ಲಿ ಮಹಜರ್ ಮಾಡಿದ್ದಾರೆ.

ಸದ್ಯ ಬಂಧಿತ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಬೆದರಿಕೆ ಪತ್ರ ಬರೆದಿದ್ದ ಸಾಹಿತಿಗಳು ಹಿಂದೂ ಧರ್ಮದ ವಿರೋಧಿಗಳು ಹಾಗಾಗಿ ಪತ್ರ ಬರೆದಿದ್ದೆ ಎಂದು ಹೇಳಿದ್ದಾನೆ. ಹೀಗಾಗಿ ಶಿವಾಜ್ ರಾವ್ ಜಧಾವ್ ನನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿ 13 ದಿನಗಳ ಕಾಲ ವಶಕ್ಕೆ ಪಡೆದಿರುವ ಸಿಸಿಬಿ ಟೀಂ, ಶಿವಾಜಿರಾವ್ ಹಿಂದೆ ಯಾರ್ಯಾರಿದ್ದಾರೆ.‌ಮತ್ಯಾರಿಗೆ ಬೆದರಿಕೆ ಪತ್ರ ಬರೆದಿದ್ದ. ಯಾವ ಉದ್ದೇಶಕ್ಕಾಗಿ ಬರೆದಿದ್ದ ಎಂಬುದನ್ನ ಪತ್ತೆಯಚ್ಚಲು ತನಿಖೆ ಮುಂದುವರೆಸಿದ್ದಾರೆ.

Follow Us:
Download App:
  • android
  • ios