*   ಕಳೆದ ವರ್ಷ ರಾಜಸ್ವ ಸ್ವೀಕೃತಿ 10.67% ಇಳಿಕೆ: ಸಿಎಜಿ ವರದಿ*   ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಕುಸಿತದ ಪರಿಣಾಮ*   ಸುಮಾರು 15 ವರ್ಷಗಳ ಬಳಿಕ ರಾಜ್ಯವು ರಾಜಸ್ವ ಕೊರತೆ ಕಂಡಿದೆ  

ಬೆಂಗಳೂರು(ಮಾ.24): 2004-05ರಿಂದ ರಾಜಸ್ವ ಹೆಚ್ಚುವರಿಯನ್ನು ದಾಖಲಿಸಿದ ರಾಜ್ಯವು 2020-21ರಲ್ಲಿ ಮೊದಲ ಬಾರಿಗೆ ರಾಜಸ್ವ ಕೊರತೆಯನ್ನು ಕಂಡಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರವು(Government of Karnataka) ತನ್ನ ರಾಜಸ್ವ ಸ್ವೀಕೃತಿಯಲ್ಲಿ ಶೇ.10.67ರಷ್ಟು ಇಳಿಕೆ ದಾಖಲಿಸಿದೆ. ಈ ಅಂಶವನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (CAG) ವರದಿ ತಿಳಿಸಿದೆ.

ಬುಧವಾರ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ಅವರು ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು.

GST Compensation: ಕರ್ನಾಟಕಕ್ಕೆ 12,909 ಕೋಟಿ GST ಬಾಕಿ: ಸಿಎಂ ಬೊಮ್ಮಾಯಿ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೇಂದ್ರ ತೆರಿಗೆಗಳು(Tax) ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು ಮತ್ತು ಕೇಂದ್ರ ಸರ್ಕಾರದಿಂದ ಸಹಾಯಾನುದಾನವು ಕ್ರಮವಾಗಿ ಶೇ.29.84 ಮತ್ತು ಶೇ.12.77ರಷ್ಟು ಕಡಿಮೆಯಾಗಿದೆ. ರಾಜ್ಯದ ತೆರಿಗೆ ರಾಜಸ್ವದ ಅನುಪಾತವು 2016-17ರಲ್ಲಿದ್ದ ಶೇ.6.87ರಿಂದ 2020-21ರಲ್ಲಿ ಶೇ.5.38ಕ್ಕೆ ಇಳಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ರಾಜ್ಯದ(Karnataka) ಸ್ವಂತ ತೆರಿಗೆ ರಾಜಸ್ವವು 5.311 ಕೋಟಿ ರು.ಗಳಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ವಿತ್ತೀಯ ನಿರ್ವಹಣಾ ಸುಧಾರಣಾ ಸಮಿತಿಯು ಶಿಫಾರಸು ಮಾಡಿದ ಬಳಕೆದಾರರ ಶುಲ್ಕಗಳು ಮತ್ತು ನಿಯಮಿತ ಮತ್ತು ನಿಯತಕಾಲಿಕ ಮೇಲ್ವಿಚಾರಣೆಯ ಮೂಲಕ ತೆರಿಗೆಯೇತರ ಆದಾಯಗಳಿಗೆ ಗಮನಾರ್ಹವಾದ ಪರಿಷ್ಕರಣೆಯ ಅಗತ್ಯವಿದೆ. ಶೇ.85ರಷ್ಟು ರಾಜಸ್ವ ವೆಚ್ಚ ಸಂಬಳ, ಬಡ್ಡಿ ಪಾವತಿಗಳು, ಪಿಂಚಣಿಗಳು, ಸಹಾಯಧನ, ಸಹಾಯನುದಾನ ಮತ್ತು ಹಣಕಾಸಿನ ನೆರವು, ಆಡಳಿತಾತ್ಮಕ ವೆಚ್ಚಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮುಂತಾದವುಗಳ ಮೇಲಿನ ಬದ್ಧ ವೆಚ್ಚವನ್ನು ಒಳಗೊಂಡಿದೆ. ಹೀಗಾಗಿ ವೇತನ, ಪಿಂಚಣಿ ಮತ್ತು ಬಡ್ಡಿಯ ವೆಚ್ಚಗಳು ಹೆಚ್ಚಾಗಿರುವುದರಿಂದ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಸ್ಥಿರವಾಗಿ ಹೆಚ್ಚುತ್ತಿರುವ ಸಹಾಯಧನ, ಸಹಾಯನುದಾನದ ಮೇಲಿನ ವೆಚ್ಚಗಳು ಮುಂತಾದವುಗಳ ಮೇಲೆ, ಫಲಾನುಭವಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಸಲಹೆ ನೀಡಿದೆ.

GST Council Meeting ಜಿಎಸ್‌ಟಿ ಕನಿಷ್ಠ ದರ ಶೇ.8ಕ್ಕೇರಿಕೆ?

ಪ್ರಸಕ್ತ ಹಣಕಾಸು ವರ್ಷದಲ್ಲಿ(Financial Year) ಒಟ್ಟು ವೆಚ್ಚದಲ್ಲಿ ಬಂಡವಾಳ(Investment) ವೆಚ್ಚದ ಪಾಲು ಶೇ.21 ರಷ್ಟಿತ್ತು. 2020-21ರ ಅಂತ್ಯದ ವೇಳೆಗೆ ಒಟ್ಟು 3,628 ಕೋಟಿ ರು. ಮೊತ್ತವನ್ನು ಅಪೂರ್ಣ ಯೋಜನೆಗಳಲ್ಲಿ ತೊಡಗಿಸಲಾಗಿದೆ. ರಾಜ್ಯ ಸರ್ಕಾರವು ಅಪೂರ್ಣ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕು. ರಾಜ್ಯ ಸರ್ಕಾರವು ಭಾರಿ ನಷ್ಟವನ್ನು ಅನುಭವಿಸುತ್ತಿರುವ ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳ ಕೆಲಸವನ್ನು ಪರಿಶೀಲಿಸಬೇಕು ಮತ್ತು ಹೂಡಿಕೆ, ಪುನಶ್ಚೇತನ, ಮುಚ್ಚುವಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಸಿರು ತೆರಿಗೆಯಡಿ ಸಂಗ್ರಹವಾದ 10.86 ಕೋಟಿ ರು. ಮತ್ತು ರಸ್ತೆ ಸುರಕ್ಷತೆ ತೆರಿಗೆಗಳಡಿ ಸಂಗ್ರಹವಾದ 87.65 ಕೋಟಿ ರು. ಮೊತ್ತವನ್ನು ನಿಧಿ ಲೆಕ್ಕಕ್ಕೆ ವರ್ಗಾಯಿಸಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಮೀಸಲು ನಿಧಿಗಳ ನಿರ್ವಹಣೆ ಮತ್ತು ಹೂಡಿಕೆಗಳ ಮಾದರಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಗತ್ಯ ಇದೆ ಎಂದು ಸಿಎಜಿ ವರದಿಯು ಅಭಿಪ್ರಾಯಪಟ್ಟಿದೆ.

ಬಳಕೆಯಾಗದೆ ಉಳಿದಿರುವ ಅನುದಾನವು(Grant) ಪೋಲಾಗದಂತೆ ತಪ್ಪಿಸಲು ಎಲ್ಲಾ ಇಲಾಖೆಗಳಲ್ಲಿ ಅನುದಾನದ ನಿಯಂತ್ರಣವನ್ನು ಬಲಪಡಿಸಬೇಕು. 2012-13ರಿಂದ ಆಗಿರುವ ಹೆಚ್ಚುವರಿ ವೆಚ್ವವನ್ನು ಕ್ರಮಬದ್ಧಗೊಳಿಸಲು ಆದ್ಯತೆ ನೀಡಬೇಕು. ಆರ್ಥಿಕ ಸಂಹಿತೆಯ ನಿಬಂಧನೆಗಳಿಗೆ ಅನುಗುಣವಾಗಿ ಪುನರ್ವಿನಿಯೋಗ ಆದೇಶಗಳನ್ನು ನೀಡಬೇಕು. ಹಿಂದಿನ ಹಣಕಾಸು ಆಯೋಗದ ಬಳಕೆಯಾಗದ ಮೊತ್ತಗಳು, ಯೋಜನೆಗಳು ಇತ್ಯಾದಿ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿದಿರುವ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗಿದೆ ತಿಳಿಸಿದೆ.