ಬೈಕಾಟ್ ಚೀನಾ ಎಂಬ ಚಳವಳಿಯ ಮೂಲ ಚಿಂತಕ ಶಾಸ್ತಿಯವರೇ ನಮಗೆ ಬೇಕಾದನ್ನು ನಾವೇ ಉತ್ಪಾದಿಸೋಣ ಎಂದು ಕರೆ ಕೊಟ್ಟಿದಕ್ಕೆ ಆತ್ಮನಿರ್ಭರ ಭಾರತ ಕಲ್ಪನೆ ಅಮೃತ ಕಾಲದಲ್ಲಿ ಸ್ಪುಟಗೊಳ್ಳಲು ಸಾಧ್ಯವಾಯಿತು.

- ಕಿರಣಕುಮಾರ್ ವಿವೇಕವಂಶಿ

16 ವರ್ಷ ದಾಟಿದ ಯುವಕರು ತಕ್ಷಣವೇ ಶಾಲೆಗಳಿಂದ ಹೊರಬಂದು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ಇದು ನಿಮ್ಮ ಕರ್ತವ್ಯ, ಪ್ರತಿಯೊಬ್ಬರ ಧರ್ಮ, ಈಗ ನೀವು ಮಾಡಬೇಕಿರುವುದು ಐತಿಹಾಸಿಕ ಅವಶ್ಯಕತೆಯ ವಿಷಯ. ನಿಮ್ಮ ಹಿರಿಯರ ಅಭಿಪ್ರಾಯವನ್ನು ಕಡೆಗಣಿಸಿಯಾದರೂ ಕರ್ತವ್ಯ ಮಾಡಬೇಕು. ತಾಯಿ ಭಾರತಿಗೆ ನಿಮ್ಮ ಅವಶ್ಯಕತ ಹಿಂದೆಂದಿಗಿಂತಲೂ ಹೆಚ್ಚು ಇದೆ ಕೈ ಬಿಡಬೇಡಿ' ಎಂದು 1921ರ ಜನವರಿ, ಬನಾರಸ್‌ನ ಸಭೆಯೊಂದರಲ್ಲಿ ಗಾಂಧೀಜಿ ಭಾಷಣ ಕೇಳಿದ ಹುಡುಗ ತನ್ನ ಮೆಟ್ರಿಕ್ ಪರೀಕ್ಷೆ ನಿರಾಕರಿಸಿ 17ನೇ ವಯಸಿಗೆ ಭಾರತದ ಮುಕ್ತಿಗಾಗಿ ಹೋರಾಡಲು ಸ್ವಾತಂತ್ರ್ಯ ದೀಕ್ಷೆ ತೊಟ್ಟು ನಿಂತ, ಅವರೇ ಲಾಲ್ ಬಹಾದ್ದೂರ್! 

ಮುಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಅಸಹಕಾರ ಚಳವಳಿ ಮುಂಚೂಣಿ ಹುರಿಯಾಳಾಗಿ, ಜೆ.ಬಿ.ಕೃಪಲಾನಿ ತಂಡದ ಖಾದಿ ಪ್ರಚಾರಕರಾಗಿ, ಲಾಲಾ ಲಜಪತರಾಯರ ಲೋಕ ಸೇವಕ್ ಮಂಡಲ್‌ನ ಸ್ವಯಂ ಸೇವಕನಾಗಿ, ಕಾಂಗ್ರೆಸ್ಸಿನ ರಾಜಕಾರಣಿಯಾಗಿ, ನೆಹರೂ ಕ್ಯಾಬಿನೆಟ್ ಸಚಿವರಾಗಿ, ದೇಶದ 2ನೇ ಪ್ರಧಾನಿಯಾಗಿ, ಭಾರತ-ಪಾಕ್ ಸಮರ ನೇತಾರನಾಗಿ, ಜಗಕೆ ಶಾಂತಿದಾತರನಾಗಿ ದೇಶದ ಜನ-ಮನ ಗೆದ್ದರು. ಸತ್ಯವಂತಿಕೆ, ಕಾರ್ಯಶೀಲತೆ, ನಿಯಮ ಬದ್ಧತೆ, ಕರ್ತವ್ಯ ನಿಷ್ಠೆ ಸಂಯಮ, ದೃಢ ಮನಸ್ಸು, ಧೀರೋದಾತ್ತ ಚಿಂತನೆ, ಅಹಿಂಸಾ ಪಾಲನೆ, ತ್ಯಾಗಮಯಿ, ಸರಳ ವ್ಯಕ್ತಿತ್ವದ ಕಾರಾಣಕ್ಕೆ ಚಿರಸ್ಥಾಯಿಯಾದವರು. ಅಂದು ಸ್ವಾತಂತ್ರೋತ್ತರ ಭಾರತದ ಹೊಸ್ತಿಲಲ್ಲಿ ಶಾಸ್ತ್ರೀಜಿ ಹಾಕಿಕೊಟ್ಟ ಮಾರ್ಗ, ಪ್ರಧಾನಿಯಾಗಿದ್ದಾಗ ನೀಡಿದ ಚಿಂತನೆಗಳು ಇಂದಿನ ಅಮೃತ ಕಾಲದಲ್ಲೂ ಆಚರಿಸಲ್ಪಡುವ ಮೂಲ ಮಂತ್ರಗಳಾಗಿವೆ.

ಎಂಬಿಬಿಎಸ್‌ ಓದಿಲ್ಲದ ಬಾಪೂಜಿ ಸಮಾಜಕ್ಕೆ ಡಾಕ್ಟರ್, ಮನೋವಿಜ್ಞಾನಿ!

ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬನಾರಸ್ ವಿವಿ ಉಪನ್ಯಾಸಕ ರಾಗಿದ್ದ ಜೆ.ಬಿ.ಕೃಪಲಾನಿ ತ೦ಡದಲ್ಲಿ ಕೆಲಸ ಮಾಡಿದ್ದರಿಂದ ಪ್ರಧಾನಿಯಾದ ನಂತರ 'ಖಾದಿಯ ಒಂದು ತುಣುಕೂ ವ್ಯರ್ಥವಾಗ ಕೂಡದು, ಅದರಲ್ಲಿ ದೇಶದ ಪ್ರಜೆಯ ಶ್ರಮವಿದೆ' ಎಂದು ಸ್ವದೇಶಿ ಚಿಂತನೆಯ ಜಾಗೃತಿಗೆ ಮುನ್ನುಡಿ ಬರೆದರು. ಬೈಕಾಟ್ ಚೀನಾ ಎಂಬ ಚಳವಳಿಯ ಮೂಲ ಚಿಂತಕ ಶಾಸ್ತಿಯವರೇ ನಮಗೆ ಬೇಕಾದನ್ನು ನಾವೇ ಉತ್ಪಾದಿಸೋಣ ಎಂದು ಕರೆ ಕೊಟ್ಟಿದಕ್ಕೆ ಆತ್ಮನಿರ್ಭರ ಭಾರತ ಕಲ್ಪನೆ ಅಮೃತ ಕಾಲದಲ್ಲಿ ಸ್ಪುಟಗೊಳ್ಳಲು ಸಾಧ್ಯವಾಯಿತು.

ಸಾರಿಗೆ ಸಚಿವರಾಗಿದ್ದಾಗ ಮೊದಲ ಬಾರಿಗೆ ನಿರ್ವಾಹಕಿಯನ್ನು ನೇಮಕ ಮಾಡಿ ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದರು. ಅವರ ಆಲೋಚನೆಯ ಮುಂದುವರಿದ ಭಾಗವೇ ಇಂದಿನ ವಿಧಾನಸಭೆ-ಲೋಕಸಭೆಗಳಲ್ಲೂ ಹೆಣ್ಣುಮಕ್ಕಳಿಗೆ 33% ಮೀಸಲಾತಿ ನೀಡಬೇಕೆಂಬ ಮಸೂದೆಯ ಅಂಗೀಕಾರ.

ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ರೂಪ ದೊರೆತದ್ದೂ ಶಾಸ್ತ್ರಿಯವರ ಕಾಲಕ್ಕೆ 1952ರಲ್ಲಿ ರೈಲ್ವೆ ಮತ್ತು ಸಾರಿಗೆ ಮಂತ್ರಿಯಾದ ಅವರು, 1955ರಲ್ಲಿ ಚೆನೈನಲ್ಲಿ ಇಂಟಿಗ್ರಲ್ ಕೋಚ್‌ ಫ್ಯಾಕ್ಟರಿ ಆರಂಭಿಸಿ ಸ್ವದೇಶಿ ನಿರ್ಮಿತ ರೈಲ್ವೆ ಬೋಗಿಗಳನ್ನು ತಯಾರಿಸುವಂತೆ ಮಾಡಿದರು. 1956ರಲ್ಲಿ ಆಂಧ್ರದ ರೈಲು ದುರಂತ, ಅರಿಯಲೂರು ದುರಂತಕ್ಕೆ ನೈತಿಕ ಹೊಣೆ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರಕ್ಕೆ ಅಂಟಿಕೊಳ್ಳದೆ ನೀತಿವಂತ ರಾಜಕಾರಣಿ ಎನಿಸಿಕೊಂಡರು. 1957ರ ಚುನಾವಣೆಯಲ್ಲಿ ಗೆದ್ದು ಮತ್ತೆ ಸಾರಿಗೆ ಸಂಪರ್ಕ ಖಾತೆ ಸಚಿವರಾಗಿ ಹಡಗಿನಲ್ಲಿ ಸರಕು ಸಾಗಣೆ ಉತ್ತೇಜಿಸಿ, 'ನೌಕಾಭಿವೃದ್ಧಿ ನಿಧಿ' ಸ್ಥಾಪಿಸಿ ನೌಕಾ ನಿಲ್ದಾಣಕ್ಕೆ ಒತ್ತು ನೀಡಿದರು. ಹೀಗಾಗಿಯೇ ಭಾರತವೆಂದು ಸ್ವಸಾಮರ್ಥ್ಯದಿಂದ ಐಎನ್‌ಎಸ್ ವಿಕ್ರಾಂತ್, ನೀಲಗಿರಿ, ಹಿಮಗಿರಿಯಂಥ ಯುದ್ಧನೌಕ ತಯಾರಿಸಲು ಸಾಧ್ಯವಾಗಿದೆ. ಈಗಿನ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯನ್ನು 1961ರಲ್ಲಿಯೇ ಶಾಸ್ತ್ರೀಜಿ 'ಭಾರತವು ವಿವಿಧ ಧರ್ಮ, ಭಾಷೆಗಳ ಜನರ ಕಲಬೆರಕೆಯಲ್ಲ, ಸಾಮರಸ್ಯದಿಂದ ಒಂದುಗೂಡಿದ ಜನರ ಏಕ ರಾಷ್ಟ್ರ' ಎಂಬ ಸಂದೇಶವನ್ನು ರಾಷ್ಟ್ರೀಯ ಐಕ್ಯತಾ ಸಮಾವೇಶದ ಮೂಲಕ ಇಡೀ ದೇಶಕ್ಕೆ ನೀಡಿದ್ದರು. ಇವತ್ತು ನಾವು ಬಳಸುತ್ತಿರುವ ತ್ರಿಭಾಷಾ ಸೂತ್ರಕ್ಕೂ ಅಂದಿನ 'ಶಾಸ್ತ್ರಿ ಸೂತ್ರವೇ' ಮೂಲ, ಈ ನಿಯಮ ಸರಿಯಾಗಿ ಪಾಲಿಸಿದಲ್ಲಿ ಹಿಂದಿ ಹೇರಿಕೆ, ಪ್ರಾದೇಶಿಕ ಅಸಮಾನತೆ, ತಾರತಮ್ಯ ಎಂಬ ಪದ ಕೇಳಲು ಅಸಾಧ್ಯವಾದೀತು.

ಶಾಸ್ತ್ರೀಜಿ ಪ್ರಧಾನಿಯಾದಾಗ ದೇಶದಲ್ಲಿ ಆಹಾರ ಧಾನ್ಯಗಳ ಬಿಕ್ಕಟ್ಟು ಎದುರಾಗಿ 'ಹಸಿರು ಕ್ರಾಂತಿ'ಗೆ ಕರೆಕೊಟ್ಟರು. ತತ್ಪರಿಣಾಮ 1963ರಲ್ಲಿ 8.05 ಲಕ್ಷ ಟನ್ ಗೋಧಿ ಆಮದು ಮಾಡಿಕೊಳ್ಳುತ್ತಿದ್ದ ಭಾರತವಿಂದು ಜಗತ್ತಿಗೆ ಧಾನ್ಯ ರಫ್ತುದಾರನಾಗಲು ಸಾಧ್ಯವಾಗಿದೆ.

`ಅಮುಲ್: ದಿ ಟೇಸ್ಟ್ ಆಫ್ ಇಂಡಿಯಾ' ಈಗ ಪರಿಚಿತ ಘೋಷಣೆ. ಆದರೆ ಒಮ್ಮೆ ರಿವೈಂಡ್ ಮಾಡೋಣ. ಶಾಸ್ತ್ರಿಯವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಹಾಲಿನ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಿಸಲು ರಾಷ್ಟ್ರೀಯ ಅಭಿಯಾನ ಕೈಗೊಂಡರು. ಭಾರತವು ಹಾಲಿನ ಆಮದು ದೇಶದಿಂದ ರಫ್ತರನತ್ತ ಸಾಗಿ, ಭಾರತದಲ್ಲಿ ಕ್ಷೀರ ಕ್ರಾಂತಿಯಾಗಲು ಕಾರಣವಾಯಿತು.

1965ರ ಸೆ.1ರಂದು ಕಾಶ್ಮೀರಕ್ಕಾಗಿ ಪಾಕಿಸ್ತಾನವೇ ದೇಶದ ಮೇಲೆ ಎರಗಿ ಬಂದಾಗ ದಿಟ್ಟ ಉತ್ತರ ಕೊಡುವಲ್ಲಿ ಸೇನೆಗೆ ನೈತಿಕ ಬಲವಾಗಿ ನಿಂತಿದ್ದು ಅಂದಿನ ಪ್ರಧಾನಿ ಶಾಸ್ತ್ರೀಜಿ. ಸ್ವತಃ ರಣಾಂಗಣಕ್ಕೆ ಬಂದು ಸೈನ್ಯಕ್ಕೆ ಧೈರ್ಯ ತುಂಬಿದ್ದರು. ಅಗತ್ಯಬಿದ್ದರೆ ಲಾಹೋರ್ ಗೂ ನುಗ್ಗಿ ಎನ್ನುವ ಮೂಲಕ 'ಇದು ಹೊಸ ಭಾರತ, ನಮ್ಮ ತಂಟೆಗೆ ಬಂದರೆ ಮನೆಗೆ ನುಗ್ಗಲೂ ಸಿದ್ಧ ಮತ್ತು ಹೊಡೆದುರುಳಿಸಲೂ ಬದ್ಧ ಎಂದು ಜಗತ್ತಿಗೆ ಸೂಕ್ಷ್ಮ ಸಂದೇಶ ನೀಡಿದ್ದರು. ಇಂದು ಭಾರತ ನಡೆಸುತ್ತಿರುವ ಸರ್ಜಿಕಲ್‌ ಸ್ಟೈಕ್‌ನ ಮೂಲ ಪ್ರೇರಣೆ ಲಾಹೋರ್‌ ಗೆ ನುಗ್ಗಲು ಹೇಳಿದ ಶಾಸ್ತ್ರೀಯವರೇ. 

ಜಪಾನ್ ರೀತಿ 14 ನಿಮಿಷದಲ್ಲೇ ವಂದೇ ಭಾರತ್ ರೈಲು ಸ್ವಚ್ಛಗೊಳಿಸಿದ ಸಿಬ್ಬಂದಿ!

ಹೊಸ ಚಿಗುರು ಹಳೆ ಬೇರು ಕೂಡಿರಲು ಮರವು ಸೊಬಗು ಎಂಬ ಡಿವಿಜಿ ಕಗ್ಗದಂತೆ ಹಳೆಯ ಬೇರಾದ ಭಾರತದ ಸರ್ವಾ೦ಗೀಣ ಬೆಳವಣಿಗೆಗೆ ಕಾರಣೀಭೂತರು ಹೊಸ ಚಿಗುರಾದ ಬಹಾದ್ದೂರ್ ಶಾಸ್ತ್ರಿ, ಅಮೃತಕಾಲದ ಭಾರತಕ್ಕೆ ಅಂದು ಅವರು ಹಾಕಿಕೊಟ್ಟ ನೀಲನಕ್ಷೆಯನ್ನು ದೇಶ ಇಂದಿಗೂ ಪಾಲಿಸುತ್ತಿವೆ.