ಮರಣಪೂರ್ವ ಹೇಳಿಕೆಗೆ ಮಾನಸಿಕ ದೃಢತೆ ಪತ್ರ ಕಡ್ಡಾಯವಲ್ಲ: ಹೈಕೋರ್ಟ್
* ವೈದ್ಯರು ಈ ಪ್ರಮಾಣಪತ್ರ ನೀಡಬೇಕು ಎಂದೇನಿಲ್ಲ
* ಹೇಳಿಕೆ ವಿಶ್ವಾಸಾರ್ಹವಾಗಿದ್ದರಾ ಸಾಕ್ಷ್ಯಕ್ಕೆ ಅರ್ಹ: ಹೈಕೋರ್ಟ್
* ಪ್ರಕರಣದಲ್ಲಿ ಖುಲಾಸೆಯಾಗಿದ್ದ ಆರೋಪಿಗೆ 7 ವರ್ಷ ಜೈಲು
ವೆಂಕಟೇಶ್ ಕಲಿಪಿ
ಬೆಂಗಳೂರು(ಮೇ.18): ಮರಣಪೂರ್ವ ಹೇಳಿಕೆ ದಾಖಲಿಸಲು ಸಂತ್ರಸ್ತರು ಮಾನಸಿಕವಾಗಿ ಸದೃಢವಾಗಿದ್ದರು ಎಂಬುದನ್ನು ಪ್ರಮಾಣೀಕರಿಸಿ ವೈದ್ಯರು ಪ್ರಮಾಣ ಪತ್ರ ನೀಡುವುದು ಕಡ್ಡಾಯವಲ್ಲ. ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹವಾಗಿದ್ದರೆ ಅದನ್ನೇ ಪ್ರಮುಖವಾಗಿ ಸಾಕ್ಷ್ಯವಾಗಿ ಪರಿಗಣಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ವ್ಯಕ್ತಿಯೊಬ್ಬ ಮಾಡಿದ ಹಲ್ಲೆಯಿಂದ ಅಪಮಾನಗೊಂಡು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡ ಪ್ರಕರಣದಲ್ಲಿ ಸಾವನ್ನಪ್ಪುವ ಮುನ್ನ ಸಂತ್ರಸ್ತೆಯು ಪೊಲೀಸರಿಗೆ ಮರಣಪೂರ್ವ ಹೇಳಿಕೆ ದಾಖಲಿಸಿದ್ದರು. ಆದರೆ, ಹೇಳಿಕೆ ದಾಖಲಿಸಲು ಆಕೆ ಮಾನಸಿಕವಾಗಿ ಸದೃಢವಾಗಿದ್ದರು ಎಂಬುದನ್ನು ದೃಢೀಕರಿಸಿ ವೈದ್ಯ ಪ್ರಮಾಣ ಪತ್ರ ನೀಡದೇ ಇರುವುದನ್ನು ಪರಿಗಣಿಸಿ ಅಧೀನ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದೀಗ ಹೈಕೋರ್ಚ್ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿ ಆರೋಪಿಗೆ ಗರಿಷ್ಠ 7 ವರ್ಷ ಜೈಲು ಮತ್ತು 17,500ರು. ದಂಡ ವಿಧಿಸಿದೆ. ಕೊಳ್ಳೆಗಾಲ ಗ್ರಾಮೀಣಾ ಠಾಣಾ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರು ಈ ತೀರ್ಪು ನೀಡಿದ್ದಾರೆ.
High Court Order ಪೋಷಕರಿಂದ ಪ್ರತ್ಯೇಕವಾಗಿ ಬದುಕುವಂತೆ ಪತಿಗೆ ಒತ್ತಾಯಿಸುವುದು ಕ್ರೌರ್ಯ, ಹೈಕೋರ್ಟ್!
ಹಲ್ಲೆಗೆ ಬೇಸತ್ತು ಆತ್ಮಹತ್ಯೆ:
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಕುಂತೂರ್‌ಮೋಳೆ ಗ್ರಾಮ ನಿವಾಸಿ ಶಾಂತಾಶೆಟ್ಟಿ2008ರ ಜೂ.12ರಂದು ನೆರೆ ಮನೆಯ ಮಹಿಳೆಯೊಂದಿಗೆ ಜಗಳ ಮಾಡಿದ ಸಂದರ್ಭದಲ್ಲಿ ಆಕೆಯನ್ನು ರಸ್ತೆಗೆ ಎಳೆದು ತಂದು ಹಲ್ಲೆ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಲ್ಲದೆ, ‘ಜೀವಂತವಾಗಿರುವ ಬದಲು ಹೋಗಿ ಸಾಯಿ’ ಎಂದು ಬೈದಿದ್ದರು.
ಇದರಿಂದ ಅವಮಾನ ಸಹಿಸದೆ ಮಹಿಳೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡಿದ್ದರು. ನಂತರ ಆಕೆಯನ್ನು ಚಿಕಿತ್ಸೆಗೆಂದು ದಾಖಲು ಮಾಡಿದ್ದ ಆಸ್ಪತ್ರೆಗೆಯ ವೈದ್ಯರ ಸೂಚನೆ ಮೇರೆಗೆ ಕೊಳ್ಳೆಗಾಲ ಗ್ರಾಮೀಣ ಠಾಣೆ ಮುಖ್ಯಪೇದೆ ಆಸ್ಪತ್ರೆಗೆ ಆಗಮಿಸಿ ಮಹಿಳೆಯ ಹೇಳಿಕೆ(ಮರಣಪೂರ್ವ) ದಾಖಲಿಸಿಕೊಂಡಿದ್ದರು. ಹೇಳಿಕೆ ಆಧರಿಸಿ ಶಾಂತಾಶೆಟ್ಟಿವಿರುದ್ಧ ಪ್ರಕರಣ ದಾಖಲಿಸಿದ್ದರು. ಐದು ದಿನಗಳ ನಂತರ ಮಹಿಳೆ ಸಾವನ್ನಪ್ಪಿದ್ದರು. ನಂತರ ಶಾಂತಾಶೆಟ್ಟಿವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣ ಸೇರಿಸಲಾಗಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಸಲ್ಲಿಸಿದ್ದರು.
ಖುಲಾಸೆ:
ಆದರೆ ಪ್ರಕರಣದ ವಿಚಾರಣೆ ನಡೆಸಿದ ಕೊಳ್ಳೇಗಾಲ ತ್ವರಿತ ಗತಿ ನ್ಯಾಯಾಲಯ,ಮರಣಪೂರ್ವ ಹೇಳಿಕೆ ದಾಖಲಿಸಲು ಸಂತ್ರಸ್ತೆ ಮಾನಸಿಕವಾಗಿ ಸದೃಢವಾಗಿದ್ದರು ಎಂಬುದನ್ನು ದೃಢೀಕರಿಸಿ ಚಿಕಿತ್ಸೆ ನೀಡಿದ್ದ ವೈದ್ಯರು ಪ್ರಮಾಣಪತ್ರ ನೀಡಿಲ್ಲ. ಹೀಗಾಗಿ, ಮರಣಪೂರ್ವ ಹೇಳಿಕೆ ನಂಬಲಾರ್ಹ ಹಾಗೂ ವಿಶ್ವಾಸಾರ್ಹವಾಗಿಲ್ಲ ಎಂದು ತೀರ್ಮಾನಿಸಿ ಶಾಂತಶೆಟ್ಟಿಯನ್ನು ಖುಲಾಸೆಗೊಳಿಸಿ 2011ರ ಜೂ.3ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು, ಆರೋಪಿಯನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸುವಂತೆ ಕೋರಿ ಪೊಲೀಸರು ಹೈಕೋರ್ಚ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ದೂರ ಶಿಕ್ಷಣದಿಂದ ಕೆಲಸ ಕಳೆದುಕೊಂಡ ವ್ಯಕ್ತಿಗೆ ಉದ್ಯೋಗ: ಹೈಕೋರ್ಟ್
ಪೊಲೀಸರ ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಚ್, ಮರಣ ಪೂರ್ವ ಹೇಳಿಕೆ ದಾಖಲಿಸಲು ಸಂತ್ರಸ್ತೆ ಮಾನಸಿಕವಾಗಿ ಸದೃಢವಾಗಿದ್ದರೆಂಬ ಬಗ್ಗೆ ದೃಢೀಕರಿಸಿ ಚಿಕಿತ್ಸೆ ನೀಡಿದ ವೈದ್ಯರು ಪ್ರಮಾಣ ಪತ್ರ ನೀಡುವುದು ಕಡ್ಡಾಯವಲ್ಲ. ಅದೂ ಅತ್ಯಂತ ಪ್ರಮುಖ ಸಾಕ್ಷ್ಯವೂ ಅಲ್ಲ. ಕೇವಲ ತಾಂತ್ರಿಕ ಅಂಶವಷ್ಟೇ. ಮರಣಪೂರ್ವ ಹೇಳಿಕೆಯನ್ನು ಸಂತ್ರಸ್ತರೇ ಪ್ರಮಾಣೀಕರಿಸುತ್ತಾರೆ. ಅದುವೇ ಮರಣಪೂರ್ವ ಹೇಳಿಕೆ ದಾಖಲಿಸಲು ಸಂತ್ರಸ್ತರು ಮಾನಸಿಕವಾಗಿ ಸದೃಢವಾಗಿದ್ದಳು ಎಂಬುದನ್ನು ನಿರೂಪಿಸುತ್ತದೆ ಎಂದು ಹೇಳಿದೆ.
ಅಪರಾಧಿಯಾಗಿ ನಿರ್ಧಾರ:
ಪ್ರಕರಣದಲ್ಲಿ ಮರಣಪೂರ್ವ ಹೇಳಿಕೆಯಲ್ಲಿ ಸಂತ್ರಸ್ತೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆಕೆಯ ಪತಿ, ಪ್ರತ್ಯಕ್ಷ ದರ್ಶಿಗಳು ಗಲಾಟೆಯಿಂದಲೇ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಾಕ್ಷ್ಯ ನುಡಿದಿದ್ದಾರೆ. ಮರಣಪೂರ್ವ ಹೇಳಿಕೆಯನ್ನು ಮುಖ್ಯಪೇದೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹಾಗಾಗಿ, ಸಂತ್ರಸ್ತೆ ಆತ್ಮಹತ್ಯೆಗೆ ಶಾಂತಾಶೆಟ್ಟಿಪ್ರಚೋದನೆಯೇ ಕಾರಣ ಎನ್ನುವುದು ಸಾಬೀತಾಗಿದ್ದು, ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಲಾಗಿದೆ ಎಂದು ತೀರ್ಪುನಲ್ಲಿ ಉಲ್ಲೇಖಿಸಲಾಗಿದೆ.