ಬೆಳಗಾವಿ(ಅ.28): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಪ್ರವರ್ಗ 2(ಎ) ಮತ್ತು ಕೇಂದ್ರ ಸರ್ಕಾರ ಒಬಿಸಿ(ಇತರೆ ಹಿಂದುಳಿದ ವರ್ಗ) ಮೀಸಲಾತಿ ನೀಡುವಂತೆ ಆಗ್ರಹಿಸಿ ಬುಧವಾರ ಬೆಳಗಾವಿಯ ಸುವರ್ಣವಿಧಾನಸೌಧದ ಎದುರು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್‌ ಉಪವಾಸ ಸತ್ಯಾಗ್ರಹ ನಡೆಯಲಿದೆ. ಈ ವೇಳೆ ರಾಜ್ಯದ ನಾನಾ ಭಾಗಗಳಿಂದ ಸಮುದಾಯದ ಸುಮಾರು 25 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಇದು ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ದೊಡ್ಡ ವೇದಿಕೆಯಾಗಿ ಮಾರ್ಪಡಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಲಕ್ಷ್ಮೇ ಹೆಬ್ಬಾಳಕರ್‌, ಮುರುಗೇಶ ನಿರಾಣಿ ಸೇರಿದಂತೆ ಸಮುದಾಯದ ಜನಪ್ರತಿನಿಧಿಗಳೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದು ಸಮುದಾಯದ ಹಕ್ಕುಗಳನ್ನು ಮಂಡಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆ.

ಈ ಹೋರಾಟದ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಹೋರಾಟದ ಮುಂದಾಳು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಕೃಷಿ ಕಾಯಕದ ಮೇಲೆಯೇ ಅವಲಂಬಿತವಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಸಮೃದ್ಧಿಗಾಗಿ ಈ ಮೀಸಲಾತಿ ಕಲ್ಪಿಸುವ ಅತ್ಯಗತ್ಯವಿದ್ದು, ರಾಜ್ಯದಲ್ಲಿ ಶೇ.70ರಷ್ಟುಲಿಂಗಾಯತ ಪಂಚಮಸಾಲಿ ಸಮುದಾಯದ ಜನರು ಜೀವನ ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಅವರ ಜೀವನ ರೂಪಿಸಿಕೊಳ್ಳಲು ಅನುವು ಮಾಡಿಕೊಳ್ಳಬೇಕು. ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಪ್ರವರ್ಗ 2 (ಎ) ಹಾಗೂ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ನೀಡುವಂತೆ ಒಕ್ಕೊರಲಿನಿಂದ ಹಕ್ಕೊತ್ತಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲರೂ ಶಾಂತಿಯುತವಾಗಿ ಹೋರಾಟದ ಮೂಲಕ ರಾಜ್ಯ ಮತ್ತು ಕೇಂದ್ರದ ಸರ್ಕಾರದ ಮೇಲೆ ಹಕ್ಕೊತ್ತಾಯ ಮಾಡಲಾಗುತ್ತದೆ. ಅಲ್ಲದೇ, ಸುವರ್ಣವಿಧಾನಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆ ಸ್ಥಾಪಿಸುವಂತೆಯೂ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗುತ್ತದೆ.