ಬೆಳಗಾವಿಯತ್ತ ಸಂಚರಿಸುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರ ಕಾರಿಗೆ ಅಪಘಾತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ಮೂರು ತಿಂಗಳಲ್ಲಿ ಆರೋಪಿಯನ್ನು ಬಂಧಿಸಿದ ಬೆಳಗಾವಿ ಪೊಲೀಸರಿಗೆ ಸಚಿವೆ ಅಭಿನಂದನೆ ಸಲ್ಲಿಸಿದ್ದಾರೆ. 

ಬೆಳಗಾವಿ (ಏ.20): ಬೆಳಗಾವಿಯತ್ತ ಸಂಚರಿಸುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರ ಕಾರಿಗೆ ಅಪಘಾತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ಮೂರು ತಿಂಗಳಲ್ಲಿ ಆರೋಪಿಯನ್ನು ಬಂಧಿಸಿದ ಬೆಳಗಾವಿ ಪೊಲೀಸರಿಗೆ ಸಚಿವೆ ಅಭಿನಂದನೆ ಸಲ್ಲಿಸಿದ್ದಾರೆ. 

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ನಿದ್ದೆಗಣ್ಣಿನಲ್ಲಿ ಇದ್ದೆ, ಆರೋಪಿ ಬಂದು ಅಪಘಾತ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಹಿಡಿಯುತ್ತಾರೆಂದು ನನಗೆ ಅನಿಸಿರಲಿಲ್ಲ. ಕಲರ್ ಮ್ಯಾಚ್‌ಗಾಗಿ ಎಫ್‌ಎಸ್‌ಎಲ್‌ಗೆ ಹೋಗಿದ್ದರು. ಹಿಟ್ ಅಂಡ್ ರನ್ ಕೇಸ್‌ಗಳು ಬಹುತೇಕ ಪತ್ತೆಯಾಗುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಧನ್ಯವಾದ' ಎಂದರು.

ಜಾತಿ ಗಣತಿ: ಸಂಪುಟದಲ್ಲಿ ಚರ್ಚೆ, ತೀರ್ಮಾನ ಅಪೂರ್ಣ:
ರಾಜ್ಯದಲ್ಲಿ ಜಾತಿ ಗಣತಿ ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆಯಾದರೂ, ತೀರ್ಮಾನ ಅಪೂರ್ಣವಾಗಿದೆ ಎಂದ ಅವರು, 'ಸಂಪುಟದಲ್ಲಿ ಯಾರೂ ವಿರೋಧಿಸಿಲ್ಲ, ಆದರೆ ಚರ್ಚೆ ಪೂರ್ಣಗೊಂಡಿಲ್ಲ. ಪೂರ್ಣ ಚರ್ಚೆಯ ಬಳಿಕವೇ ಪ್ರತಿಕ್ರಿಯೆ ನೀಡುವೆ. ಅವೈಜ್ಞಾನಿಕ ಎಂಬ ಆರೋಪಕ್ಕೆ ಈಗ ಪ್ರತಿಕ್ರಿಯಿಸುವುದಿಲ್ಲ' ಎಂದರು. ಜಾತಿ ಗಣತಿಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧ್ಯಯನ ಮಾಡಲಾಗಿದ್ದು, ಆಯೋಗದ ಸದಸ್ಯರನ್ನು ಕುಮಾರಸ್ವಾಮಿ ಮತ್ತು ಬೊಮ್ಮಾಯಿ ನೇಮಕ ಮಾಡಿದ್ದರು. 'ಲೋಪದೋಷವಿದ್ದರೆ ಒಪ್ಪಿಕೊಳ್ಳೋಣ, ಆದರೆ ಎಲ್ಲಿ ಲೋಪವಿದೆ ಎಂದು ಸ್ಪಷ್ಟವಾಗಿಲ್ಲ' ಎಂದು ಹೇಳಿದರು.

ಇದನ್ನೂ ಓದಿ: 'ಇನ್ನೊಮ್ಮೆ ಗಣತಿ ಮಾಡಿ..' ಜಾತಿ ಗಣತಿ ಸರಿಯಿದೆ ಎಂದ ಸರ್ಕಾರದ ವಿರುದ್ಧ ಸಚಿವೆಯೇ ಆಕ್ಷೇಪ!

ಸಿಇಟಿ ಜನಿವಾರ ವಿವಾದ ಹೆಬ್ಬಾಳ್ಕರ್ ಪ್ರತಿಕ್ರಿಯೆ:
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿ, ಸಚಿವೆ ಖಂಡನೆ ವ್ಯಕ್ತಪಡಿಸಿದ್ದಾರೆ. 'ಇಂತಹ ಘಟನೆಗಳು ಆಗಬಾರದಿತ್ತು, ಇದು ತಪ್ಪು' ಎಂದು ತಿಳಿಸಿದ್ದಾರೆ. ಇದೇ ವೇಳೆ ಶಿವಾನಂದ ಪಾಟೀಲ್ ಮತ್ತು ಎಂಬಿಪಿ ನಡುವೆ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಸಚಿವೆ, ಅವರ ನಡುವೆ ಯಾವುದೇ ವಾದ-ವಿವಾದ ನಡೆದಿಲ್ಲ ಎಂದು ತಿಳಿಸಿದರು.

ದನ್ನೂ ಓದಿ: ಈಗಾಗಲೇ ಜಾತಿ ಗಣತಿ ವರದಿಗೆ ಒಕ್ಕಲಿಗ ಸಮುದಾಯ ಅಪಸ್ವರ

ಮುಸ್ಲಿಂ ಸಮುದಾಯದ ಬಗ್ಗೆ ಹೇಳಿದ್ದೇನು?

ಮುಸ್ಲಿಂ ಸಮುದಾಯದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು ಆ ಸಮುದಾಯದ ಬಗ್ಗೆ ಚರ್ಚೆ ನಡೆದಿಲ್ಲ. ಯಾವುದೇ ಸಮಾಜಕ್ಕೆ ಹಾನಿಯಾಗದಂತೆ, ಎಲ್ಲರಿಗೂ ನ್ಯಾಯ ಕೊಡಿಸುವುದು ಸರ್ಕಾರದ ಉದ್ದೇಶ ಎಂದರು. ಜಾತಿ ಗಣತಿ ವಿಚಾರದಲ್ಲಿ ಸಂಪುಟದ ಚರ್ಚೆ ಮುಂದುವರಿಯಲಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಗಾಗಿ ಕಾಯುವಂತೆ ಸೂಚಿಸಿದರು.