ಬೆಂಗಳೂರು (ಅ.18):  ದೇಶದಲ್ಲಿ ಕೋವಿಡ್‌-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ಯೋಜನೆಯಡಿ ನೀಡುತ್ತಿರುವ ಪಡಿತರ ಆಹಾರ ಧಾನ್ಯಗಳನ್ನು 2021ರ ಮಾರ್ಚ್ ತಿಂಗಳವರೆಗೆ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೊರೋನಾ ಲಾಕ್‌ಡೌನ್‌ ಆರಂಭದಿಂದ ನವೆಂಬರ್‌ವರೆಗೂ ಪಡಿತರ ಚೀಟಿದಾರರಿಗೆ ತಲಾ 5 ಕೆ.ಜಿ. ಅಕ್ಕಿ ಮತ್ತು ಒಂದು ಕುಟುಂಬಕ್ಕೆ ತಲಾ 1 ಕೆ.ಜಿ. ಬೇಳೆಯನ್ನು ಉಚಿತವಾಗಿ ವಿತರಣೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಪ್ರಸ್ತುತ ಎಲ್ಲೆಡೆ ಕೊರೋನಾ ಸೋಂಕು ವಿಪರೀತವಾಗಿ ಹರಡುತ್ತಿದೆ. ಜತೆಗೆ ರಾಜ್ಯದ 178 ತಾಲೂಕುಗಳಲ್ಲಿ ಪ್ರವಾಹ ಬಂದಿದ್ದು, ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಹಾಗಾಗಿ 2021ರ ಮಾರ್ಚ್ ಗೆ ಈ ಯೋಜನೆ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.

ಅನರ್ಹ ರೇಶನ್ ಕಾರ್ಡ್ ಇದ್ರೆ.. ಸಿಎಂ ಕೊನೆ ಎಚ್ಚರಿಕೆ, ಇಟ್ಗೊಂಡ್ರೆ ಏನಾಗುತ್ತದೆ? ...

ದೇಶದೆಲ್ಲೆಡೆ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರ ಮಾನವೀಯತೆಯಿಂದ ಪಡಿತರ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ, ಕಡಲೇಕಾಳು, ಗೋಧಿ ಸೇರಿದಂತೆ ಮತ್ತಿತರ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಸಂಕಷ್ಟದಲ್ಲಿರುವ ಬಡಜನರ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.