ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಮಾಸ್ಟರ್‌ ಪ್ಲಾನ್ ಏರಿಯಾ (ಸಮಗ್ರ ಯೋಜನಾ ಪ್ರದೇಶ) ಪ್ರಕಾರ ಭೂ ಬಳಕೆ ಮಾಡಿಕೊಳ್ಳಲು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು : ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಮಾಸ್ಟರ್‌ ಪ್ಲಾನ್ ಏರಿಯಾ (ಸಮಗ್ರ ಯೋಜನಾ ಪ್ರದೇಶ) ಪ್ರಕಾರ ಭೂ ಬಳಕೆ ಮಾಡಿಕೊಳ್ಳಲು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, ಸಂಬಂಧಪಟ್ಟ ಭೂಮಿಯನ್ನು ಭೂ ಪರಿವರ್ತನೆ ಇಲ್ಲದೆಯೇ ಮಾಸ್ಟರ್‌ ಪ್ಲಾನ್‌ನಲ್ಲಿ ತಿಳಿಸಿದಂತೆ ಉಪಯೋಗ ಮಾಡಿಕೊಳ್ಳಲು ನೇರವಾಗಿ ನಕ್ಷೆ ಮಂಜೂರಾತಿಗೆ (ಪ್ಲಾನ್‌ ಅಪ್ರೂವಲ್‌) ಸಂಬಂಧಪಟ್ಟ ಯೋಜನಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಇನ್ನು ⁠ಮಾಸ್ಟರ್ ಪ್ಲಾನ್ ಹೊರಗಿನ ಪ್ರದೇಶದಲ್ಲೂ 30 ದಿನಗಳಲ್ಲಿ ಭೂ ಪರಿವರ್ತನೆ ಕುರಿತು ನಿರ್ಣಯ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಈವರೆಗೆ ಏನಿತ್ತು?:

ಈವರೆಗೆ ಯಾವುದೇ ಕೃಷಿ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಬೇಕಾದರೆ ಜಿಲ್ಲಾಧಿಕಾರಿಗಳಿಂದ ಭೂ ಬಳಕೆ ಪರಿವರ್ತನೆ ಮಾಡಿಸಿಕೊಳ್ಳಬೇಕಾಗಿತ್ತು. ಬಳಿಕ ಯೋಜನಾ ಪ್ರಾಧಿಕಾರಿಗಳಿಂದ ನಕ್ಷೆ ಮಂಜೂರಾತಿ ಪಡೆಯಬೇಕಾಗಿತ್ತು.

ಆದರೆ, ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 95, ಕಲಂ 47ರಲ್ಲಿ 9 ತಿದ್ದುಪಡಿ ಹಾಗೂ ⁠ಕರ್ನಾಟಕ ಭೂ ಕಂದಾಯ ನಿಯಮ 1966ಕ್ಕೆ ಸಮಗ್ರ ತಿದ್ದುಪಡಿ ತಂದಿದೆ.

ಈ ಬಗ್ಗೆ ಮಂಗಳವಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಇದರ ಪ್ರಕಾರ ಭೂಮಿಯನ್ನು ಮಾಸ್ಟರ್‌ ಪ್ಲಾನ್‌ ವ್ಯಾಪ್ತಿ (ಯೋಜನಾ ಪ್ರದೇಶ) ಹಾಗೂ ಮಾಸ್ಟರ್ ಪ್ಲಾನ್‌ ವ್ಯಾಪ್ತಿಯ ಹೊರಗಿನ ಪ್ರದೇಶ ಎಂದು ಎರಡು ಭಾಗಗಳಾಗಿ ಪ್ರತ್ಯೇಕಿಸಿದೆ. ಮಾಸ್ಟರ್‌ ಪ್ಲಾನ್‌ ವ್ಯಾಪ್ತಿಯಲ್ಲಿರುವ ಜಮೀನು ಮಾಸ್ಟರ್‌ ಪ್ಲಾನ್‌ನಲ್ಲಿ ನಿಗದಿ ಮಾಡಿರುವ ಬಳಕೆಗೆ ಉಪಯೋಗ ಮಾಡಲು ಪ್ರತ್ಯೇಕವಾಗಿ ಭೂ ಪರಿವರ್ತನೆ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

30 ದಿನದಲ್ಲಿ ಭೂ ಪರಿವರ್ತನೆ:

ಇನ್ನು ಮಾಸ್ಟರ್‌ ಪ್ಲಾನ್‌ ವ್ಯಾಪ್ತಿಯ ಹೊರಗಿನ ಜಮೀನನ್ನು ಭೂ ಪರಿವರ್ತನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ⁠ಜಿಲ್ಲಾಧಿಕಾರಿಗಳು 30 ದಿನಗಳ ಒಳಗಾಗಿ ಸಂಬಂಧಿತ ಯಾವುದೇ ಇಲಾಖೆಯ ಜೊತೆಗೆ ಚರ್ಚಿಸಿ ಪರಿವರ್ತನೆಗೆ ಅವಕಾಶ ನೀಡಬಹುದು ಅಥವಾ ತಿರಸ್ಕರಿಸಬಹುದು. ⁠30 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಯಾವ ನಿರ್ಧಾರವೂ ತೆಗೆದುಕೊಳ್ಳದಿದ್ದಲ್ಲಿ, ಸ್ವಯಂ ಚಾಲಿತವಾಗಿ ಭೂ ಪರಿವರ್ತನೆಗೆ ಅವಕಾಶ ಲಭ್ಯವಾಗುತ್ತದೆ.

⁠ಭೂ ಪರಿವರ್ತನೆಯನ್ನು ಸರಳೀಕೃತಗೊಳಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಹಾಗೂ ಬಂಡವಾಳ ಹೂಡಿಕೆಗೆ ಹೂಡಿಕೆದಾರರ ಸ್ನೇಹಿಯಾಗಿ ಪರಿವರ್ತಿಸಲು ತಿದ್ದುಪಡಿ ಮಾಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಏನೆಲ್ಲಾ ಸರಳೀಕರಣ?

⁠ಸಣ್ಣ ಕೈಗಾರಿಕೆಗಳು ಎರಡು ಎಕರೆ ವರೆಗೆ ಕೈಗಾರಿಕಾಉದ್ದೇಶಕ್ಕಾಗಿ ಭೂ ಪರಿವರ್ತನೆ ಅಗತ್ಯ ಇಲ್ಲ. ಜತೆಗೆ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ (ಸೋಲಾರ್, ಪವನ ವಿದ್ಯುತ್‌) ಭೂಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ಇಂಧನ ಇಲಾಖೆಯ ಅನುಮತಿ ಅಗತ್ಯ.

 ಕಂದಾಯ ನ್ಯಾಯಾಲಯದಲ್ಲಿ ಆನ್ಲೈನ್‌ ಹಾಜರಿಗೆ ಅವಕಾಶ

ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕೆಂಬ ಕುರಿತು ಸಹ ನಿಯಮ ರೂಪಿಸಿದ್ದು, ⁠ಕಂದಾಯ ನ್ಯಾಯಾಲಯಗಳನ್ನು ಆನ್ಲೈನ್‌ ಮುಖಾಂತರ ನಡೆಸಲು ಕಾನೂನು ತರಲಾಗಿದೆ.

ತನ್ಮೂಲಕ ವಾದಿ ಹಾಗೂ ಪ್ರತಿವಾದಿಗಳು ಕಚೇರಿಗಳಿಗೆ ಸುತ್ತುವುದರ ಬದಲಿಗೆ ಆನ್‌ಲೈನ್ ಮುಖಾಂತರವೇ ನ್ಯಾಯಾಲಯ ಕಲಾಪಗಳಿಗೆ ಭಾಗವಹಿಸುವ ಸುಲಭ ಅವಕಾಶ ಕಲ್ಪಿಸಿರುವುದಾಗಿ ಕಂದಾಯ ಇಲಾಖೆ ತಿಳಿಸಿದೆ.

ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಈಹಿಂದೆ ಯಾವುದೇ ಸ್ಪಷ್ಟ ನಿಯಮ ಇರಲಿಲ್ಲ. ಪರಿಣಾಮ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನುಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಸ್ಪಷ್ಟ ನಿಯಮ ರೂಪಿಸಿ ಕಾನೂನು ಮೀರಿ ಆದೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದುಬಂದಿದೆ.

ಸರಳತೆಯತ್ತ ನಡೆ

ಭೂ ಪರಿವರ್ತನೆ ಈಗ ಸರಳವಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿ.23ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಭಾರತ ದೇಶ ಪ್ರಸ್ತುತ ನವೀಕರಿಸಬಹುದಾದ ಇಂಧನದ ಕಡೆ ಹೆಜ್ಜೆ ಇಡುತ್ತಿದೆ. ಹೀಗಾಗಿ ಇದಕ್ಕೂ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಭೂಪರಿವರ್ತನೆ ಸರಳ ಹೇಗೆ?

- ಈವರೆಗೆ ಕೃಷಿ ಭೂಮಿಯನ್ನು ವಾಣಿಜ್ಯ/ವಸತಿ ಉದ್ದೇಶಕ್ಕೆ ಬಳಸಲು ಕಠಿಣ ನಿಯಮ ಇತ್ತು

- ಮೊದಲು ಜಿಲ್ಲಾಧಿಕಾರಿಗಳಿಂದ ‘ಭೂಬಳಕೆ ಪರಿವರ್ತನೆ’ ಮಾಡಿಸಿಕೊಳ್ಳಬೇಕಾಗಿತ್ತು.

- ಬಳಿಕ ಯೋಜನಾ ಪ್ರಾಧಿಕಾರಿಗಳಿಂದ ನಕ್ಷೆಯ ಮಂಜೂರಾತಿ ಪಡೆಯಬೇಕಾಗಿತ್ತು.

- ಆದರೆ ಇದೀಗ ⁠ಕರ್ನಾಟಕ ಭೂ ಕಂದಾಯ ನಿಯಮ 1966ಕ್ಕೆ ಸಮಗ್ರ ತಿದ್ದುಪಡಿ

- ಇನ್ನು ಭೂಬಳಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆ ಅಗತ್ಯವಿಲ್ಲ

- ನೇರವಾಗಿ ಪ್ಲಾನ್‌ ಅಪ್ರೂವಲ್‌ಗೆ ಸಂಬಂಧಿಸಿದ ಯೋಜನಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ

- ಮಾಸ್ಟರ್‌ ಪ್ಲಾನ್‌ ಹೊರಗಿದ್ರೆ 30 ದಿನದಲ್ಲಿ ಭೂಪರಿವರ್ತನೆ ಬಗ್ಗೆ ಡೀಸಿ ನಿರ್ಧರಿಸಬೇಕು

- 30 ದಿನದಲ್ಲಿ ನಿರ್ಧರಿಸದಿದ್ದರೆ ಸ್ವಯಂಚಾಲಿತವಾಗಿ ಭೂ ಪರಿವರ್ತನೆ ಅವಕಾಶ