Asianet Suvarna News Asianet Suvarna News

ಯಾರು ಬೇಕಾದರೂ ಕೃಷಿ ಭೂಮಿ ಖರೀದಿಗೆ ಅಸ್ತು..!

ಕೃಷಿ ಜಮೀನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಿ ಯಾರು ಬೇಕಾದರೂ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿ ಕಾರ್ಯ ಕೈಗೊಳ್ಳಬಹುದಾದ ಹೊಸ ಕಾನೂನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Land Acquisition Act No Restriction Karnataka Cabinet Meeting finalise Whoever Can purchase Agriculture Land
Author
Bengaluru, First Published Jun 12, 2020, 7:24 AM IST

ಬೆಂಗಳೂರು(ಜೂ.12): ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆ ಕೈಗೊಂಡಿದ್ದು, ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅನುವು ಮಾಡಿಕೊಡಲಾಗಿದೆ.

ಕೃಷಿ ಜಮೀನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಿ ಯಾರು ಬೇಕಾದರೂ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿ ಕಾರ್ಯ ಕೈಗೊಳ್ಳಬಹುದಾದ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ. ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಭೂ ಸುಧಾರಣೆ ಕಾಯ್ದೆಯಡಿ ಜಾರಿಯಲ್ಲಿರುವ 63ಎ, 79ಎ, ಬಿ ಸೆಕ್ಷನ್‌ಗಳನ್ನು ರದ್ದುಗೊಳಿಸಿ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗುವುದು. ಇತ್ತೀಚೆಗೆ ಐಟಿ-ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರು ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ರಾಜ್ಯದಲ್ಲಿನ ನಿರ್ಬಂಧದಿಂದಾಗಿ ನೆರೆ ರಾಜ್ಯದಲ್ಲಿ ಭೂಮಿ ಖರೀದಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿಯೇ ಭೂಮಿ ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

ಪ್ರಸ್ತುತ ಕಾಯ್ದೆಯಿಂದ ಜಮೀನು ಖರೀದಿಸುವವರಿಗೆ ಕಿರಿಕಿರಿಯಾಗುತ್ತಿತ್ತು. ಅಲ್ಲದೆ, ರೈತರಿಗೂ ಮಾನಸಿಕ ಹಿಂಸೆಯಾಗಿತ್ತು. ಇದನ್ನು ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಇನ್ನು ಮುಂದೆ ಒಂದೇ ಕುಟುಂಬದಲ್ಲಿ ಐವರು ಸದಸ್ಯರು ಇದ್ದರೆ 108 ಎಕರೆಗಿಂತ ಹೆಚ್ಚು ಜಮೀನು ಖರೀದಿಸುವಂತಿಲ್ಲ. 79 ಎ, ಬಿನಲ್ಲಿ ಅನಗತ್ಯವಾಗಿ 83,174 ಪ್ರಕರಣಗಳು ದಾಖಲಾಗಿದ್ದವು. ಶೇ.1ರಷ್ಟುಸಹ ಸರ್ಕಾರದಿಂದ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.

ಈವರೆಗೆ ಏನಿತ್ತು?

ಭೂಸುಧಾರಣೆ ಕಾಯ್ದೆ ಪ್ರಕಾರ ಕೃಷಿಕರು ಮಾತ್ರ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸಲು ಸಾಧ್ಯವಿತ್ತು. ಕೃಷಿಕರಲ್ಲದವರು ಕೃಷಿ ಮಾಡಲು ಆಸಕ್ತಿ ಹೊಂದಿದ್ದರೂ ಕೃಷಿ ಭೂಮಿ ಖರೀದಿಸಲು ಕಾಯ್ದೆಯಲ್ಲಿ ಅವಕಾಶವಿರಲಿಲ್ಲ.

ಮುಂದೆ ಏನು?

ಕೃಷಿಕರಲ್ಲದವರೂ ಕೃಷಿ ಭೂಮಿಯನ್ನು ಖರೀದಿ ಮಾಡಬಹುದು ಎಂದು ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಲು ನಿರ್ಧರಿಸಿದೆ. ಇದರಿಂದಾಗಿ ಉದ್ಯಮಿಗಳು ಹಾಗೂ ಕೃಷಿಕರಲ್ಲದ ಬೇರೆ ಬೇರೆ ವರ್ಗದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಗಲಿದೆ.

ಏಕೆ ತಿದ್ದುಪಡಿ?

ಕೃಷಿ ಕುಟುಂಬದಿಂದ ಬಂದಿಲ್ಲದ ಅಥವಾ ನಗರಗಳಲ್ಲಿ ನೌಕರಿ ಮಾಡುತ್ತಿರುವ ಯುವಕರು ಇಂದು ಕೃಷಿ ಬಗ್ಗೆ ಒಲವು ತೋರುವುದು ಹೆಚ್ಚುತ್ತಿದೆ. ಅವರಿಗೆ ಕೃಷಿ ಭೂಮಿ ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶ. ಆದರೆ, ಕಾಯ್ದೆ ತಿದ್ದುಪಡಿಯ ನಂತರ ಧನವಂತರು ಕೃಷಿ ಭೂಮಿ ಖರೀದಿಸಿ ಕ್ರಮೇಣ ಅದನ್ನು ರಿಯಲ್‌ ಎಸ್ಟೇಟ್‌ ಮುಂತಾದ ಅನ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವೂ ಇದೆ.

Follow Us:
Download App:
  • android
  • ios