* ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅಪರೂಪದ ನ್ಯಾಯಮೂರ್ತಿಗಳನ್ನು ನಾವೆಲ್ಲರೂ ಒಗ್ಗೂಡಿ ಬೆಂಬಲಿಸಬೇಕು * ಸತ್ಯದ ಪರ ಮಾತನಾಡುವ ನ್ಯಾಯಾಧೀಶರ ಧ್ವನಿ ದಮನಿಸುವ ಪ್ರಯತ್ನ ನಡೆದಿರುವುದು ವಿಷಾದನೀಯ* ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಸಿದ್ದರಾಮಯ್ಯ
ಬೆಂಗಳೂರು(ಜು.07): ಎರಡು ದಿನದ ಹಿಂದೆಯಷ್ಟೇ ಹೈಕೋರ್ಟ್ ನ್ಯಾಯಾಧೀಶರು ಹಿರಿಯ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದರು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅಪರೂಪದ ನ್ಯಾಯಮೂರ್ತಿಗಳನ್ನು ನಾವೆಲ್ಲರೂ ಒಗ್ಗೂಡಿ ಬೆಂಬಲಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಸತ್ಯದ ಪರ ಮಾತನಾಡುವ ನ್ಯಾಯಾಧೀಶರ ಧ್ವನಿಗಳನ್ನು ಕೂಡಾ ದಮನಿಸುವ ಪ್ರಯತ್ನ ನಡೆದಿರುವುದು ವಿಷಾದನೀಯ. ಆರೋಪಿ ನೂಪುರ್ ಶರ್ಮಾ ಅವರಿಗೆ ಸಂಬಂಧಿಸಿದಂತೆ ಸುಪ್ರೀಂಕೋರರ್ಟ್‌ನ ದ್ವಿಸದಸ್ಯ ಪೀಠ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಟೀಕೆ ಮಾಡಲಾಗುತ್ತಿದೆ. ಕರ್ನಾಟಕದ ಹೈಕೋರ್ಟ್ ನ್ಯಾಯಾಧೀಶರ ಮೇಲೂ ಒತ್ತಡಗಳು ಬರುತ್ತಿರುವ ಬಗ್ಗೆ ಅವರೇ ಹೇಳಿದ್ದಾರೆ. ಇಂತಹ ಅಪರೂಪದ ನ್ಯಾಯಮೂರ್ತಿಯವರನ್ನು ನಾವೆಲ್ಲರೂ ಒಗ್ಗೂಡಿ ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಇಬ್ಬರು ರಾಕಿಗಳಿಂದ ಸಿಎಂ ಕುರ್ಚಿಗೆ ಕಿತ್ತಾಟ: ಶ್ರೀರಾಮುಲು
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನೂಪುರ್ ಶರ್ಮಾ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳ ಟೀಕೆ ಸತ್ಯ ಮತ್ತು ನ್ಯಾಯ ನಿಷ್ಠರರ ಬಾಯಿ ಮುಚ್ಚಿಸುವ ಹತಾಶ ಪ್ರಯತ್ನ. ಇತ್ತೀಚಿನ ಕೆಲವು ನ್ಯಾಯಮೂರ್ತಿಯವರ ನಡವಳಿಕೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಅಸಮಾಧಾನ-ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಂತದಲ್ಲಿ ಸುಪ್ರೀಂ ಕೋರ್ಟ್‌ನ ಈ ಇಬ್ಬರು ನ್ಯಾಯಮೂರ್ತಿಗಳ ಹೇಳಿಕೆ ನ್ಯಾಯಾಂಗದ ಬಗ್ಗೆ ಭರವಸೆ ಮೂಡಿಸಿತ್ತು. ಈಗ ಅಂತಹ ದನಿಗಳನ್ನು ಕೂಡ ದಮನಿಸುವ ಪ್ರಯತ್ನ ನಡೆದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಆಡಳಿತಾರೂಢ ಪಕ್ಷದ ನಾಯಕರು ನ್ಯಾಯಾಲಯದ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿ ತಮ್ಮ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರ್ಯಾಂಗ - ಶಾಸಕಾಂಗಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾದಾಗ ಜನತೆ ನ್ಯಾಯಾಂಗದ ಕಡೆ ಭರವಸೆಯಿಂದ ನೋಡುತ್ತಾರೆ. ಪ್ರಭುತ್ವದ ಒತ್ತಡಗಳನ್ನು ಮೀರಿ ಜನತೆಯ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನ್ಯಾಯಮೂರ್ತಿಗಳ ದನಿ ಉಡುಗಿ ಹೋಗಲು ಬಿಡಬಾರದು ಎಂದು ಕರೆ ನೀಡಿದರು.
