Asianet Suvarna News Asianet Suvarna News

ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಲಿ: ಚಿತ್ರನಟ ಶಿವಣ್ಣ

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಅವರು ಮಧ್ಯ ಪ್ರವೇಶಿಸಿ ಎರಡೂ ರಾಜ್ಯದ ನಡುವೆ ಇರುವ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು. 

Let PM Modi intervene in the Cauvery issue says dr shivaraj kumar at mandya rav
Author
First Published Oct 23, 2023, 5:02 AM IST

ಮದ್ದೂರು (ಅ.22):  ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿಯವರು ಮಧ್ಯ ಪ್ರವೇಶಿಸಿ ಎರಡೂ ರಾಜ್ಯದ ನಡುವೆ ಇರುವ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ವ್ಯವಸ್ಥೆಯೊಳಗೆ ರಾಜ್ಯಗಳ ನಡುವೆ ಏನೇ ಸಮಸ್ಯೆಗಳು, ವಿವಾದಗಳು ಉಂಟಾದರೂ ಪ್ರಧಾನ ಮಂತ್ರಿಗಳೇ ಅದನ್ನು ಬಗೆಹರಿಸಬೇಕು. ಆ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ರಾಜಕಾರಣವನ್ನು ಯಾರೂ ಮುಂದಕ್ಕೆ ತರಬಾರದು ಎಂದು ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಕುಳಿತು ಮಾತನಾಡಬೇಕು. ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲಿರುವವರೂ ರೈತರೇ, ಅಲ್ಲಿರುವವರೂ ರೈತರೇ. ದ್ವೇಷ, ರಾಜಕೀಯ, ಪ್ರತಿಷ್ಠೆಯನ್ನು ಮರೆತು ಒಟ್ಟಿಗೆ ಕುಳಿತು ಮಾತನಾಡಿದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.

ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದಿಂದಲೂ ಕರ್ನಾಟಕಕ್ಕೆ ಶಾಕ್‌: 3,000 ಕ್ಯೂಸೆಕ್‌ ನೀರು ಹರಿಸಲು ಆದೇಶ

ನಮಗೇ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಹರಿದುಹೋಗುತ್ತಿದೆ. ಇದು ಸರಿಯಲ್ಲ. ಈ ವಿಷಯವಾಗಿ ಎಲ್ಲರೂ ಸೇರಿ ಕುಳಿತು ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಕಾವೇರಿ ವಿಚಾರದಲ್ಲಿ ನಿಮ್ಮ ಹೋರಾಟ ಹೇಗಿರುತ್ತದೆ ಎಂದು ಪ್ರಶ್ನಿಸಿದಾಗ, ಹೋರಾಟ ಹೇಗಿರಬೇಕು ಎಂಬ ಬಗ್ಗೆಯೂ ಚರ್ಚೆಯಾಗಬೇಕು. ಸುಮ್ಮನೆ ಬೀದಿಯಲ್ಲಿ ನಿಂತು ಕಿರುಚುವುದು, ಬೆಂಕಿ ಹಚ್ಚುವುದು ಹೋರಾಟವಲ್ಲ. ಅದು ಒಳ್ಳೆಯ ರೀತಿಯಲ್ಲಿರಬೇಕು. ಶಕ್ತಿಯುತವಾಗಿಯೂ ಇರಬೇಕು. ನಾವು ಮಾಡುವ ಹೋರಾಟ ಇನ್ನೊಬ್ಬರಿಗೆ ಪ್ರೇರಣೆಯಾಗುವಂತಿರಬೇಕೇ ವಿನಃ ಪ್ರಚೋದನೆ ನೀಡುವಂತಿರಬಾರದು. ಯಾರಿಗೂ ತೊಂದರೆಯಾಗದಂತೆ ಹೋರಾಟ ನಡೆಯಬೇಕು. ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎಂದರು.

ಕಿಚ್ಚನ್ನು ತಡೆದಿಟ್ಟುಕೊಂಡು ಸರಿಯಾದ ರೀತಿಯಲ್ಲಿ ಹೋರಾಟವನ್ನು ಮುನ್ನಡೆಸಬೇಕು. ನಾವು ಹಚ್ಚುವ ಹೋರಾಟದ ಕಿಚ್ಚು ಯಾರನ್ನೂ ಸುಡಬಾರದು, ಹಾನಿ ಉಂಟುಮಾಡಬಾರದು ಎಂದು ಹೇಳಿದ ಶಿವರಾಜ್‌ಕುಮಾರ್, ಸರ್ಕಾರದಿಂದ ಸರಿಯಾದ ವಾದ ಮಂಡನೆಯಾಗದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಕೇಳಿದಾಗ, ನಮಗೂ ಅದೇ ಪ್ರಶ್ನೆ ಕಾಡುತ್ತಿದೆ. ಈಗ ನಾನೊಬ್ಬ ಕಲಾವಿದ. ಜನರಿಗೆಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿದೆ. ಈ ವಿಚಾರದಲ್ಲಿ ನನಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನಾವು ಆರಿಸಿ ಕಳುಹಿಸಿರುವ ಪ್ರತಿನಿಧಿಗಳು ಇದರ ಬಗ್ಗೆ ಆಲೋಚಿಸಬೇಕು. ಮುಂದೇನು ಮಾಡಬೇಕೆಂಬ ಬಗ್ಗೆ ಅವರು ತೀರ್ಮಾನ ಕೈಗೊಳ್ಳಬೇಕು ಎಂದು ನುಡಿದರು.

ಕಾವೇರಿ ಜಲ ವಿವಾದ: ನಾಳೆ ದಿಲ್ಲಿಯಲ್ಲಿ ಕರವೇ ಬೃಹತ್ ಹೋರಾಟ: ನಾರಾಯಣಗೌಡ

ಶಿವರಾಜ್‌ಕುಮಾರ್ ರಾಜಕೀಯ ರಂಗಕ್ಕೆ ಬರುತ್ತಾರೆಯೇ ಎಂದು ಕೇಳಿದಾಗ, ನನಗೆ ಸಿನಿಮಾರಂಗ ಒಂದೇ ಸಾಕು. ಖಂಡಿತ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಘೋಸ್ಟ್ ಚಿತ್ರದ ಕುರಿತಾಗಿ ಕೇಳಿದಾಗ, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರಿಂದ ಪ್ರೋತ್ಸಾಹ, ಸಹಕಾರ ಸಿಕ್ಕರಷ್ಟೇ ಇನ್ನಷ್ಟು ಉತ್ತಮ ಚಿತ್ರಗಳನ್ನು ಮಾಡಲು ಸಾಧ್ಯ. ಕೆಜಿಎಫ್, ಕಾಂತಾರ, ವೇದ, ಚಾರ್ಲಿ ೭೭೭ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಚಿತ್ರ ಘೋಸ್ಟ್ ಆಗಿದೆ. ಹೀಗೆಯೇ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

Follow Us:
Download App:
  • android
  • ios