ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಮೂರನೇ ಬಾರಿಗೆ ಮದ್ಯದ ದರ ಏರಿಕೆಯಾಗಿದೆ. ₹೪೦,೦೦೦ ಕೋಟಿ ಅಬಕಾರಿ ಗುರಿ ತಲುಪಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕ್ವಾರ್ಟರ್‌ಗೆ ₹೧೦ ರಿಂದ ₹೨೫ ಹಾಗೂ ಫುಲ್ ಬಾಟಲಿಗೆ ₹೫೦ ರಿಂದ ₹೧೦೦ ರಷ್ಟು ಏರಿಕೆಯಾಗಿದೆ. ನಾಲ್ಕು ಸ್ಲ್ಯಾಬ್‌ಗಳಲ್ಲಿ ₹೧೦ ರಿಂದ ₹೧೫ ರಷ್ಟು ಏರಿಕೆ ಕಂಡುಬಂದಿದೆ. ಬಾರ್‌ಗಳಲ್ಲಿ ಇನ್ನಷ್ಟು ಹೆಚ್ಚಿನ ಬೆಲೆ ಇರಲಿದೆ. ಗ್ರಾಹಕರಲ್ಲಿ ಅಸಮಾಧಾನ ಮನೆಮಾಡಿದೆ.

ಬೆಂಗಳೂರು (ಮೇ 16) : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ವರ್ಷವಾದರೂ ಮದ್ಯ ಪ್ರಿಯರಿಗೆ ಈಗಾಗಲೇ 3ನೇ ಬಾರಿ ದರ ಏರಿಕೆಯ ಹೊಡೆತ ತಗುಲಿದೆ. ಅಬಕಾರಿ ಇಲಾಖೆ ಇಂದಿನಿಂದಲೇ ನೂತನ ದರಗಳನ್ನು ಜಾರಿಗೆ ತರುವ ಮೂಲಕ, ಮದ್ಯದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25 ದರ ಹೆಚ್ಚಳವಾಗಲಿದೆ. ಹೊಸ ದರ ಏರಿಕೆ ಇಂದಿನಿಂದಲೇ ಅನ್ವಯವಾಗಲಿದೆ.ನೀವೇನಾದ್ರೂ ಇವತ್ತು ಬಾರ್ ಕಡೆ ಹೋಗೋದಿದ್ದರೆ, ಜೇಬಲ್ಲಿ ಹೆಚ್ಚಿನ ಹಣ ಇಟ್ಟುಕೊಂಡು ಹೋದರೆ ಎಣ್ಣೆ ಸಿಗುತ್ತೆ. ಇಲ್ಲಾಂದ್ರೆ ವಾಪಸ್ ಬರಬೇಕಾಗುತ್ತದೆ.

ಈ ಹಿಂದೆಯೇ ಎರಡು ಬಾರಿ ಐಎಂಎಲ್ ಮದ್ಯದ ದರಗಳನ್ನು ಹೆಚ್ಚಿಸಿದ್ದ ಸರ್ಕಾರ, ಈಗ 2024-25ನೇ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗಾಗಿ ನಿಗದಿಪಡಿಸಿರುವ ₹40,000 ಕೋಟಿ ಟಾರ್ಗೆಟ್ ತಲುಪಿಸಲು ಮತ್ತೊಂದು ದರ ಏರಿಕೆಯ ಮಾರ್ಗವನ್ನು ಆರಿಸಿದೆ. ಈ ಬಾರಿಯ ಬಜೆಟ್‌ನಲ್ಲಿ ಮೌಲ್ಯಮಾಪನ ಆದಾಯದ ಗುರಿ ಹಿಂದಿನ ವರ್ಷಕ್ಕಿಂತ ₹1,400 ಕೋಟಿ ಹೆಚ್ಚಾಗಿದೆ.

ನೂತನ ದರ ಏರಿಕೆಯ ವಿವರಗಳು:
ಅಬಕಾರಿ ಇಲಾಖೆ ಈ ಬಾರಿ 16 ಸ್ಲ್ಯಾಬ್‌ಗಳ ಪೈಕಿ ಪ್ರಾಥಮಿಕ 4 ಸ್ಲ್ಯಾಬ್‌ಗಳ ಮೇಲೆ ದರ ಹೆಚ್ಚಳ ಜಾರಿಗೆ ತಂದಿದೆ:

ಸ್ಯ್ಲಾಬ್ 1:
ಹಳೆಯ ದರ: ₹65 → ನೂತನ ದರ: ₹80 (₹15 ಏರಿಕೆ)
ಸ್ಯ್ಲಾಬ್ 2:
ಹಳೆಯ ದರ: ₹80 → ನೂತನ ದರ: ₹95 (₹15 ಏರಿಕೆ)
ಸ್ಯ್ಲಾಬ್ 3:
ಹಳೆಯ ದರ: ₹120 → ನೂತನ ದರ: ₹130-₹135 (₹10-₹15 ಏರಿಕೆ)
ಸ್ಯ್ಲಾಬ್ 4:
ಹಳೆಯ ದರ: ₹130 → ನೂತನ ದರ: ₹140-₹145 (₹10-₹15 ಏರಿಕೆ)

ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25, ಒಂದು ಫುಲ್ ಬಾಟಲ್ ಮೇಲೆ ₹50 ರಿಂದ ₹100 ದರ ಏರಿಕೆ ಜಾರಿ. ಈ ದರಗಳು ಎಂಆರ್‌ಪಿ (MRP) ದರಗಳಾಗಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಮೌಲ್ಯ ವಸೂಲಾಗುವ ಸಾಧ್ಯತೆ ಇದೆ. ಅಲ್ಲಿ ಹೆಚ್ಚುವರಿ ₹10 ರಿಂದ ₹15 ವರೆಗೆ ಮೌಲ್ಯ ಹೆಚ್ಚಾಗಲಿದೆ. ಮದ್ಯದ ದರ ಏರಿಕೆಯಿಂದ ಸಾಮಾನ್ಯ ಗ್ರಾಹಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮಾರಾಟಗಾರರು ಮತ್ತು ಬಾರ್ ಮಾಲೀಕರು ದರ ಏರಿಕೆಯ ಮಾಹಿತಿ ಪ್ರಕಟವಾದ ತಕ್ಷಣವೇ ಹೊಸ ಬೆಲೆ ಪಟ್ಟಿಗಳನ್ನು ಅಳವಡಿಸಲು ಮುಂದಾಗಿದ್ದಾರೆ.