ಕಳೆದ 2011ರಲ್ಲಿ ನಡೆದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ (ಕೆಎಎಸ್) ನೇಮಕಾತಿಯಲ್ಲಿ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಹಿಂಪಡೆದಿದ್ದ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ 2022ರಲ್ಲಿ ಹೊಸ ಕಾಯ್ದೆ ಜಾರಿಗೆ ತಂದು ಅಭ್ಯರ್ಥಿಗಳ ಆಯ್ಕೆಗೆ ಅನುವು ಮಾಡಿದ ನಿಯಮವನ್ನೇ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರಕರಣದಲ್ಲಿ ಪಾಲಿಸಬೇಕು ಎಂದು ಆಕಾಂಕ್ಷಿಗಳ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ ಹೈಕೋರ್ಟ್ ಮುಂದೆ ಪ್ರಬಲ ವಾದ ಮಂಡಿಸಿದರು.
ಬೆಂಗಳೂರು (ಜು.13): ಕಳೆದ 2011ರಲ್ಲಿ ನಡೆದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ (ಕೆಎಎಸ್) ನೇಮಕಾತಿಯಲ್ಲಿ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಹಿಂಪಡೆದಿದ್ದ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ 2022ರಲ್ಲಿ ಹೊಸ ಕಾಯ್ದೆ ಜಾರಿಗೆ ತಂದು ಅಭ್ಯರ್ಥಿಗಳ ಆಯ್ಕೆಗೆ ಅನುವು ಮಾಡಿದ ನಿಯಮವನ್ನೇ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರಕರಣದಲ್ಲಿ ಪಾಲಿಸಬೇಕು ಎಂದು ಆಕಾಂಕ್ಷಿಗಳ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ ಹೈಕೋರ್ಟ್ ಮುಂದೆ ಪ್ರಬಲ ವಾದ ಮಂಡಿಸಿದರು.
ಪಿಎಸ್‌ಐ ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು 2022ರ ಏ.29ರಂದು ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಮತ್ತು ಕಳಂಕಿತ ಮತ್ತು ಕಳಂಕ ರಹಿತ ಅಭ್ಯರ್ಥಿಗಳೆಂದು ಪ್ರತ್ಯೇಕಿಸಿ ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮೇಲ್ಮನವಿ ಸಲ್ಲಿಸದಿದ್ದರೂ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್!
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಕೆಲವು ಅಭ್ಯರ್ಥಿಗಳ ಪರ ಹಾಜರಾಗಿ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ ಅವರು, 2011ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅವ್ಯವಹಾರ ಕಂಡುಬಂದಿತ್ತು. ಆ ಕುರಿತು ಸಿಐಡಿ ತನಿಖೆ ನಡೆಸಿ ನೀಡಿದ್ದ ಮಧ್ಯಂತರ ವರದಿ ಆಧರಿಸಿಯೇ ರಾಜ್ಯ ಸರ್ಕಾರ ಇಡೀ ಪ್ರಕ್ರಿಯೆಯನ್ನು 2013ರ ಅಕ್ಟೋಬರ್ 15ರಂದು ಹಿಂಪಡೆದಿತ್ತು. ಆದರೆ 2022ರಲ್ಲಿ ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚಿನ ಗೆಜೆಟೆಡ್ ಪ್ರೊಬೆಷನರ್ಸ್ ಆಯ್ಕೆ ಸಿಂಧುತ್ವ ಮತ್ತು ನೇಮಕಾತಿ) ಕಾಯ್ದೆ ಜಾರಿ ಮೂಲಕ ಅವರ ಆಯ್ಕೆಗೆ ಅನುವು ಮಾಡಿಕೊಡಲಾಗಿದೆ. ಇದೇ ನಿಯಮವನ್ನು ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಪಾಲಿಸಬೇಕು ಎಂದು ತಿಳಿಸಿದರು.
ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಗೆ ಹಾಜರಾದ 54,103 ಮಂದಿಯ ಪೈಕಿ 545 ಮಂದಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. ಕೇವಲ 5 ಅಭ್ಯರ್ಥಿಗಳ ಓಎಂಆರ್ ಶೀಟ್ ತಿದ್ದಲಾಗಿದೆ ಎಂದು ಹೇಳಿ ಪರಿಶೀಲನೆ ನಡೆಸಲಾಗಿತ್ತು. ಅದರಲ್ಲಿ ನಾಲ್ಕು ಓಎಂಆರ್ ಶೀಟ್ ತಿದ್ದಿರುವುದು ಕಂಡುಬಂತು. ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲೀಷ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರು ಮತ್ತು ಆಡಳಿತ ಸಿಬ್ಬಂದಿಗಳು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಸಹಕರಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಾಜ್ಯಾದ್ಯಂತ ನೂರಾರು ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಎಲ್ಲಾ ಕೇಂದ್ರಗಳಲ್ಲಿ ಅಕ್ರಮ ನಡೆದಿರಲಿಲ್ಲ. ಇಡೀ ನೇಮಕಾತಿ ಪ್ರಕ್ರಿಯೆಯೇ ಸಂಪೂರ್ಣವಾಗಿ ಅಕ್ರಮವಾಗಿದೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ಇಲ್ಲದಿದ್ದರೂ 2022ರ ಏ.29ರಂದು ಪರೀಕ್ಷೆ ರದ್ದುಪಡಿಸಲು ಸರ್ಕಾರ ಆದೇಶಿಸಿದ್ದು ನ್ಯಾಯಸಮ್ಮತವಾಗಿಲ್ಲ ಎಂದು ತಿಳಿಸಿದರು.
ಅಲ್ಲದೆ, ಸರ್ಕಾರ ಆದೇಶ ಹೊರಡಿಸುವ ವೇಳೆಗೆ ಕಳಂಕ ರಹಿತ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿತ್ತು. 171 ಮಂದಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ವಿತರಿಸಲು ಬಾಕಿ ಇತ್ತು. ಈ ನಡುವೆ ವಿವೇಚನಾ ರಹಿತ, ಅಕ್ರಮ, ಅಸಂವಿಧಾನಿಕ ಮತ್ತು ಅತಾರ್ತಿಕವಾಗಿ ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಲು ಸರ್ಕಾರ ಆದೇಶಿಸಿದೆ. 15 ತಿಂಗಳು ಕಳೆದರೂ ಲಿಖಿತ ಪರೀಕ್ಷೆ ರದ್ದುಪಡಿಸಿರುವುದಕ್ಕೆ ಸಮರ್ಥವಾದ ಕಾರಣ ಹಾಗೂ ದಾಖಲೆಗಳು ರಾಜ್ಯ ಸರ್ಕಾರದ ಬಳಿ ಇಲ್ಲವೇ ಇಲ್ಲ ಎಂದು ಪೀಠಕ್ಕೆ ವಿವರಿಸಿದರು.
ಆಯ್ಕೆಯಾಗಿರುವ 545 ಅಭ್ಯರ್ಥಿಗಳ ಪೈಕಿ 53 ಮಂದಿಯ ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ. ಇವರಲ್ಲಿ 52 ಮಂದಿಗೆ 2022ರ ಏ.6ರಂದು ಷೋಕಾಸ್ ನೋಟಿಸ್ ನೀಡಿ, 2023 ಜೂನ್ 20ರಂದು ಅವರನ್ನು ಡಿಬಾರ್ ಮಾಡಲಾಗಿದೆ. 53 ಮಂದಿ ಆರೋಪಿಗಳನ್ನು ಹೊರತುಪಡಿಸಿ ಉಳಿದವರ ವಿರುದ್ಧ ಯಾವುದೇ ಆರೋಪಗಳು ಇಲ್ಲ. ಹಾಗಾಗಿ, ಅವರಿಗೆ ಕರ್ನಾಟಕ ನಾಗರಿಕ ಸೇವೆಗಳ ಕಾಯ್ದೆಯನ್ನು ಅನ್ವಯಿಸುವ ಮೂಲಕ ಕಳಂಕ ರಹಿತರನ್ನು ರಕ್ಷಿಸಬೇಕಿದೆ ಎಂದು ಕೋರಿದರು.
ಮಾಡಾಳುಗೆ ಲಂಚ ಕೊಟ್ಟವರ ವಿರುದ್ಧದ ಕೇಸ್ ರದ್ದು ಇಲ್ಲ: ಹೈಕೋರ್ಟ್
ದಿನದ ಕಲಾಪ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
