ಫೆಂಗಲ್ ಚಂಡಮಾರುತ ಎಫೆಕ್ಟ್: ಕರ್ನಾಟಕದಲ್ಲಿ ಇಂದು, ನಾಳೆಯೂ ಮಳೆ
ಫೆಂಗಲ್ ಚಂಡಮಾರುತದ ಅಬ್ಬರದಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು, ಮುಂದಿನ ಒಂದೆರಡು ದಿನ ಕರಾವಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ತಿಳಿಸಿದ ಹವಾಮಾನ ಇಲಾಖೆ
ಬೆಂಗಳೂರು(ಡಿ.04): ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ರಾಜದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆಯಾಗಿದೆ, ವ್ಯಕ್ತಿಯೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸಿಡಿಲಿಗೆ 3 ಮನೆಗಳ ವಿದ್ಯುತ್ ಉಪಕರಣಗಳು ಹಾಳಾಗಿವೆ. ಮಂಗಳೂರು ಏರ್‌ಪೋರ್ಟ್ ಬಳಿ ಗುಡ್ಡದ ಮಣ್ಣು ಕುಸಿದಿದೆ. ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಕೆಯ್ಯರು ಬಳಿ ಮನೆಯ ಮುಂಭಾಗ ಹಾಕಲಾಗಿದ್ದ ಶೀಟ್ ಬಳಿ ವಿದ್ಯುತ್ ಬಲ್ಟ್ ಹಾಕುತ್ತಿದ್ದ ವೇಳೆ ಸಿಡಿಲು ಬಡಿದು ನಾರಾಯಣ (45) ಮೃತಪಟ್ಟಿದ್ದಾರೆ.
ಬ್ರಹ್ಮಾವರ ತಾಲೂಕಿನ 3 ಮನೆಗಳಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಮಂಗಳೂರು ಏರ್‌ಪೋರ್ಟ್ ಬಳಿ ಗುಡ್ಡದ ಮಣ್ಣು ಕುಸಿದ ಪರಿಣಾಮ ಸಮೀಪದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಫೆಂಗಲ್ ಚಂಡಮಾರುತಕ್ಕೆ ಬೆಂಗ್ಳೂರು ಕಂಗಾಲ್: ಜನರ ಪರದಾಟ
ಕೊಣಾಜೆಯ ಎಸ್ ಬಿಐ ಬ್ಯಾಂಕ್‌ಗೆ ಸಿಡಿಲು ಬಡಿದು ಹಾನಿ ಉಂಟಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮರಗಳು ಬಿದ್ದು, 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 60ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಮಳೆಯಿಂದಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಲ್ಪಾವಣಿಯ ಪ್ರೈವುಡ್ ಶೀಟ್ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸರಸ್ವತಿಪುರಂನಲ್ಲಿ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಚಾಮುಂಡಿಬೆಟ್ಟದಲ್ಲಿ ರಸ್ತೆಗೆ ಬಂಡೆ ಉರುಳಿ ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಇದೇ ವೇಳೆ, ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಗಳೂರು, ಕೊಡಗು, ಚಾಮರಾಜ ನಗರ, ಶಿವಮೊಗ್ಗ, ಚಿತ್ರದುರ್ಗ, ಕೋಲಾರ, ಮಂಡ್ಯ ಉಡುಪಿ, ಮಂಗಳೂರು, ಮೈಸೂರು ಹಾಗೂ ರಾಮನಗರ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.
ಬೆಳೆ ಹಾನಿ:
ಅಕಾಲಿಕ ಮಳೆಯಿಂದಾಗಿ ಧಾರವಾಡ ಜಿಲ್ಲೆಯೊಂದರಲ್ಲೇ ಸುಮಾರು 12 ಸಾವಿರ ಹೆಕ್ಟೇರ್ ವ್ಯಾಪ್ತಿಯ ಮಾವು, ಭತ್ತ ಹಾಗೂ ಕಡಲೆ ಬೆಳೆಯ ಫಸಲಿಗೆ ಧಕ್ಕೆ ಉಂಟಾಗಿದೆ. ಡಿಸೆಂಬರ್ ತಿಂಗಳಲ್ಲಿ ಪರಾಗಸ್ಪರ್ಶವಾಗಿ ಮಾವು ಹೂ ಬಿಡುವ ಸಮಯ. ಹೀಗಾಗಿ, ಮುಂದಿನ ಮಾವು ಪಸಲಿಗೆ ತೊಂದರೆ ಉಂಟಾಗಿದೆ. ಕಡಲೆ ಸಹ ಹೂ ಬಿಡುತ್ತಿದ್ದು, ಹಿಂಗಾರು ಹಂಗಾಮಿಗೆ ಶೇ.30ರಷ್ಟು ಮುಕ್ಕಟ್ಟಿನಲ್ಲಿ ಕಡಲೆ ಬೆಳೆದವರಿಗೆ ಮಳೆ ಸಂಕಷ್ಟ ತಂದಿದೆ.
ಕೋಲಾರ, ಕೊಡಗು ಸೇರಿ ಹಲವೆಡೆ ಕೊಯ್ದ ಭತ್ತದ ಫಸಲು ನೀರು ಪಾಲಾಗಿದೆ. ರೈತರು ಕೊಯ್ದ ಪೈರು ಒಣಗಿಸುವ ಉದ್ದೇಶದಿಂದ ಬದುಗಳಲ್ಲಿ ಇರಿ ಸಿದ್ದಾರೆ. ಮಳೆಯಿಂದಾಗಿ, ಬೆಳೆದಿದ್ದ ಭತ್ತದ ಬೆಳೆ ನೀರು ಪಾಲಾಗಿ ರೈತರು ಕಂಗಾ ಲಾಗಿದ್ದಾರೆ. ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿ ಹಲವೆಡೆ ಅಡಕೆ ಕೊಯ್ದು ಶುರುವಾಗಿದ್ದು, ಮಳೆಗೆ ಅಡಕೆ ಹಾಳಾಗುತ್ತಿದೆ. ಕಾಫಿ ಬೆಳೆಗೂ ಹಾನಿ ಸಂಭವಿಸಿದೆ
ಇಂದು, ನಾಳೆಯೂ ಮಳೆ
ಬೆಂಗಳೂರು: ಫೆಂಗಲ್ ಚಂಡಮಾರುತದ ಅಬ್ಬರದಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು, ಮುಂದಿನ ಒಂದೆರಡು ದಿನ ಕರಾವಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಬ್ಬರಿಸುತ್ತಿದೆ ಫೆಂಗಲ್ ಮೂರು ರಾಜ್ಯ ಕಂಗಾಲ್: ಡೆಡ್ಲಿ ಚಂಡಮಾರುತಗಳು ಸೃಷ್ಟಿಯಾಗೋದು ಹೇಗೆ..?
ಫೆಂಗಲ್ ಚಂಡಮಾರುತ ತಮಿಳುನಾಡು, ರಾಜ್ಯದ ದಕ್ಷಿಣ ಒಳನಾಡಿನ ಮೂಲಕ ಇದೀಗ ಅರಬ್ಬಿ ಸಮುದ್ರ ಸೇರಿಕೊಂಡಿದೆ. ಚಂಡಮಾರುತದ ಪ್ರಭಾವ ಕಡಿಮೆಯಾಗಿದ್ದರೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಪ್ರಮಾಣದ ಮಳೆಯಾಗಿದೆ.
ಒಟ್ಟಾರೆ ರಾಜ್ಯದಲ್ಲಿ ಡಿ.9ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ ಅತೀ ಹೆಚ್ಚು 26 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮಂಗಳೂರಿನಲ್ಲಿ 19, ಪಣಂಬೂರು 18, ಕಾರ್ಕಳ 15, ಉಡುಪಿ 14, ಕೋಟ 13, ಭಾಗಮಂಡಲ, ಮದ್ದೂರು ಹಾಗೂ ಬೆಳ್ಳೂರಿನಲ್ಲಿ ತಲಾ 9, ಹುಣಸೂರು, ನಾಪೋಕ್ಲು ತಲಾ 6, ಪುತ್ತೂರು, ಮಾಣಿ, ಸುಳ್ಯ, ಸರಗೂರು ಮಂಡ್ಯದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.