ಬೆಂಗಳೂರು(ಏ.25): ನಗರದಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ 30ಕ್ಕೂ ಹೆಚ್ಚು ಮರ ಧರೆಗುರುಳಿದ್ದು, ಲಗ್ಗೆರೆಯ ಲಕ್ಷ್ಮಿದೇವಿನಗರದಲ್ಲಿ ರಸ್ತೆ ಹಾಗೂ ತಡೆಗೋಡೆ ಕುಸಿದ ಪರಿಣಾಮ ಸ್ಲಂ ಬೋರ್ಡ್‌ ಅಪಾರ್ಟ್‌ಮೆಂಟ್‌ನ 2 ಬ್ಲಾಕ್‌ಗಳು ನೆಲಕ್ಕುರುಳುವ ಭೀತಿ ಉಂಟಾಗಿದೆ.

ಭಾರೀ ಮಳೆಯಿಂದಾಗಿ ಲಗ್ಗೆರೆ ವಾರ್ಡ್‌ನ ಲಕ್ಷ್ಮೇದೇವಿನಗರದಲ್ಲಿ ಸ್ಲಂ ಬೋರ್ಡ್‌ ರಸ್ತೆ ಸಂಪೂರ್ಣವಾಗಿ ಕುಸಿದಿದೆ. ರಸ್ತೆಯಲ್ಲಿ ನಿಲ್ಲಿಸಲಾಗಿದ್ದ 12 ಕಾರು, 3 ಆಟೋ ಹಾಗೂ 4 ಬೈಕ್‌ಗಳು ಹಳ್ಳಕ್ಕೆ ಬಿದ್ದಿವೆ. ರಸ್ತೆ ಕುಸಿದ ಪರಿಣಾಮ ಸ್ಲಂ ಬೋರ್ಡ್‌ ಅಪಾರ್ಟ್‌ಮೆಂಟ್‌ ತಡೆಗೋಡೆ ಕುಸಿದು ಬಿದ್ದಿದ್ದು, ತಲಾ 16 ಮನೆ ಇರುವ ಜಿ+ 3 ಮಹಡಿಯ ಎರಡು ಬ್ಲಾಕ್‌ ಕುಸಿಯುವ ಆತಂಕ ಉಂಟಾಗಿದೆ.

ಅಕಾಲಿಕ ಮಳೆ: ಧರೆಗುರುಳಿದ ಬಾಳೆ, ಕಂಗಾಲಾದ ರೈತ..!

32 ಕುಟುಂಬಗಳ ಸ್ಥಳಾಂತರ:

ಮುನ್ನೆಚ್ಚರಿಕೆ ಕ್ರಮವಾಗಿ ಅಪಾರ್ಟ್‌ಮೆಂಟ್‌ನ ಎರಡು ಬ್ಲಾಕ್‌ನಲ್ಲಿರುವ 32 ಕುಟುಂಬಗಳನ್ನು ಬಿಬಿಎಂಪಿ ಸಮುದಾಯ ಭವನಗಳಿಗೆ ಸ್ಥಳಾಂತರ ಮಾಡಲಾಗಿದೆ. ಮತ್ತೆ ಮಳೆ ಬಂದರೆ ಇನ್ನಷ್ಟುಅನಾಹುತ ಉಂಟಾಗುವ ಸಾಧ್ಯತೆ ಇರುವುದರಿಂದ ಮಳೆ ನೀರು ಹರಿದು ಹೋಗಲು ತಾತ್ಕಾಲಿಕ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಲಕ್ಷ್ಮಿದೇವಿನಗರ ವಾರ್ಡ್‌ನ ಪಾಲಿಕೆ ಸದಸ್ಯ ವೇಲು ನಾಯಕರ್‌ ಮಾಹಿತಿ ನೀಡಿದ್ದಾರೆ.

ಅವೈಜ್ಞಾನಿಕ ಕಾಮಗಾರಿ:

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ರಸ್ತೆ ನಿರ್ಮಾಣದ ಯೋಜನೆ ಅವೈಜ್ಞಾನಿಕವಾಗಿರುವುದರಿಂದ ರಸ್ತೆ ಕುಸಿದಿದೆ. ಸ್ಲಂ ಬೋರ್ಡ್‌ನ ಕಟ್ಟಡ ಕಾಪಾಡಲು ತಜ್ಞರು ಹಾಗೂ ಸ್ಲಂ ಬೋರ್ಡ್‌ ಆಯುಕ್ತರೊಂದಿಗೂ ಚರ್ಚಿಸುವುದಾಗಿ ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ, ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ಅನೇಕರು ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳಕ್ಕೆ ಬಾರದ ಲಗ್ಗೆರೆ ಕಾರ್ಪೊರೇಟರ್‌:

ಲಗ್ಗೆರೆ ವಾರ್ಡ್‌ನಲ್ಲಿ ರಸ್ತೆ ಕುಸಿತದಿಂದ ಹತ್ತಾರು ವಾಹನಗಳು ಹಳ್ಳಕ್ಕೆ ಬಿದ್ದು, ಸ್ಲಂ ಬೋರ್ಡ್‌ ಅಪಾರ್ಟ್‌ಮೆಂಟ್‌ಎರಡು ಬ್ಲಾಕ್‌ ಅಪಾಯದ ಪರಿಸ್ಥಿತಿಯಲ್ಲಿ ಇದ್ದರೂ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಆಗಮಿಸದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

30ಕ್ಕೂ ಅಧಿಕ ಮರಗಳು ಧರೆಗೆ

ಶುಕ್ರವಾರ ಬೆಳಗ್ಗೆ ನಗರದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ ಬಸವೇಶ್ವರ ನಗರ, ರಾಜಾಜಿನಗರ, ಮಲ್ಲೇಶ್ವರ, ಮೂಡಲಪಾಳ್ಯ, ನಂದಿನಿ ಲೇಔಟ್‌, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್‌, ಜಯನಗರ, ಕೊಟ್ಟಿಗೆಹಳ್ಳಿ, ಇಂದಿರಾನಗರ ಸೇರಿದಂತೆ ವಿವಿಧ ಕಡೆ ಸುಮಾರು 30ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ. ಇಂದಿರಾ ನಗರದಲ್ಲಿ ಬೃಹತ್‌ ಗಾತ್ರದ ಮರ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು, ಬೇರೆ ಯಾವುದೇ ಹಾನಿಯಾಗಿಲ್ಲ, ಗಾಂಧಿನಗರದ ಕಿನೋ ಚಿತ್ರಮಂದಿರ ಬಳಿ ಇರುವ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿತ್ತು.

ಧಾರಾಕಾರ ಮಳೆಯಿಂದ ಬಿರುಕು ಬಿಟ್ಟ ರಸ್ತೆ; ಕಾರು, ಆಟೋ ಜಖಂ

53 ಮಿ.ಮೀ ಮಳೆ:

ಶುಕ್ರವಾರ ಬೆಳಗ್ಗೆ 8.30ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ನಗರದಲ್ಲಿ 53 ಮಿ.ಮೀ ಮಳೆಯಾಗಿದೆ. ಯಶವಂತಪುರ, ರಾಧಾಕೃಷ್ಣ ದೇವಸ್ಥಾನ ವಾರ್ಡ್‌, ಬ್ಯಾಟರಾಯನಪುರ, ವಿ.ನಾಗೇನಹಳ್ಳಿ, ಪಶ್ಚಿಮ ಮನೋರಾಯನಪಾಳ್ಯ, ಶೆಟ್ಟಿಹಳ್ಳಿ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ಒಟ್ಟು 11 ಪ್ರದೇಶದಲ್ಲಿ 35.6 ಮಿ.ಮೀ ನಿಂದ 64.5 ಮಿ.ಮೀ ವರೆಗೆ ಮಳೆಯಾಗಿದೆ. ನಗರದ ಉಳಿದ ಕಡೆ 7.6 ಮಿ.ಮೀ ನಿಂದ 35.5 ಮಿ.ಮೀ ವರೆಗೆ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.