ಕೆಪಿಟಿಸಿಎಲ್ ಅಕ್ರಮ: ಉತ್ತರ ಸಿದ್ಧಪಡಿಸುತ್ತಿದ್ದ ಉಪನ್ಯಾಸಕನ ಬಂಧನ
ಉಪನ್ಯಾಸಕ ಸೇರಿ ವಶದಲ್ಲಿದ್ದ ಮೂವರ ಬಂಧನ, ಬಂಧಿತರ ಸಂಖ್ಯೆ 13ಕ್ಕೆ, ಪ್ರಶ್ನೆಪತ್ರಿಕೆ ಲೀಕ್ ಮಾಡಿಸಿ ತೋಟದ ಮನೆಯಲ್ಲಿ ಉತ್ತರ ಬರೆದು ರವಾನೆ
ಬೆಳಗಾವಿ(ಆ.25): ಕೆಪಿಟಿಸಿಎಲ್ ಕಿರಿಯ ಅಭಿಯಂತರ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಮಂಗಳವಾರ ಅತಿಥಿ ಉಪನ್ಯಾಸಕ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಬುಧವಾರ ಅವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಆದೇಶ ಈರಪ್ಪ ನಾಗನೂರಿ (26), ಬೈಲಹೊಂಗಲ ತಾಲೂಕಿನ ನಾವಲಗಟ್ಟಿಗ್ರಾಮದ ಮಡಿವಾಳಪ್ಪ ಬಾಳಪ್ಪ ತೋರಣಗಟ್ಟಿ(36) ಹಾಗೂ ಬೈಲಹೊಂಗಲ ತಾಲೂಕಿನ ಹೊಸಕೋಟಿ ಗ್ರಾಮದ ಶಂಕರ ಕಲ್ಲಪ್ಪ ಉಣಕಲ್ (30) ಬಂಧಿತರು. ಆದೇಶ ನಾಗನೂರಿ ಚಿಕ್ಕೋಡಿ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಗದಗ ಮುನ್ಸಿಪಲ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಲೀಕ್ ಆದ ಪ್ರಶ್ನೆಪತ್ರಿಕೆಯನ್ನು ಹುಕ್ಕೇರಿ ತಾಲೂಕಿನ ಶಿರಹಟ್ಟಿ.ಬಿ.ಕೆ.ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಉತ್ತರಗಳನ್ನು ಸಿದ್ಧಪಡಿಸುತ್ತಿದ್ದ ಎಂಬುದು ತಿಳಿದು ಬಂದಿದೆ.
ಸ್ಮಾರ್ಟ್‌ವಾಚ್ ಬಳಸಿ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ: 9 ಜನರ ಬಂಧನ
ಇಲ್ಲಿಂದ ಉತ್ತರಗಳನ್ನು ಪಡೆದು ಮಡಿವಾಳಪ್ಪ ತೋರಣಗಟ್ಟಿಹಾಗೂ ಶಂಕರ ಉಣಕಲ್ ಎಂಬುವರು ಚಿಕ್ಕೋಡಿ ಹಾಗೂ ರಾಮದುರ್ಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಗ್ಯಾಂಗ್‌ಗೆ ಹಸ್ತಾಂತರಿಸಿದ್ದರು. ಈ ಉತ್ತರಗಳನ್ನು ಅತ್ಯಾಧುನಿಕ ಬ್ಲೂಟೂತ್ ಡಿವೈಸ್‌ಗಳ ಮೂಲಕ ಅಭ್ಯರ್ಥಿಗಳಿಗೆ ನೀಡಬೇಕಿತ್ತು. ಆದರೆ ಬ್ಲೂಟೂತ್‌ಗಳನ್ನು ಬಹುತೇಕ ಹಣಪಡೆದ ಎಲ್ಲ ಅಭ್ಯರ್ಥಿಗಳ ಕೈಗೆ ಒಪ್ಪಿಸುವುದು ವಿಳಂಬವಾದ ಕಾರಣ ಯಾರಾರಯರಿಗೆ ಬ್ಲೂಟೂತ್ ಸಿಕ್ಕಿದೆಯೋ ಅವರಿಗಷ್ಟೇ ರವಾನಿಸುವ ಕಾರ್ಯ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಅಕ್ರಮದ ಪ್ರಮುಖ ಆರೋಪಿಯಾಗಿರುವ ಸಂಜು ಭಂಡಾರಿ ಸಂಪರ್ಕದಲ್ಲಿದ್ದ ಇನ್ನಿತರ ಆರೋಪಿಗಳು ಹಾಗೂ ಅಭ್ಯರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಈ ಮೂವರ ಸುಳಿವು ಸಿಕ್ಕಿದೆ. ಬಂಧಿತರಿಂದ ಒಂದು ಕಾರು ಮತ್ತು ಅಕ್ರಮಕ್ಕೆ ಬಳಸಿದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.