Asianet Suvarna News Asianet Suvarna News

Bengaluru: ಸಿಲಿಕಾನ್‌ ಸಿಟಿಯಲ್ಲಿ ಚಿರತೆಗಳು ಪ್ರತ್ಯಕ್ಷ, ಆತಂಕ

ಸಿಲಿಕಾನ್‌ ಸಿಟಿ ಜನರಿಗೆ ಚಿರತೆ ಕಾಟ ಶುರುವಾಗಿದ್ದು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಂಗೇರಿ ಹಾಗೂ ಚಿಕ್ಕಜಾಲ ಸುತ್ತಮುತ್ತ ಪ್ರತ್ಯೇಕವಾಗಿ ಎರಡು ಚಿರತೆಗಳು ಕಾಣಿಸಿಕೊಂಡಿವೆ.

Leopard Menace In Many Areas Of Bengaluru gvd
Author
First Published Dec 2, 2022, 1:00 AM IST

ಬೆಂಗಳೂರು (ಡಿ.02): ಸಿಲಿಕಾನ್‌ ಸಿಟಿ ಜನರಿಗೆ ಚಿರತೆ ಕಾಟ ಶುರುವಾಗಿದ್ದು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಂಗೇರಿ ಹಾಗೂ ಚಿಕ್ಕಜಾಲ ಸುತ್ತಮುತ್ತ ಪ್ರತ್ಯೇಕವಾಗಿ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಈ ನಡುವೆ, ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆ ಹಿಂಭಾಗದ ಗೇಟ್‌ ಬಳಿ ಗುರುವಾರ ಮುಂಜಾನೆ ಚಿರತೆ ದಾಳಿಯಾದ ಜಿಂಕೆಯ ಮೃತ ದೇಹ ಪತ್ತೆಯಾಗಿದೆ. ಇದರಿಂದ ಜನ ಭಯಭೀತಗೊಂಡಿದ್ದಾರೆ. ಈ ಎರಡು ಅರಣ್ಯ ವಿಭಾಗಗಳಿಂದ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದ್ದು, ಈಗಾಗಲೇ ಚಿರತೆಗಳನ್ನು ಸೆರೆ ಹಿಡಿಯಲು ಬೋನ್‌ ಇರಿಸಲಾಗಿದೆ. ಜತೆಗೆ ಹೆಚ್ಚಿನ ಸಿಬ್ಬಂದಿಯನ್ನು ಚಿರತೆ ಪತ್ತೆಯಾದ ಸ್ಥಳಗಳಲ್ಲಿ ಗಸ್ತಿಗೆ ನಿಯೋಜಿಸಲಾಗಿದೆ. 

ಜತೆಗೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ರಾತ್ರಿ ವೇಳೆ, ಬೆಳಗಿನ ಜಾವ ಒಂಟಿಯಾಗಿ ಓಡಾಟ ನಡೆಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಳೆದ ಎರಡು ದಿನಗಳಿಂದ ಬನಶಂಕರಿ ಆರನೇ ಹಂತದ ಓಂಕಾರ ಹಿಲ್ಸ್‌ ಬಳಿ ಚಿರತೆ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಗುರುವಾರ ಬೆಳಗ್ಗೆ ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆ ಹಿಂಭಾಗದ ಗೇಟ್‌ ಬಳಿ ತುರಹಳ್ಳಿ ಕಾಡು ರಸ್ತೆಯಲ್ಲಿ ಜಿಂಕೆ ಮೃತದೇಹ ಪತ್ತೆಯಾಗಿದೆ. ಚಿರತೆ ದಾಳಿಯಿಂದಲೇ ಜಿಂಕೆ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿಯಿಂದ ಪತ್ತೆಯಾಗಿದೆ. ಈ ಮೂಲಕ ಸಮೀಪದಲ್ಲೇ ಇರುವ ತುರಹಳ್ಳಿ ಅರಣ್ಯದಲ್ಲಿ ಚಿರತೆಗಳಿದ್ದು, ರಾತ್ರಿ ವೇಳೆ ಸುತ್ತಮುತ್ತಲ ಬಡಾವಣೆಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ.

ಚಿರತೆ ಕಾರ್ಯಾಚರಣೆ ಠುಸ್‌; ಬೃಂದಾವನ ಓಪನ್‌

ಜಿಂಕೆ ಮೃತದೇಹ ಕಾಡಿನೊಳಕ್ಕೆ: ‘ಚಿರತೆಯು ಮತ್ತೆ ಜಿಂಕೆ ತಿನ್ನಲು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಮೃತದೇಹವನ್ನು ತುರಹಳ್ಳಿ ಅರಣ್ಯ ಪ್ರದೇಶದೊಳಕ್ಕೆ ಸ್ಥಳಾಂತರಿಸಿದ್ದಾರೆ. ಜತೆಗೆ ಕಾಡು ರಸ್ತೆಯ ಸಮೀಪದ ಚಿರತೆ ಸೆರೆಹಿಡಿಯಲು ಎರಡು ಕಡೆ ಪಂಜರ (ಬೋನ್‌) ಹಾಕಿದ್ದು, ಕೆಂಗೇರಿ, ಕುಂಬಳಗೋಡು, ಆರ್‌.ಆರ್‌.ನಗರದ, ಬನಶಂಕರಿ ಆರನೇ ಹಂತದ ವಿವಿಧ ಬಡಾವಣೆಗಳಲ್ಲಿ ಮುನ್ನೆಚ್ಚರಿಕೆಯಿಂದ ಓಡಾಟ ನಡೆಸಲು ಸೂಚಿಸಲಾಗಿದೆ’ ಎಂದು ಕಗ್ಗಲೀಪುರ ವಲಯ ಅರಣ್ಯಾಧಿಕಾರಿ ಗೋವಿಂದ ರಾಜು ತಿಳಿಸಿದ್ದಾರೆ.

ಚಿಕ್ಕಜಾಲ ಬಳಿ ಚಿರತೆ: ಸಿಸಿಟಿವಿಯಲ್ಲಿ ದೃಢ: ಇನ್ನೊಂದೆಡೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಚಿಕ್ಕಜಾಲ ಸಮೀಪದ ಐಟಿಸಿ ಯುನಿಟ್‌ ಬಳಿ ಕಳೆದ ಎರಡು ದಿನಗಳಿಂದಲೂ ಚಿರತೆಗಳ ಚಲನ ವಲನ ಪತ್ತೆಯಾಗಿದೆ. ಮೀನಕುಂಟೆ ಗ್ರಾಮದಲ್ಲಿ ಬುಧವಾರ ಚಿರತೆ ಕಾಣಿಸಿಕೊಂಡಿರುವುದಾಗಿ ಕೆಲವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ಪರಿಶೀಲಿಸಿ ಖಚಿತಪಡಿಸಿ ಕೊಂಡಿದ್ದಾರೆ. ದೃಶ್ಯಾವಳಿಯಲ್ಲಿ ಚಿರತೆಯ ಓಡಾಟ ದೃಢಪಟ್ಟಿದೆ.

ಗುರುವಾರ ಐಟಿಸಿ ಕಾರ್ಖಾನೆ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಇಡೀ ದಿನ ಕಾರ್ಯಾಚರಣೆ ನಡೆಸಿದ್ದು, ಚಿರತೆಯ ಸುಳಿವೇ ಸಿಕ್ಕಿಲ್ಲ. ಐಟಿಸಿ ಸಂಸ್ಥೆಯ ಆವರಣದಲ್ಲಿ ಬೋನ್‌ ಇರಿಸಲಾಗಿದ್ದು, ಚಿರತೆಯ ಓಡಾಟದ ಮೇಲೆ ನಿಗಾ ಇರಿಸಲು ನಿರ್ಧರಿಸಲಾಗಿದೆ. ಐಟಿಸಿ ಸಂಸ್ಥೆಯ ಕಾರ್ಖಾನೆ ಸುತ್ತಮುತ್ತ ಹಲವು ಜನವಸತಿ ಪ್ರದೇಶಗಳಿವೆ. ಜೊತೆಯಲ್ಲೇ ರೆಸಾರ್ಚ್‌ಗಳೂ ಕೂಡಾ ಇವೆ. ಚಿರತೆಯ ಹಾವಳಿ ಇರುವ ಹಿನ್ನೆಲೆಯಲ್ಲಿ ಐಟಿಸಿ ಸಂಸ್ಥೆಯು ತನ್ನ ಸಿಬ್ಬಂದಿಗೆ ಕಾರ್ಖಾನೆ ಆವರಣದಲ್ಲಿ ಓಡಾಟ ನಡೆಸುವಾಗ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ. ಜತೆಗೆ ಕಾರ್ಖಾನೆ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಚಿರತೆ ಸೆರೆಗೆ ಪಂಜರದಲ್ಲಿ ನಾಯಿ: ಕೆಂಗೇರಿ, ಚಿಕ್ಕಜಾಲ ಸಮೀಪ ಚಿರತೆ ಸೆರೆಹಿಡಿಯಲು ಒಟ್ಟು ನಾಲ್ಕು ಪಂಜರಗಳನ್ನು ಅರಣ್ಯ ಇಲಾಖೆ ಇಟ್ಟಿದೆ. ಇವುಗಳಲ್ಲಿ ನಾಯಿಯನ್ನು ಇರಿಸಿದ್ದು, ಸಂಗಾತಿ ಅಥವಾ ಆಹಾರ ಹುಡುಕುತ್ತಾ ಬರುವ ಚಿರತೆಯು ಸೆರೆ ಸಿಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸಹಜ ನೈಸರ್ಗಿಕ ಪ್ರಕ್ರಿಯೆ, ಆತಂಕ ಬೇಡ; ಮುಂಜಾಗ್ರತೆ ಇರಲಿ: ಚಿರತೆಯೊಂದು ತನ್ನ ನೈಸರ್ಗಿಕ ಬಲಿ ಪ್ರಾಣಿಯಾದ ಜಿಂಕೆಯನ್ನು ಬೇಟೆಯಾಡಿದೆ. ಘಟನೆ ನಡೆದಿರುವ ಸ್ಥಳ ಅರಣ್ಯ ಪ್ರದೇಶವಾಗಿದ್ದು, ಯು.ಎಂ.ಕಾವಲ್‌, ರೋರಿಚ್‌ ಎಸ್ಟೇಟ್‌, ಟಿ.ಕೆ.ಫಾಲ್ಸ್‌, ಗೊಲ್ಲಹಳ್ಳಿಗುಡ್ಡ ಈ ಎಲ್ಲ ಪ್ರದೇಶಗಳಲ್ಲಿ ಚಿರತೆಗಳಿಗೆ ಸೂಕ್ತವಾದ ಆವಾಸ ಸ್ಥಾನವಾಗಿವೆ. ಇಲ್ಲಿ ಚಿರತೆಗಳು ನೈಸರ್ಗಿಕವಾಗಿ ಕಂಡುಬರುತ್ತವೆ. ಈ ಕಾಡುಗಳು ಮುಂದುವರೆದು ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನಕ್ಕೆ ಕೂಡ ಹೊಂದಿಕೊಂಡಿವೆ.ಹೀಗಾಗಿ, ಇಲ್ಲಿ ಚಿರತೆಗಳು ಕಂಡುಬರುವುದು ಸಹಜ. 

ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ವನ್ಯಜೀವಿ ತಜ್ಞ ಡಾ, ಸಂಜಯ್‌ ಗುಬ್ಬಿ ತಿಳಿಸಿದ್ದಾರೆ. ಕತ್ತಲಲ್ಲಿ ಕಾಡಿನಲ್ಲಿ ಅಥವಾ ಕಾಡಿನ ಅಂಚಿನಲ್ಲಿ ಒಬ್ಬರೇ ಓಡಾಡುವುದು ಅಥವಾ ಕಾಡಿನಲ್ಲಿ ಬಹಿರ್ದೆಸೆಗೆ ಹೋಗುವುದು ಮಾಡಬಾರದು. ಈ ಪ್ರದೇಶಗಳಲ್ಲಿ ರಾತ್ರಿ ವೇಳೆ ಓಡಾಡುವಾಗ ಜೊತೆಯಲ್ಲಿ ಇರುವವರೊಡನೆ ಮಾತನಾಡುತ್ತ ಅಥವಾ ಮೊಬೈಲ್‌ನಲ್ಲಿ ಸಂಗೀತ ಹಾಕಿಕೊಂಡು ಓಡಾಡಿದರೆ ಸುರಕ್ಷಿತವಾಗಿರುತ್ತದೆ. ಚಿರತೆಗಳು ಯಾರಿಗೂ ಅನಾವಶ್ಯಕವಾಗಿ ತೊಂದರೆ ಮಾಡುವುದಿಲ್ಲ. ಅವು ನಾಚಿಕೆ ಸ್ವಭಾವದ ಪ್ರಾಣಿಗಳು ಮತ್ತು ಮನುಷ್ಯರನ್ನು ಕಂಡರೆ ಹೆದರುತ್ತವೆ ಎಂದು ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

Mysuru : ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ

ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಗಸ್ತು ಹೆಚ್ಚಿಸಲಾಗಿದೆ. ಚಳಿಗಾಲವು ಚಿರತೆಗಳಿಗೆ ಸಂತಾನೋತ್ಪತ್ತಿ ಸಮಯವಾಗಿದ್ದು, ಅರಣ್ಯ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಓಡಾಟವಿರುತ್ತದೆ. ಸಾರ್ವಜನಿಕರು ಒಂಟಿಯಾಗಿ ಸಂಚರಿಸದೇ ಸುಳಿವು ಪತ್ತೆಯಾದ ಕೂಡಲೇ ಭಯಭೀತಿಗೊಳ್ಳದೇ ಅರಣ್ಯ ಇಲಾಖೆ ಗಮನಕ್ಕೆ ತರಬೇಕು.
-ಚರಣ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ದಕ್ಷಿಣ.

Follow Us:
Download App:
  • android
  • ios