ಕರ್ನಾಟಕದ 7 ಜಿಲ್ಲೆಗಳಲ್ಲಿ ನೆರೆಯಬ್ಬರ: ಮಲೆನಾಡಿನಲ್ಲಿ ಭೂಕುಸಿತ

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉಡುಪಿ, ದ.ಕನ್ನಡ, ಉ.ಕನ್ನಡ, ಬೆಳಗಾವಿಯಲ್ಲಿ ಪ್ರವಾಹ, ಪಶ್ಚಿಮ ಘಟ್ಟದ ಹಲವೆಡೆ ಗುಡ್ಡ ಕುಸಿತ: ಸಂಚಾರ ಬಂದ್‌, 4 ಜಿಲ್ಲೆಗಳಲ್ಲಿ ಇಂದೂ ಶಾಲೆಗಳಿಗೆ ರಜೆ, ನೇತ್ರಾವತಿ, ಕಾವೇರಿ, ಅಘನಾಶಿನಿ, ವರದಾ ನದಿಗಳಲ್ಲಿ ನೆರೆ, ಮಳೆ ಅನಾಹುತಕ್ಕೆ ಐದು ಮಂದಿ ಬಲಿ. 

Landslides in Malenadu Due to Heavy Rain in Karnataka grg

ಬೆಂಗಳೂರು(ಜು.25):  ರಾಜ್ಯಾದ್ಯಂತ ಕಳೆದೊಂದು ವಾರದಿಂದ ಮುಂದುವರಿದಿರುವ ಮಳೆಯಬ್ಬರದಿಂದಾಗಿ ಕರಾವಳಿ, ಮಲೆನಾಡು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಪ್ರಮುಖ ನದಿಗಳು ಉಕ್ಕೇರಿ ಪ್ರವಾಹ ಕಾಣಿಸಿಕೊಂಡಿದ್ದರೆ, ಮೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಪ್ರವಾಹದಿಂದಾಗಿ ಕೊಡಗಿನ ಚೆರಿಯಪರಂಬು, ಕಲ್ಲುಮೊಟ್ಟೆ, ದಕ್ಷಿಣ ಕನ್ನಡದ ಮೊಗೇರ ಕುದ್ರು ಪ್ರದೇಶಗಳು ದ್ವೀಪದಂತಾಗಿದ್ದು, ರಾಜ್ಯದ ಸೇತುವೆ, ರಸ್ತೆಗಳು ಜಲಾವೃತವಾಗಿ 10ಕ್ಕೂ ಹೆಚ್ಚು ಕಡೆ ಸಂಚಾರ​-ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿ, ಸಕಲೇಶಪುರದ ಬಿಸಿಲೆಘಾಟ್‌ ಸೇರಿ ಕರಾವಳಿ ಮತ್ತು ಮಲೆನಾಡಿನ ಏಳಕ್ಕೂ ಹೆಚ್ಚು ಕಡೆæ ಗುಡ್ಡಕುಸಿತ ಸಂಭವಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಹಾಸನದ ಐದು ತಾಲೂಕುಗಳಲ್ಲಿ ಮಾತ್ರ ರಜೆ ನೀಡಲಾಗಿದೆ.

ಕೊಡಗು: ಭಾರೀ ಮಳೆಗೆ ಜಲದಿಗ್ಭಂದನ, ಪ್ರಾಣ ಒತ್ತೆಯಿಟ್ಟು ತೆಪ್ಪದಲ್ಲಿ ಜನರ ಸಾಗಿಸುವ ಸ್ಥಳೀಯ ಯುವಕರು

250ಕ್ಕೂ ಹೆಚ್ಚು ಮಂದಿ ಸ್ಥಳಾಂತರ:

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದರೆ, ದಾವಣಗೆರೆ, ಹಾವೇರಿ, ಧಾರವಾಡ, ಬಾಗಲಕೋಟೆಯಲ್ಲಿ ಸೋಮವಾರ ಪ್ರವಾಹದ ಆತಂಕ ಶುರುವಾಗಿದೆ. ಈ ಭಾಗದ ಪ್ರಮುಖ ನದಿಗಳಾದ ಕಾವೇರಿ, ಕುಮಾರಧಾರಾ, ನೇತ್ರಾವತಿ, ಅಘನಾಶಿನಿ, ಸೌಪರ್ಣಿಕಾ, ತುಂಗಾ, ಭದ್ರಾ, ವರದಾ, ಗಂಗಾವತಿ, ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ತುಂಬಿ ಹರಿಯುತ್ತಿವೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಬೆಳಗಾವಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ.

ಕೊಡಗಿನಲ್ಲಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ಉಕ್ಕೇರಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕಾವೇರಿ ಪ್ರವಾಹದಿಂದಾಗಿ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ನೀರಿನಿಂದ ಸಂಪೂರ್ಣ ಆವೃತವಾಗಿದೆæ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೆರಿಯಪರಂಬು, ಕಲ್ಲುಮೊಟ್ಟೆಗ್ರಾಮ ಜಲಾವೃತವಾಗಿದ್ದು, ಜನ ಸಂಚಾರಕ್ಕಾಗಿ ತೆಪ್ಪ ಬಳಸುವಂತಾಗಿದೆ. ಸಮೀಪದ ಚೆರಿಯಪರಂಬು ಗ್ರಾಮ ಕೂಡ ನಡುಗಡ್ಡೆಯಂತಾಗಿದೆ. ಉತ್ತರ ಕನ್ನಡದಲ್ಲಿ ಅಘನಾಶಿನಿ, ಗಂಗಾವಳಿ ನದಿ ಉಕ್ಕಿಹರಿಯುತ್ತಿದ್ದು, 164 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ರವಾನಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿ ಉಕ್ಕೇರಿದ ಕಾರಣ ಪಾಣೆ ಮಂಗಳೂರು ಮತ್ತು ಕಡಬದಲ್ಲಿ 50ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಮೂರನೇ ದಿನವೂ ಜಲಾವೃತ: 

ಕುಮಾರಧಾರಾ ಪ್ರವಾಹದಿಂದಾಗಿ ಮೂರನೇ ದಿನವಾದ ಸೋಮವಾರವೂ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ಸಂಪರ್ಕ ಕಡಿತಗೊಂಡಿತ್ತು. ಅದೇ ರೀತಿ ಸುಬ್ರಹ್ಮಣ್ಯದ ಸ್ನಾನಘಟ್ಟವೂ ಸಂಪೂರ್ಣ ಮುಳುಗೆಯಾಗಿತ್ತು. ಇನ್ನು ವರದಾ ಮತ್ತು ದಂಡಾವತಿ ನದಿ ಪ್ರವಾಹದಿಂದಾಗಿ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ 500ರಿಂದ 600 ಎಕರೆ ಜಮೀನು ಜಲಾವೃತವಾಗಿದೆ. ಪುರ ಗ್ರಾಮ ವರದಾ ನದಿಯಿಂದಾಗಿ ನಡುಗಡ್ಡೆಯಂತಾಗಿದೆ. ಚಿಕ್ಕಮಗಳೂರಿನಲ್ಲಿ ಭದ್ರಾ ನದಿ ಅಬ್ಬರ ಕಡಿಮೆಯಾಗಿದ್ದರೂ ತುಂಗಾ ನದಿ ಪ್ರವಾಹ ಮಾತ್ರ ಯಥಾರೀತಿ ಮುಂದುವರಿದಿದೆ.

ಇನ್ನು ಮಹಾರಾಷ್ಟ್ರ ಮತ್ತು ಪಶ್ಚಿಮಘಟ್ಟಭಾಗದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಅನೇಕ ಕಡೆ ಇನ್ನೂ ಪ್ರವಾಹ ಸ್ಥಿತಿ ಇದೆ. ದೂದ್‌ಗಂಗಾ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 8ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕೃಷ್ಣಾ ನದಿಗೆ 1.14 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಕೆಲವೆಡೆ ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಬಳ್ಳಾರಿ ನಾಲೆ ಉಕ್ಕಿ ಹರಿದಿದ್ದರಿಂದ ಬೆಳಗಾವಿ ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಧಾರವಾಡ ಮತ್ತು ಹಾವೇರಿಯಲ್ಲಿ ಪ್ರವಾಹದ ಆತಂಕವಿದ್ದರೂ ಸೋಮವಾರ ಮಳೆ ಇಳಿಮುಖವಾಗಿದ್ದರಿಂದ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ನಿರಂತರ ಮಳೆಗೆ ಕುಸಿದು ಬಿದ್ದ ಮನೆ; ಸುರಿವ ಮಳೆಯಲ್ಲೇ ಹೊರಗೆ ನಿಂತ ಕುಟುಂಬ!

ಗುಡ್ಡ ಕುಸಿತ: 

ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಸಂಪರ್ಕಿಸುವ ಬಿಸಿಲೆಘಾಟ್‌ನಲ್ಲಿ ಅಲ್ಲಲ್ಲಿ ಗುಡ್ಡಕುಸಿದಿದ್ದು, ಚಿಕ್ಕಮಗಳೂರಿನಲ್ಲಿ ಚಾರ್ಮಾಡಿ ಘಾಟ್‌ನಲ್ಲೂ ಆಲೇಖಾನ್‌-ಬಿದಿರುತಳ ರಸ್ತೆ ಮಧ್ಯೆ ಗುಡ್ಡಕುಸಿದಿದೆ. ಅದೇ ರೀತಿ ಕೊಡಗಿನಲ್ಲಿ ಮಡಿಕೇರಿಯ ಮದೆನಾಡು ವ್ಯಾಪ್ತಿಯ ಹೆದ್ದಾರಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಸ್ತೆಯಲ್ಲಿ ರಾಗಿಹೊಸಳ್ಳಿ ಬಳಿ ಸೇರಿದಂತೆ ಏಳಕ್ಕೂ ಹೆಚ್ಚು ಕಡೆ ಗುಡ್ಡಕುಸಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

5 ಮಂದಿ ಬಲಿ:

ಮಳೆ ಸಂಬಂಧಿ ಅನಾಹುತಕ್ಕೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳದಲ್ಲಿ ಮನೆ ಕುಸಿದು ಬಸಮ್ಮ(35), ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ಳಾಡಿಹರ್ಕಾಡಿಯಲ್ಲಿ ಗೋಕುಲದಾಸ್‌ ಪ್ರಭು (53) ಆಕಸ್ಮಿಕವಾಗಿ ಬಳ್ಳಕ್ಕೆ ಬಿದ್ದು, ಬೈಂದೂರು ತಾಲೂಕಿನ ಕೊಲ್ಲೂರು ಬಳಿಯ ಅರಶಿನಗುಂಡಿ ಜಲಪಾತಕ್ಕೆ ಬಿದ್ದು ಭದ್ರಾವತಿಯ ಶರತ್‌ ಕುಮಾರ್‌ (23), ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಕೆರೆಯಲ್ಲಿ ಮುಳುಗಿ ಮಣಿಕಂಠ ಮಂಜುನಾಥ ನಾಯ್ಕ (17), ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮಾಕನೂರು ಗ್ರಾಮದ ಬಳಿ ನದಿಯಲ್ಲಿ ಮುಳುಗಿ ಮಂಜುನಾಥ ಬಸವರಾಜ ಆನಂದಿ (27) ಮೃತಪಟ್ಟಿದ್ದಾರೆ.

Latest Videos
Follow Us:
Download App:
  • android
  • ios