ವಿಧಾನಸಭೆ [ಮಾ.20]:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ನೀಡುವ ಯೋಜನೆಯನ್ನು ಕೈಬಿಡಲು ಬಿ.ಎಸ್‌.ಯಡಿಯೂರಪ್ಪ ಸರ್ಕಾರ ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಯೋಜನೆ ಸ್ಥಗಿತಗೊಳ್ಳಲಿದೆ. ಯೋಜನೆ ಆರ್ಥಿಕವಾಗಿ ದುಬಾರಿಯಾಗಿದೆ ಎಂಬ ಕಾರಣ ನೀಡಿ ಯೋಜನೆ ಕೈಬಿಡಲಾಗುತ್ತಿದೆ.

ಪ್ರಸಕ್ತ 2019-20ನೇ ಸಾಲಿನಲ್ಲಿ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗುತ್ತದೆ. ಆದರೆ, ಮುಂಬರುವ 2020-21ನೇ ಶೈಕ್ಷಣಿಕ ಸಾಲಿನಿಂದ ಲ್ಯಾಪ್‌ಟ್ಯಾಪ್‌ ವಿತರಣೆ ಯೋಜನೆಯನ್ನು ಕೈ ಬಿಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಖಾತೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ತಿಳಿಸಿದ್ದಾರೆ.

ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಹಾಲಪ್ಪ ಆಚಾರ್‌ ಪ್ರಶ್ನೆಗೆ ಉತ್ತರ ನೀಡಿದ ಅವರು, ‘2017-18ನೇ ಸಾಲಿನಲ್ಲಿ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಲ್ಯಾಪ್‌ಟಾಪ್‌ ನೀಡುವ ಯೋಜನೆಯನ್ನು ಜಾರಿಗೆ ತಂದರು. ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರವು ಯೋಜನೆಯನ್ನು ಮುಂದುವರಿಸಿತು. ಆದರೆ ಪ್ರಸ್ತುತ ಆರ್ಥಿಕವಾಗಿ ದುಬಾರಿಯಾಗಿದೆ. ಇದಕ್ಕಾಗಿ 311 ಕೋಟಿ ರು. ವೆಚ್ಚವಾಗುತ್ತಿದೆ. ರಾಜ್ಯದಲ್ಲಿರುವ 400ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂಲಸೌಲಭ್ಯಗಳಿಲ್ಲ. ಸರ್ಕಾರಿ ಕಾಲೇಜುಗಳು ನ್ಯಾಕ್‌ ಸಮಿತಿಯ ಮಾನ್ಯತೆ ಪಡೆದಿಲ್ಲ. ಹೀಗಿರುವಾಗ 311 ಕೋಟಿ ರು. ದುಬಾರಿ ವೆಚ್ಚ ಮಾಡಿ ಲ್ಯಾಪ್‌ಟಾಪ್‌ ನೀಡುವುದು ಚಿಂತಿಸಬೇಕಾದ ವಿಚಾರವಾಗಿದೆ’ ಎಂದು ಹೇಳಿದರು.

ಗಮನಿಸಿ: ಕೆಪಿಎಸ್‌ಸಿ ಪರೀಕ್ಷೆ ಮುಂದೂಡಿಕೆ..

‘ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲ ಜಾತಿಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗುತ್ತಿದೆ. ಲ್ಯಾಪ್‌ಟಾಪ್‌ಗಳನ್ನು ನೀಡಲು 96 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಪಟ್ಟಿಯನ್ನು ಪರಿಷ್ಕರಿಸಿದ ತರುವಾಯ 1.9 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲು ನಿರ್ಧರಿಸಲಾಯಿತು. ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಕೌಟುಂಬಿಕ ವಾರ್ಷಿಕ ಆದಾಯ 2.5 ಲಕ್ಷ ರು.ಗಳಿಗಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆಗೆ ಕ್ರಮ ವಹಿಸಲಾಗಿದೆ’ ಎಂದರು.

ಎರಡನೇ ಮತ್ತು ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.